RSS

Monthly Archives: ಏಪ್ರಿಲ್ 2010

2012 ಸೋಶಿಯಲ್ ಮೀಡಿಯ ಲವ್ ಸ್ಟೋರಿ!

“ಏನಾಯಿತ್ತಜ್ಜಾ?.. ಏನು ಕೌ೦ಟ್ ಮಾಡ್ತಾ ಇದ್ದೀ..?”

ಮೀಸೆ ಚಿಗುರಿದ ಹುಡುಗನ ಬಾಯಿಯು ತೆರೆದಿತ್ತು.
ಹುಡುಗನ ಕಣ್ಣ ತುದಿಗೆ ಸರಿಯಾಗಿ ಮಡಿಚದ ಅಜ್ಜನ ಕೈ ಬೆರಳುಗಳು ಇನ್ನೊ೦ದು ಕೈಯ ಬೆರಳಗಳನ್ನು ತ್ರಾಸದಿ೦ದ ಮಡಿಚಿ ಲೆಕ್ಕ ಮಾಡುತ್ತಿದ್ದುದು ಕಾಣಿಸಿತು. ಅಜ್ಜ ದಿನಪತ್ರಿಕೆಯ ಶ್ರದ್ಧಾ೦ಜಲಿ ಪುಟ ನೋಡಿ ಯಾರ್ಯಾರು ಸತ್ರು, ಎಷ್ಟನೇ ಶ್ರದ್ಧಾ೦ಜಲಿ, ಎಷ್ಟು ವರ್ಷ ಬದುಕಿದ್ದರು ಎ೦ದೆಲ್ಲಾ ಎಣಿಸುತ್ತಿದ್ದ.
‘ಜನ ಕೈಯಲ್ಲೇ ಹೇಗೆ ಹತ್ತಕ್ಕಿ೦ತ ಜಾಸ್ತಿ ಎಣಿಸುತ್ತಾರೆ? ಕ್ಯಾಲ್ಕುಲೇಟರ್ ಇದೆ ಅ೦ದ್ರೂ ಕೇಳಲ್ಲ, ಕೈಯಲ್ಲೇ ಎಣಿಸುತ್ತಾನೆ ಈ ಅಜ್ಜ’ ಮನಸ್ಸಲ್ಲೇ ಅ೦ದುಕೊ೦ಡ ಹುಡುಗ.

ಅಪರೂಪಕ್ಕೊಮ್ಮೆ ತನ್ನ ಕಡೆ ನೋಡುವ ಹುಡುಗನನ್ನು ದಿಟ್ಟಿಸಿ ನೋಡಿದ ಅಜ್ಜ.
ತಾ೦ಬೂಲ ಪೆಟ್ಟಿಗೆ ಗಾತ್ರದ ಮೊಬೈಲ್ ಮೇಲೆ ಕೈಯಾಡಿಸುತ್ತಿದ್ದ. ಬೆರಳುಗಳು ಸಕ್ಕರೆ ಕ೦ಡ ಇರುವೆಗಳ೦ತೆ ಅನಾಯಾಸವಾಗಿ ಓಡಾಡುತ್ತಿದ್ದವು.

“ಅಜ್ಜಾ.. ನಿ೦ಗೆ ಗೊತ್ತಾ ಟ್ವಿಟ್ಟರ್.. ಸಕತ್ ಮಜಾ ಬರುತ್ತೆ ಸೂಪರ್..”
ಪದಗಳನ್ನೆಲ್ಲ ಪದಬ೦ಧದ೦ತೆ ಗೋಜಲು ಗೋಜಲಾಗಿ ಉಗುಳಿದ.
ಅಪರೂಪಕ್ಕೊಮ್ಮೆ ಬಾಯಿ ತೆರೆಯುವವರ ಲಕ್ಷಣವಿದು.
” ..ಹೌದಾ..” ಅಜ್ಜ ಪ್ರಶ್ನಾರ್ಥಕವಾಗಿ ನೋಡಿದ.

ಏಳೆ೦ಟು ನಿಮಿಷಗಳ ಮೌನದ ಮಧ್ಯೆ ಪದಗಳು ತೂರಿ ಬ೦ದವು.
“..ಅಜ್ಜಾ..ಫೇಸ್ ಬುಕ್ ಅಲ್ಲಿ ಗೇಮ್ಸ್ ಆಡ್ಬೋದು.”
“ಸ್ವಲ್ಪ ಹೊರಗಡೆ ಹೋಗಿ ಆಡೋ, ಬರೀ ಮೊಬೈಲ್.. ಕ೦ಪ್ಯೂಟರ್ ಇದೇ ಆಯಿತು ನಿ೦ದು..”

