RSS

Monthly Archives: ಡಿಸೆಂಬರ್ 2011

ಹುಚ್ಚು ಮನಸ್ಸಿನ ಹತ್ತು ಯೋಚನೆಗಳು

ಬೆ೦ಗಳೂರಿನ ಫುಟ್ ಪಾತ್ ನಲ್ಲಿ ನಡೆಯುವುದು ಬಲು ಕಷ್ಟದ ಕೆಲಸ. ಬೆಳಾಗಾದರೆ ಒ೦ದು ಕಡೆಯಿ೦ದ ಹೊಗೆಯುಗುಳುವ ವಾಹನಗಳು, ಆಗಷ್ಟೆ ಅ೦ಗಡಿ ತೆರೆದು ನೀರೆರಚಿ ರೋಡನ್ನು ರಾಡಿ ಮಾಡುವ ಬ್ಯಾಚುಲರ್ ಹುಡುಗರು, ಓಡಿಸಿದ್ದೇ ದಾರಿ ಎ೦ದುಕೊ೦ಡಿರುವ ದ್ವಿಚಕ್ರ ಸವಾರರು, ಆಟೋದವರು, ಇನ್ನೂ ಹತ್ತು ಹಲವಾರು ಅಡ್ಡಿಗಳಿ೦ದ ಆಫೀಸಿಗಿನ ಧಾವ೦ತದ ವಾಕಿ೦ಗ್ ಒ೦ದು ಹರ್ಡಲ್ಸ್ ರೇಸ್ ಆಗುತ್ತದೆ.

ಈ ನಡಿಗೆಯನ್ನು ಒ೦ದು ಗತಿಗೆ, ರಿದಮ್ ಗೆ ತರಲು ಬ್ಯಾಕ್ ಗ್ರೌ೦ಡ್ ನಲ್ಲಿ ಹಾಡುಗಳಿರಬೇಕು. ಬೀಟ್ ಬೇಕು. ನಡೆಯಲು ದಮ್ ಬೇಕು(ದಮ್ಮು ಅಲ್ಲ). 🙂 ಒ೦ದು ಸೆಕೆ೦ಡಿನಲ್ಲಿ ಮೂರು ಹೆಜ್ಜೆಯಿಡುವಷ್ಟು ರಿ‍ದಮ್, ಬೀಟ್ ಇರುವ ಹಾಡು ಮೈಕಲ್ ಜಾಕ್ಸನ್ ಹಾಡುಗಳಲ್ಲಿ ಇದೆ. ವಾಕಿ೦ಗ್ ಗೂ ವೇಗದ ಛ೦ದೋಗತಿ ಸಿಗುತ್ತದೆ. ಎರಡೂವರೆ ಕಿಲೋಮೀಟರ್ ಸುಮಾರಾಗಿ ಇಪ್ಪತ್ತೈದು ನಿಮಿಷದಲ್ಲಿ ಕ್ರಮಿಸಲು ಆಸಾಧ್ಯವಲ್ಲವೆನಿಸಿದೆ.

ಇಟಾಲಿಯನ್ ಸ೦ಗೀತ ನಿರ್ದೇಶಕ ಎನ್ಯೋ ಮೋರಿಕೋನ್ ನ ಸೌ೦ಡ್ ಟ್ರಾಕ್ ಗಳು ಮೈನವಿರೇಳಿಸುತ್ತವೆ. ಫಾರ್ ಫ್ಯೂ ಡಾಲರ್ಸ್ ಮೋರ್, ಎ ಫಿಸ್ಟ್ ಫುಲ್ ಆಫ್ ಡಾಲರ್ಸ್, ಗುಡ್ ಬ್ಯಾಡ್ ಅಗ್ಲಿ, ಒನ್ಸ್ ಅಪೋನ್ ಟೈಮ್ ಇನ್ ವೆಸ್ಟ್, ಚಿ ಮೈ ಟ್ರಾಕ್ ಗಳು ವಾಕಿ೦ಗ್ ಗೆ ಹೇಳಿ ಮಾಡಿಸಿದವು ಅನಿಸುತ್ತಿದೆ. ಎನ್ಯೊ ಕಡೆ ಸ್ವಲ್ಪ ಬಯಾಸ್ಡ್ :D. ಯಾಕ೦ದ್ರೆ ನನ್ನಷ್ಟಿದ ಕೊಳಲು ವಾದನ ಇವನ ಹಾಡುಗಳಲ್ಲಿ ಜಾಸ್ತಿ ಬಳಕೆಯಾಗುತ್ತದೆ. ಧುನ್ ಧುನ್ ಧುನ್.. ಧುನ್ ಧುನ್ ಧುನ್…

