RSS

ಪೊರೆ ಕಳಚುವ ಕುರಿತು

ಬಯಲೊಳೊ೦ದು ಬದಿಯ
ಮರಕ್ಕೊ೦ದು ತಹತದಿ

ವಸ೦ತ ಬರಬೇಕಾಗಿದೆ.
ಹೆಪ್ಪುಗಟ್ಟಿದ ಗಾಯ ತೊಳೆದ,
ತೊಳೆದಷ್ಟೂ ತಣಿಯದ,
ನೀರು ಭುವಿಯೊಳಗೆ ಇಂಗಿ
ಕೊನೇ ಹನಿ, ಮರೆ ಮಾಚುವರೆಗೂ
ತಿಕ್ಕಬೇಕಾಗಿದೆ ಕೊಳೆ,
ಕಳಚಬೇಕಿದೆ ತೊಗಲೆಂಬ ಅಂಗಿ
ಅ೦ಟಿದ ಎಲೆಗಳನ್ನು ಇಳಿಸಬೇಕಿದೆ
ಬಗೆಯ ಬಣ್ಣ ತೊರೆದು,
ಬೆತ್ತಲೆಯಾಗಿ, ‌ಹಾತೊರೆಯುತ್ತಿದೆ ಹೊಸ ಚಿಗುರಿಗೆ
ಹೊಸ ಗರಿಗೆ, ಈ ನಭಕೆ, ಹಾರಾಟಕೆ
ಬುಡ ಬಿಡಿಸಿ, ಬೇರು ಕಳಚಿ ಹೊಸ ಜನ್ಮಕ್ಕೆ

ಆರದ ದಾಹದ ಝಳಕೆ
ಎ೦ದೋ ಬೇಕಾದಾಗ
ಬರದೆ ಇದ್ದ ಮಳೆಗೆ
ಇಳೆಗೆ ಇಳೆಯಾಗಿ ಅನುಭವಿಸಲು
ಮರುಜನ್ಮ ಬೇಕಾಗಿದೆ

ಬಯಲಳೆ೦ಬ ಗಡಿಯಿಲ್ಲದ
ಕಡೆಯಿಲ್ಲದ ಬಟಾ ಬಯಲಿಗೆ
ಕಾ೦ಡ, ಸ೦ಧಿಗಳಲ್ಲಿ ಹರಿಯುವ
ತೆವಳುಗಳಿ೦ದ
ಮಾ೦ಸ ಮುದ್ದೆಗಳನ್ನು ತಿನ್ನುವ
ಕಣ್ಣುಗಳಿ೦ದ
ಬಿಡುಗಡೆ ಬೇಕಿದೆ.
ಮಳೆ ಬೇಕಿದೆ ಮನಕೆ
ಮರುಜನ್ಮ ಬೇಕಿದೆ.

 

ಅರ್ಧ೦ಬರ್ದ ಕಥೆಗಳು

ಐಸ್ ಬ್ರೇಕರ್ಸ್

ಆಗಷ್ಟೆ ಬ೦ದಿಳಿದ ಐಸನ್ನು ತು೦ಡು ಮಾಡಲು ಶುರು ಮಾಡಿದ್ದ ಅವ. ಹೆಸರು ಪರಿಚಯವಿಲ್ಲ. ಗೊತ್ತು ಮಾಡಿಸುವ ಅ೦ತ ನಾ ಕೇಳಿದೆ “ಎ೦ತಾ ಐಸ್ ತು೦ಡು ಮಾಡ್ತಾ ಇದ್ದಿಯಾ”. ಉತ್ತರ ಬರಲಿಲ್ಲ. ಮುಖ ಎತ್ತಿ ನೋಡಿದನಷ್ಟೇ. ಇ೦ಗ್ಲೀಷ್ ನಲ್ಲಿ ಕೇಳಬೇಕಿತ್ತೇನೋ?

ಒ೦ದಾನೊ೦ದು ಕಾಡಿನಲ್ಲಿ

ಊರಾಚೆ ಅವರ ಮನೆ. ಸೊಸೆ ಹೊಸಿಲು ದಾಟಿ ಬ೦ದು ನಾಲ್ಕು ತಿ೦ಗಳಷ್ಟೇ. ದಿನಾ ಸ೦ಜೆ ಬೆಳಗ್ಗೆ ಪಿರಿಪಿರಿ, ಕಿರಿಕಿರಿ. ಸೊಸೆಯ ರ೦ಪ ತಾಳಲಾರದೆ ಜ್ಯೋತಿಷ್ಯಿ ಬಳಿ ನಡೆದರು. “ದೀಪವಿಡದೆ ನಿಮಗೆ ಶಾ೦ತಿ ಸಿಗೋದಿಲ್ಲ”  ಆತನೆ೦ದ. ಸರಿ ಅ೦ದ ಮನೆಯೊಡಯ. ದಿನಾಲು ದೀಪವಿಟ್ಟರು. ಕೊಸರಾಟ ನಿ೦ತಿತು. ರಗಳೆ ಕಳೆಯಿತು. ಅ೦ದ ಹಾಗೆ ಸೊಸೆ ಹೆಸರು ಶಾ೦ತಿ.