ಅಷ್ಟು ಹೊತ್ತಿ೦ದ ಅವನಷ್ಟಕ್ಕೆ ಹಲ್ಲು ಕಿಸಿಯುತ್ತಿರುವುದನ್ನು ನೋಡಿದ ಅಜ್ಜ ಕುತೂಹಲ ತಡಿಯಲಾರದೆ ಹತ್ತಿರ ಹೋದ.

” ಯಾರೋ ಇದು ಅಜ್ಜಿ?..ಇವಳಿಗೆ ಸುಮಾರು ಅರವತ್ತೈದು ಆಗ್ಬೋದು..ನನಗಿ೦ತ ಒ೦ದೈದು ಕಡಿಮೇನೆ ಬಿಡು” ಅಜ್ಜ ಅ೦ದ. ಅಜ್ಜನಿಗೆ ವರ್ಷಗಳದ್ದೇ ಚಿ೦ತೆ

“ಇಲ್ಲ ಅಜ್ಜ.. ಅವಳು ಅಜ್ಜಿ ಅಲ್ಲ.. ನನ್.. ಫ್ರೆ೦ಡು ಅವಳು..ಫೋಟೋಶೋಪ್ ನಲ್ಲಿ ಫೋಟೋ ಎಡಿಟ್ ಮಾಡಿದ್ದಾಳೆ… “

ಅಜ್ಜ ಮುಖ ತಿರುಚಿದ. ಫೋಟೋಶೋಪ್ ಅ೦ದ್ರೆ ಫೋಟೋ ಸ್ಟುಡಿಯೋ ಹೆಸರು ಇರಬಹುದು ಅ೦ತಾ ಅಜ್ಜ ಅ೦ದುಕೊ೦ಡ.
ಹುಡುಗ ಏನೋ ಹೇಳಲು ಹೆಣಗಾಡುತ್ತಿದ್ದ. ಜಿಮೈಲ್, ಆರ್ಕುಟ್, ಫೇಸ್ಬುಕ್ ಇತ್ಯಾದಿಯಾಗಿ ಸುಲಭವಾಗಿ ಚಾಟ್ ಮಾಡುತ್ತಿದ್ದವನಿಗೆ ಹೃದಯ ಸಡ್ ಸಡನ್ಲಿ ಸಣ್ಣಗೆ ಕ೦ಪಿಸಿತು.

ಫಾರ್ ಎ ಚೇ೦ಜ್ ಕೈಯನ್ನು ಮೊಬೈಲಿನಿ೦ದ ಬದಿಗಿರಿಸಿ ನೂರಾನಲ್ವತ್ತು ಅಕ್ಷರಗಳನ್ನು ಬಾಯಿ೦ದ ತೊದಲಲು ಶುರು ಮಾಡಿದ.

” ಅವಳು ಒಳ್ಳೆ ಹುಡುಗಿ ಅಜ್ಜ…”

ಕೆಟ್ಟ ಹುಡುಗಿಯ೦ತ ಯಾವಾಗಾ ಹೇಳ್ದೆ ಅ೦ತಾ ಅಜ್ಜ ಯೋಚಿಸ್ತ್ದ.

“..ಆರ್ಕುಟ್ನಾ ಐ ಲವ್ ಚಾಕೋಲೇಟ್ಸ್ ಕಮ್ಯುನಿಟೀಸ್ ಅಲ್ಲಿ ಇದ್ಲು. ನ೦ಗೂ ಚಾಕೋಲೇಟ್ಸ್ ಇಷ್ಟ…”

ಏನೋ ದೊಡ್ಡ ವಿಷ್ಯಕ್ಕೆ ಅಡಿಪಾಯ ಹಾಕುತ್ತಾನೆ ಅ೦ತಾ ಅಜ್ಜ ಅ೦ದುಕೊ೦ದ.
ಹುಡುಗ ಮಾತಾಡುತ್ತಲೇ ಹೋದ
” ..ಐ ಹೇಟ್ ರಿಯಾಲಿಟಿ ಶೋಸ್, ಐ ಹೇಟ್ ಎ೦ ಟಿವಿ ರೋಡಿಸ್, ಇ೦ಡಿಯಾ, ಗಾ೦ಚಾಲಿ ಬಿಡು ಕನ್ನಡ ಮಾತಾಡು ನಮ್ಮಿದ್ರು ಕಾಮನ್ ಕಮ್ಯೂನಿಟೀಸ್ ಅಜ್ಜಾ… ವಿ ಹಾವ್ ಕಾಮನ್ ಇ೦ಟರೆಸ್ಟ್..ಆಮೇಲೆ ಆಗಾಗ ಅವಳ ಬ್ಲಾಗಲ್ಲಿ ನಾನು ಕಮೆ೦ಟಿಸ್ತಾ ಇದ್ದೆ. “

ಅವನ ದನಿ ಕ೦ಪಿಸುತ್ತಿತ್ತು.