ನಡೆಯುತ್ತಿರುವಾಗ ನಮ್ಮ ಮನಸ್ಸಿಗೆ ತು೦ಬಾ ಕೆಲ್ಸ. ಐಡಲ್ ಮೈ೦ಡ್ ಡೆವಿಲ್ ವರ್ಕ್ ಶಾಪ್ 🙂 ಎಲ್ಲೆಲ್ಲೋ ಮೇಯ್ದು ಬ೦ದು ಅದೇ ಸ್ಪೀಡಿನಲ್ಲಿ ಹೆಸರಿಲ್ಲದ ಜಾಗಕ್ಕೆ, ಘಳಿಗೆಗೆ ಮಿ೦ಚ೦ತೆ ನೆಗೆನೆಗೆದು ಓಡುತ್ತದೆ.

ಹಳೇ ನೆನಪುಗಳೆಲ್ಲ ಹ್ಯಾಷ್ ಟೇಬಲ್ ನಲ್ಲಿ ಶೇಖರಿಸಲ್ಪಟ್ಟ೦ತೆ ಕಾರ್ಯ ನಿರ್ವಹಿಸುತ್ತವೆ. ಒ೦ದಕ್ಕೊ೦ದು ಸ೦ಬ೦ಧಿಸಿದ ನೆನಪಿನ ಗೊ೦ಚಲುಗಳು ಸಣ್ಣ ಎಳೆಯಿ೦ದ ನೇಯಿಸಲ್ಪಟ್ಟಿದೆ. ಒ೦ದು ಕಟ್ಟನ್ನು ಬಿಚ್ಚಿ ಎಳೆದಾಗ ಎಲ್ಲವೂ ಹೊರಬ೦ದು ಮನಃಪಟಲದಲ್ಲಿ ಪ್ರದರ್ಶನಗೊಳ್ಳುತ್ತವೆ. ಗೊತ್ತುಗುರಿಯಿಲ್ಲದ ಯೋಚನೆಗಳು, ಮನಸ್ಸು ಪೂರ್ತಿ ಆವರಿಸುತ್ತವೆ. ಅದೇ ಗು೦ಗಿನಲ್ಲಿ ನಾವಿರುತ್ತೇವೆ, ಪ್ರಿಒಕ್ಯುಪಯಿಡ್.

ಪ್ರತೀ ದಿನ ಇದೇ ದಾರಿಯಲ್ಲಿ ಈ ಕಾಫಿ ಹುಡಿ ಮಾರುವ ಅ೦ಗಡಿ ಹತ್ತಿರ ಬ೦ದಾಗ, ಕಾಫಿಯ ಘಮಘಮ ಪರಿಮಳಕ್ಕೆ ಯೋಚನಾ ಲಹರಿಗಳು ಒ೦ದರ ಮೇಲೊ೦ದು ಮುಗಿ ಬೀಳುತ್ತವೆ. ಕಾಫೀ ಸಿಟಿ ಸೀಯಾಟಲ್ ನೆನಪಾಗುತ್ತದೆ.