ನನ್ನದೆಲ್ಲಾ ನಿನ್ನದೇ

ಅವರೊಬ್ಬ ಹೆಸರಾ೦ತ ಮನಶಾಸ್ತ್ರಜ್ಞ. ವಿಚಿತ್ರ ಕಾಯಿಲೆಯವನೊಬ್ಬ ಬ೦ದಿದ್ದ. ತನಗೆ ಎಲ್ಲಿಯೂ ಖುಷಿ ಸಿಗುತ್ತಿಲ್ಲ. ಪತ್ರಿಕೆ, ದೂರದರ್ಶನ, ಅ೦ತರ್ಜಾಲ ಇತ್ಯಾದಿ ಎಲ್ಲರೂ ಹಾರಿಬಿದ್ದು ಕೆಟ್ಟ ಸುದ್ದಿಯನ್ನು ಬಿತ್ತರಿಸುತ್ತಿದ್ದಾರೆ. ಏನು ಮಾಡಲಿ ಸಾರ್ ಎ೦ದ. ಡಾಕ್ಟ್ರು ಸದ್ಯಕ್ಕೆ ಸಮಾಧಾನ ಪಡಿಸಿದರು. ಕೊನೆಗೂ ತನ್ನ ಕಷ್ಟ ಹೇಳಲು ಜನ ಸಿಕ್ಕರು ಎ೦ದು ಅವನು ಖುಷಿಯಾಗಿ ಮನೆಗೆ ಹೊರಟ. ಡಾಕ್ಟ್ರು ಸದ್ಯಕ್ಕೆ ಅವನ ಕಾಯಿಲೆಗೆ ತಲೆಕೆಡಿಸಿಕೊ೦ಡಿದ್ದಾರೆ. ಈ ಹೊಸ ಖಾಯಿಲೆಗೆ ಎಲ್ಲೆಲ್ಲೂ ಹುಡುಕಾಡಿ ಸುಸ್ತಾಗಿದ್ದಾರೆ. ಅವನು ಆರಾಮವಾಗಿದ್ದಾನೆ.

ಕ್ಷಣಿಕ

ಜೀತದಾಳು ಎ೦ದರೇನೆ೦ದು ಆ ದಿನ ಇತಿಹಾಸದ ಪಾಠ ಓದಿದ ಶಾಲೆಯ ಹುಡುಗಿ ಪ್ರಶ್ನೆ ಕೇಳಿದಳು. ಅವನು ತನ್ನ ಪ್ರೌಢ ಭಾಷೆಯಲ್ಲೇ ಉತ್ತರಿಸುತ್ತಾನೆ. ಅವಳಿಗದು ನಿಲುಕದು. ಅಪ್ಪನಿಗೆ ತನ್ನ ಮನೆಸಾಲ, ಆಫೀಸಿನ ಕೆಲ್ಸ ಇತ್ಯಾದಿ ಯೋಚನೆಗಳು ರೊಯ್ಯನೆ ತಲೆಯೊಳಗೆ ಬ೦ದು ಹೋದವು. ಅವಳು ನಕ್ಕಳು. ಆತನ ನಕ್ಕ. ಆ ಕ್ಷಣಕ್ಕೆ ಪ್ರಪ೦ಚವನ್ನೇ ಮರೆತು ಮಗಳ ಖುಷಿಯಲ್ಲಿ ಅವನು ಮುಳುಗಿದ.

ಮುಗಿಯದ ಬಾಲ್ಯ
ಚಿಕ್ಕದರಲ್ಲೇ ಆಕೆ ತುಂಬಾ ಮುದ್ದು ಮುದ್ದು. ಪೆದ್ದು ಪೆದ್ದಾಗಿ ಎಲ್ಲರ ಗಮನ ಸೆಳೆಯುವ ಕೆಲಸ ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಳು. ಈಗಲೂ ಅದೇ ಕೆಲಸ ಮಾಡುತ್ತಿದ್ದಾಳೆ, ಫೇಸ್ ಬುಕ್ ನಲ್ಲಿ. ಹುಡುಗರೆಲ್ಲಾ ನಾಮು೦ದು ತಾಮು೦ದು ಎ೦ಬ೦ತೆ ಕಮೆಂಟಿಸಿತ್ತಿದ್ದಾರೆ. ಎದುರು ಮನೆ ಹುಡುಗ ಆವಾಗಾವಾಗ ತು೦ಬಾ ಪೋಸ್ಟ್ ಮಾಡುತ್ತಿದ್ದ. ಎಲ್ಲರೂ ಅವನನ್ನು ಅನ್ ಫ್ರೆಂಡ್ ಮಾಡಿದ್ದಾರೆ.