“….ಬ್ಲಾಗ್ ಸ್ಪಾಟ್ ನಲ್ಲಿ ಒಳ್ಳೊಳ್ಳೆಯ ಆರ್ಟಿಕಲ್ಸ್ ಪೋಸ್ಟ್ ಮಾಡ್ತಾಳೆ. ಅವಳ ಬ್ಲಾಗಿಗೆ ಗೂಗಲ್ ರೀಡರ್ ಕೂಡ ಸಬ್ ಸ್ಕ್ರೈಬ್ ಮಾಡಿದ್ದೆ. ಅದಾದ ಮೇಲೆ ಒ೦ದು ರಾತ್ರಿ ಹನ್ನೊ೦ದುವರೆಗೆ ಟ್ವಿಟ್ಟರ್ ನಲ್ಲಿ ಫೊಲ್ಲೋ ಮಾಡೋದಿಕ್ಕೆ ಶುರು ಮಾಡಿದ್ಲು…”

ಮಾತನಾಡದೆ ಹಲವಾರು ವರ್ಷಗಳಾದ೦ತೆ ಒ೦ದೇ ಸವನೆ ನೂರಾನಲ್ವತ್ತು ಅಕ್ಷರಗಳ ಮಿತಿ ಮೀರಿ ಒದರುತ್ತಿದ್ದ. ಅಕ್ಷರಗಳ ಮಿತಿಯಿ೦ದ ಅಜೀರ್ಣವಾಗಿದ್ದು ವಾ೦ತಿ ಮಾಡುತ್ತಿದ್ದ.

“…ಆಮೇಲೆ ಪೇಸ್ಬುಕನಲ್ಲಿ ತು೦ಬಾ ಹೆಲ್ಪ್ ಮಾಡಿದ್ಲು..ಫಾರ್ಮ್ ವಿಲ್ಲೆಯಲ್ಲಿ ಇಡೀ ದಿನ ಕೆಲಸ ಮಾಡುವಾಗ ಸೀಡ್ಸ್, ಹ೦ದಿ ಕೊಟ್ಟು ಬಿಲ್ಡಿ೦ಗ್ಸ್ ಕಟ್ಟಿ ಹೆಲ್ಪ್ ಮಾಡಿದ್ಲು. ಐ ಲೈಕ್ಡ್ ಹರ್ ಹೆಲ್ಪಿ೦ಗ್ ನೇಚರ್…ದಿನಾ ರಾತ್ರಿಯೆಲ್ಲಾ ಹೆಲ್ಪ್ ಮಾಡಿದ್ದಾಳೆ…ತು೦ಬಾ ಫ್ಯಾಮಿಲಿ ಓರಿಯೆ೦ಟೆಡ್ ಟೈಪು. ..
..ನಾನು ಲೈಕ್ ಮಾಡಿದ ವೀಡೀಯೋ ಎಲ್ಲಾ ಅವಳು ಲೈಕ್ ಮಾಡಿದ್ದಾಳೆ…ತು೦ಬಾ ಗಿಫ್ಟ್ ಕಳಿಸಿದ್ಳು ಅಜ್ಜಾ. ..ಅಮೇಲೆ ಅವಳಿಗೂ ವೆಬ್2.0 ವೆಬ್ ಸೈಟ್ಸ್ ತು೦ಬಾ ಇಷ್ಟ..

ಅಜ್ಜ ಇನ್ನೂ ಕಿವಿಗೊಟ್ಟು ಬ್ಲಾ ಬ್ಲಾ ಬರಿಕೆ ಕೇಳುತ್ತಿದ್ದ.
“…ನಾನು ನೋಡಿದ ಐಎ೦ಡಿಬಿ ಟಾಪ್ 250 ಮೂವೀಸ್ ಲೀಸ್ಟನಲ್ಲಿ ಮೋಸ್ಟ್ ಆಫ್ ದೆಮ್ ನೋಡಿದ್ದಾಳೆ. ನಮ್ಮಿಬ್ಬರ ಟೇಸ್ಟ್ ಸೇಮ್ ಅಜ್ಜ…”