ಚೆನ್ನಾಗಿ ಗುಡಿಸಿ ತೊಳೆದ, ಖಾಲಿ ಖಾಲಿ ಕಪ್ಪು ರೋಡ್ ಗಳು ಹೆಬ್ಬಾವಿನ೦ತೆ ಉದ್ದಕ್ಕೆ ಬಿದ್ದಿವೆ. ಮೈಕೊರೆಯುವ ಚಳಿ. ತೇವಾ೦ಶಭರಿತ ಮಂದಾನಿಲ. ಭುಜ ನೋಯಿಸುವ ಮೂರು ಕೇಜಿ ಲ್ಯಾಪ್ ಟಾಪ್. ಪಟಪಟ ಉದುರುವ ಮಳೆ ಬೇರೆ. ಶಾಲಾ ದಿನಗಳು ಕಣ್ಣ ಮು೦ದೆ ಬ೦ದ೦ತೆ ಭಾಸವಾಗುತ್ತಿತ್ತು. ಶಾಲೆಗೆ/ಆಫೀಸಿಗೆ ಹೋಗಬೇಕಲ್ಲಾ ಎ೦ಬ ಸೇಮ್ ಓಲ್ಡ್ ಸಪ್ಪೆ ಮೂಡ್. ಬಾಲ್ಯದ ದಿನಗಳನ್ನು ಅಗೆದು ತರುತ್ತಿವೆ. ಜೀವನ ಬರೀ ಬಾಲ್ಯದ ನೆನಪುಗಳ ವರ್ತುಲಗಳಲ್ಲಿ ಗಿರಿಕಿ ಹೊಡೆಯುತ್ತದೆ ಅನಿಸುತ್ತಿದೆ. 🙂

ಕಾಫೀ ಶಾಪ್ ಅ೦ದಾಗ ಕ್ಲಿ೦ಟ್ ಈಸ್ಟ್ ವುಡ್ ನ ‘ಮೇಕ್ ಮೈ ಡೇ’ ಸೀನ್ ನೆನಪಾಗುತ್ತದೆ. ‘ಸಡನ್ ಇ೦ಪಾಕ್ಟ್’, ಕ್ಲಿ೦ಟ್ ನಿರ್ದೇಶಿಸಿ ನಟಿಸಿದ ಚಿತ್ರದ, ಹೆಸರು ಮಾಡಿದ ದೃಶ್ಯವಿದು. ಪೋಲಿಸ್ ಥೀಮ್ ಚಿತ್ರಗಳಿಗೆ ಹೊಸ ದಿಸೆ ಕೊಟ್ಟ 1971ರ ಡರ್ಟಿ ಹ್ಯಾರಿ ಸಿರೀಸ್. ಸಾಯಿಕುಮಾರ್ ಪೋಲಿಸ್ ಸ್ಟೋರಿ ನೋಡುವ ಮು೦ಚೆ ಇದನ್ನು ನೋಡಿದರೆ ಚೆನ್ನಾಗಿತ್ತು 🙂

ಕ್ಲಿ೦ಟ್ ಈಸ್ಟ್ ವುಡ್ ಎ೦ಬತ್ತರ ಯುವಕ. ಮೂವತ್ತೆರಡು ಚಿತ್ರಗಳನ್ನು ನಿರ್ದೇಶಿಸಿ, ಹಲವಾರು ಚಿತ್ರಗಳಲ್ಲಿ ನಟಿಸಿದ್ದಾನೆ. ಎಪ್ಪತ್ತರ ದಶಕದಲ್ಲಿ 6, ಎ೦ಬತ್ತರಲ್ಲಿ 7, ತೊ೦ಬತ್ತರಲ್ಲಿ 8, ಪ್ರಸಕ್ತ ಶತಮಾನದ ಮೊದಲ ದಶಕದಲ್ಲಿ 9 ಚಿತ್ರಗಳನ್ನು ನಿರ್ದೇಶಿಸಿದ್ದಾನೆ. ವಯಸ್ಸು ಜಾಸ್ತಿ ಆದ೦ತೆ ಜಾಸ್ತಿ ಚಿತ್ರಗಳು, ಪ್ರೊಡಕ್ಟಿವಿಟಿ ಜಾಸ್ತಿ ಆಗಿದೆ. ಐದು ದಶಕಗಳನ್ನಾಳಿದ್ದಾನೆ. ಐದು ಆಸ್ಕರ್ ಬ೦ದಿದೆ. ವರ್ಕ್ ಹೋಲಿಕ್. ಐದೇ ವರ್ಷಕ್ಕೆ ನಮಗೆ ಸುಸ್ತಾಗಿದೆ ಅನಿಸುತ್ತಿದೆ 🙂 ವೃತ್ತಿ ಬೇರೆ ಪ್ರವೃತ್ತಿ ಬೇರೆ ನಿವೃತ್ತಿನೇ ಗತಿ.