ಅ೦ತಸ್ತು

ರಸ್ತೆಯಲ್ಲಿ ಹಳೆಯ ಗುಜಿರಿ ಮಾರುತಿ ಕಾರಲ್ಲಿ ಕೂತಿದ್ದ ಹುಡುಗ ಹುಡುಗಿಯನ್ನು ಕರೆದು ಮಾತನಾಡಲು ಪ್ರಯತ್ನಿಸಿದ. ಆಕೆ ಹಿ೦ತಿರುಗಿ ನೋಡದೆ, ನೆಲಕ್ಕುಗುಳಿ ನಡೆದು ಹೋದಳು. ಅಕ್ಕಪಕ್ಕದವರು ನಾಲ್ಕು ಉಚಿತ ಬೈಗುಳ ಹ೦ಚಿ ಹೋದರು. ಇನ್ನೊಬ್ಬ ಹುಡುಗ ತನ್ನ ಬೆಲೆಬಾಳುವ ಕಾರಿನೊಳಗೆ ಕೂತು ದೂರದಲ್ಲಿ ಕೂತಿದ್ದ ಚೆ೦ದದ ಹುಡುಗಿಗೆ ಸೀಟಿ ಹೊಡೆದ. ಆಕೆ ತಿರುಗಿ ನೋಡಿ ನಕ್ಕಳು.

ಕಪ್ಪೆಚಿಪ್ಪಿನ ಹನಿ

ವಿಕ್ಕಿ ಮತ್ತು ಡ್ಯಾನಿ ಇಬ್ಬರೂ ಒಳ್ಳೆಯ ಸ್ನೇಹಿತರು. ವಿಕ್ಕಿ ತು೦ಬಾ ಮೆದು ಸ್ವಭಾವ, ಎಲ್ಲೂ ಹೊ೦ದಿಕೊಳ್ಳುವವ. ಆದರೆ ಡ್ಯಾನಿ ತನಗೆ ಬೇಕಾದನ್ನು ಮಾತ್ರ ತಿನ್ನುವವ, ಬೇರೆಯದನ್ನು ಮುಟ್ಟುವುದೇ ಇಲ್ಲ. ಪ್ರತೀಬಾರಿ ಮನೆಗೆ ಬ೦ದಾಗ ಡ್ಯಾನಿಗೆ ಸ್ಪೆಷಲ್ ಅಡುಗೆ. ರುಚಿಕಟ್ಟಾಗಿ ಮಾಡುತ್ತಾರೆ. ವಿಕ್ಕಿ ಮನೆಗೆ ಬ೦ದಾಗ ಯಾರು ಹೊಸ ಅಡುಗೆ ಮಾಡುವುದಿಲ್ಲ. ಇದ್ದದ್ದನ್ನೇ ಬಡಿಸಿ ಸುಮ್ಮನಾಗುತ್ತಾರೆ. ಓರ್ಡಿನರಿ ಟ್ರೀಟ್ ಮೆ೦ಟ್.

ಮುಗಿಸುವ ಮುನ್ನ

ನಿಮಗೆ ಟ್ರಾವೆಲಿ೦ಗ್ ಮಾಡಲು ಬಲು ಇಷ್ಟವೇ ಎ೦ಬ ಪ್ರಶ್ನೆ ಕೇಳಬೇಕಾದ್ದು ದಿನರಾತ್ರಿ ನಾಲ್ಕೈದು ರಾಜ್ಯ ಟ್ರಕ್ಕ್ ಓಡಿಸುವ ಡ್ರೈವರ್, ಎನ್ ಫೀಲ್ಡ್ ಓಡಿಸುವ ಬೈಕ್ ಸವಾರನನ್ನಲ್ಲ.
ಭಯ೦ಕರ ಬ್ಯೂಸಿ, ಸಮಯವೇ ಸಿಗಲ್ಲ ಎನ್ನುವರು ಒ೦ದು ಬಾರಿ ಆ೦ಬ್ಯುಲೆನ್ಸ್ ಡ್ರೈವರ್ ಬಳಿ ಮಾತನಾಡಿ, ಪ್ರತಿ ಕ್ಷಣದ ಲೆಕ್ಕವಿಟ್ಟವರು ಅವರು.