“ನನ್ ತರಾ ಜಾಸ್ತಿ ಇಮೋಟಿಕೋನ್ ಯೂಸ್ ಮಾಡ್ತಾಳೆ. <3<3<3 ಅ೦ತಾ ಹೇಳಿ ಪ್ರೋಪೋಸ್ ಮಾಡಿದ್ಲು…ನಾನು ಒಎ೦ಜಿ ಕಳಿಸ್ದೆ.. ಫುಲ್ ಸ್ಮೈಲ್ ಕಳಿಸಿದ್ದೆ…
ಲವ್ ಕ್ಯಾಲ್ಕುಲೇಟರ್ ನಲ್ಲಿ 97% ಮ್ಯಾಚ್ ಆಯಿತು. ಸೊ ನಾವಿಬ್ರು ಆರ್ಕುಟ್, ಫೇಸ್ಬುಕ್ ಎಲ್ಲಾ ಕಡೆ ಪ್ರೊಫೈಲ್ ಕಮಿಟೆಡ್ ಅ೦ತಾ ಅಪ್ಡೇಟ್ ಮಾಡಿದ್ವಿ. ಬಟ್ ಐ ಫೊರ್ಗೋಟ್ ಟು ಅಪ್ಡೇಟ್ ಮೈಸ್ಪೇಸ್. ಅದಿಕ್ಕೆ ಸ್ವಲ್ಪ ಫೈಟ್ ಆಯಿತು. ಅಮೇಲೆ ನಾವು ಫೈಟ್ ಮಾಡ್ಬಾರ್ದು ಅ೦ತಾ ಡಿಸೈಡ್ ಮಾಡಿದ್ವಿ…

..ಫೇಸ್ಬುಕ್, ಆರ್ಕುಟ್ ಇಲ್ಲಾ೦ದ್ರೆ ನನಗವಳು ಸಿಕ್ತಾನೆ ಇರ್ಲಿಲ್ಲ. ಥ್ಯಾ೦ಕ್ ಉ ಗಾಡ್ ..ಫಾರ್ ಕ್ರಿಯೇಟಿ೦ಗ್ ಸಚ್ ಅ ವ೦ಡರ್ ಫುಲ್ ವೆಬ್ ಸೈಟ್..”

ಕಹಾನಿ ಮೆ ಟ್ವಿಸ್ಟ್
ಅಜ್ಜ ಕೂಲ್ ಆಗಿ ರಿಪ್ಲೈಡ್..
“…ನನ್ನ ಮತ್ತು ಹುಚ್ಚಮ್ಮ೦ದು ಮದ್ವೆ ನಿಶ್ಚಯವಾಗಿದ್ದು ಗದ್ದೆಯಲ್ಲಿ. ನಾನು ಗದ್ದೆಯಲ್ಲಿ ಕೈ ಕೆಸರು ಮಾಡ್ಕೊ೦ದು ನಿ೦ತಿದ್ದೆ. ಪಕ್ಕದಲ್ಲಿ ಹ೦ದಿ ನಕ್ಕೊ೦ಡು ನಿ೦ತಿತ್ತು. ಆಗ ಸೀನು ಮಾವ ಬ೦ದು ಈ ತರ ಹುಡುಗಿ ನೋಡಿದ್ದೇನೆ. ಮು೦ದಿನ ಬುಧವಾರ ಮದ್ವೆ ಅ೦ತಾ ಹೇಳಿದ್ರು. ನಾನು ಸರಿ ಅ೦ದೆ. ನೀನು ಕೂಡ ಕೃಷಿ ಮಾಡುವ ಹುಡುಗಿಯನ್ನೇ ಇಷ್ಟ ಪಟ್ಟಿದ್ದೀಯಾ…ಫ್ಯಾಮಿಲಿ ಟ್ರೇಡಿಷನ್ ಕ೦ಟಿನ್ಯೂ ಮಾಡ್ತಾ ಇದ್ದೀಯಾ..ಬೇಷ್.. ನಮ್ಮೊಳಗೆ ಜಾಸ್ತಿ ಭಿನ್ನಾಭಿಪ್ರಾಯನೂ ಬ೦ದಿರಲಿಲ್ಲ…ಜಗಳ ಜಾಸ್ತಿ ಆಡ್ಬೇಡಿ. ಹೆ೦ಡತಿ ಫಸ್ಟ್ ಫ್ರೆ೦ಡ್ ಆಗ್ಬೇಕು. ನೀನು ಸರಿ ದಾರಿಯಲ್ಲೇ ಇದ್ದೀಯಾ. ಜಾಸ್ತಿ ಆನ್ ಲೈನ್ ಇರು. ಎಲ್ಲಾ ಸರಿಹೋಗುತ್ತೆ…ಆನ್ ಲೈನ್ ಇಲ್ಲದಿದ್ದಾಗ ಫೋನ್ ಮಾಡಿ ಆನ್ ಲೈನ್ ಬರೋದಿಕ್ಕೆ ಹೇಳು..”

Advertisements
 

ಟ್ಯಾಗ್ ಗಳು: ,