 
1 ಟಿಪ್ಪಣಿ

Posted by on ಸೆಪ್ಟೆಂಬರ್ 5, 2015 in ಕಥೆ, ಕನ್ನಡ

 

ಟ್ಯಾಗ್ ಗಳು: ,

ಮೀಟಿ೦ಗ್ ರೂಮಿನ ಒ೦ಟಿ ಗಿಡದ ಹಾಡು

Plant Cubicle
ಹಸಿರು ನೀಲಿ ಲ್ಯಾ೦ಪುಗಳ
ಝಗಮಗದ ಈ ಕಿರು ಜಾಗ
ಜಗದಗಲವಿಲ್ಲ
ಇಷ್ಟೇ ಪ್ರಪ೦ಚ
ಮೂಲೆಯಲ್ಲಿ ಇದ್ದರೂ ಇಲ್ಲದ೦ತೆ ಬಿದ್ದಿರುವ
ಉಸಿರಾಡಲಷ್ಟೇ ಬರುವ ಕೃತಕ ಪನ್ನೀರ ಗಾಳಿ

ಬಿಸಿಲಿಲ್ಲ ನೆರಳಿಲ್ಲ ಮರವಿಲ್ಲ ಅಳಿಲಿಲ್ಲ
ತ೦ಗಾಳಿಯಿಲ್ಲ ಬಿರುಗಾಳಿ ಅರಿತಿಲ್ಲ
ಉಸಿರು ಕೊಸರಿಲ್ಲಿ, ಖಗ ಮಿಗವಿಲ್ಲ
ಚಿರತೆಯಿಲ್ಲ, ಪ್ರೀತಿಯ ಒರತೆಯಿಲ್ಲ
ಹಾಲು ಬೆಳದಿ೦ಗಳಿಲ್ಲ
ಈ ಪರಿ ಯಾತನೆ ನಿತ್ಯ ನೂತನ
ದಿನ ರಾತ್ರಿ ಋತು ಸ೦ವತ್ಸರ
ಕ್ಯಾಲೆ೦ಡರ್ ಗಳ ಪರಿವೇ ಇಲ್ಲ.

ಔಟ್ ಲುಕ್ ಕ್ಯಾಲೆ೦ಡರ್ ಗಳ
ಹರಿದಾಟ, ಕಾದಾಟ, ಕೆಸರಾಟ
ಆಗಾಗ ಜನರ ಸುಯ್ದಾಟ, ಕಿರುಚಾಟ
ಡಾಲರ್ ವಹಿವಾಟ, ನಾಲಗೆ ನಾಗಲೋಟ
ಹೊಸ ಹುಡುಗರ ನಡುಕಾಟ
ಪದಬ೦ಧಗಳ ಹುಡುಕಾಟ
ಕೀಬೋರ್ಡ್ ಮೇಲೆ ಬೆರಳುಗಳ ಓಡಾಟ
ಫೋನ್ ಮಾತುಗಳ ನೆರೆ ಹಾವಳಿ
ಜನ, ನಿದ್ದೆ ಶಾ೦ತಿ ಎಲ್ಲವೂ ಮಾರಾಟಕ್ಕಿಲ್ಲಿ

ದೂರದ ಕಾಡಿನ
ನಡುವಲ್ಲಿ ಬೆಳೆದಿದ್ದರೆ
ದೊಡ್ಡ ಮರಗಳಾಸರೆ ಇದ್ದಿತೋ
ಬಳ್ಳಿಗಳ ಸ್ನೇಹವಿದ್ದಿತೋ
ಬಿಗಿಯಪ್ಪುಗೆ
ಕಾಡ್ಗಿಚ್ಚು, ಚುರುಕ್ ಚಳಿ, ಸು೦ಯ್ ಗಾಳಿ
ಚ೦ದದ ಚ೦ದಿರ
ಧೋ ಮಳೆ, ದಿಗ೦ತ
ಎಲ್ಲಾ ಬಿಟ್ಟು ಇಲ್ಲಿ
ಏಕಾ೦ತ
ಸಿಟ್ಟು ಬೇಸರ ನಗು ಎಲ್ಲದಕ್ಕೂ
ತೀರದ ಸ್ಮಶಾನ ಮೌನ
ಕೊನೆಯಿರದ ಏಕಾ೦ತ
ಒಲವಲ್ಲ
ನನಗೂ ಬೇಕು ಇರದ
ಕಿಟಕಿಯಾಚೆಗಿನ ಬದುಕು

 
4 ಟಿಪ್ಪಣಿಗಳು

Posted by on ಜನವರಿ 19, 2015 in ಕವಿತೆ

 

ಟ್ಯಾಗ್ ಗಳು: ,