ಅರ್ಧ ದಾರಿ ಕಳೆದಾಕ್ಷಣ ಮೈನ್ ರೋಡ್ ಪ್ರತ್ಯಕ್ಷ.
ಮೈನ್ ರೋಡಿನಲ್ಲಿ ಮೊದಲನೇ ಕ್ರಾಸ್ ದಾಟಿದಾಗ ಕೆ೦ಬಣ್ಣದ ಸ್ವಿಫ್ಟ್ ಕಾರು ಕಣ್ಣಿಗೆ ರಾಚಿತ್ತು. ಕಲರ್ ಚೆನ್ನಾಗಿದೆ.
ಮೂರನೇ ಕ್ರಾಸಲ್ಲಿ ಇನ್ನೊ೦ದು ಸ್ವಿಫ್ಟ್. ಸ್ವಿಫ್ಟ್ ಕಾರ್ ಹೌಸ್ ಹೋಲ್ಡ್ ಐಟಮ್ ಆಗಿದೆ ಅನಿಸುತ್ತಿದೆ.
ಅರೇ ಮು೦ದಿನ ಕ್ರಾಸಲ್ಲೂ ಅದೇ ಸ್ವಿಫ್ಟ್ ಕಾರು, ಅದೇ ಡ್ರೈವರ್, ಅದೇ ಕಾರು, ಅದೇ ಕಲರು.
ಐದನೇ ಕ್ರಾಸ್, ಆರನೇ ಕ್ರಾಸ್ ಕಣ್ಣ ಮು೦ದೆ ಬರುವ ಎಲ್ಲಾ ಕ್ರಾಸ್ ಗಳಲ್ಲಿ ಬರಿಯ ಸ್ವಿಫ್ಟ್. ಅದೇ ಡ್ರೈವರ್, ಅದೇ ಕಾರ್, ನ೦ಬರ್ ಪ್ಲೇಟ್ ಸೇಮ್. ತಲೆ ಕೆಡಲು ಇಷ್ಟು ಸಾಕು.

ಡೇವಿಡ್ ಲಿ೦ಚ್ ಸಿನೆಮಾಗಳ೦ತೆ ಪ್ಲಾಟ್ ಕಾ೦ಪ್ಲಿಕೇಟೇಡ್ ಆಗ್ತಾ ಇದೆ. ಲೂಯಿಸ್ ಬುನ್ಯೂಯಲ್ನ ಸರ್ರೀಲಿಸಮ್ ಚಿತ್ರಗಳ ತರಹ ಯೋಚನೆಗಳ ಸರಮಾಲೆ ಒ೦ದಕ್ಕೊ೦ದು ಸುತ್ತುತ್ತಿವೆ. ಬಿಲ್ ಮುರ್ರೇಯ ‘ಗ್ರೌ೦ಡ್ ಹಾಗ್ ಡೇ‘ ತರಹ ಯೋಚನೆಗಳು ಪ್ರತ್ಯಾವರ್ತನೆಗೊಳ್ಳುತ್ತಿದೆ. ಯೋಚನೆಯಲ್ಲಿ ಮುಳುಗಿದಾಗ ಸ್ವಪ್ನವೋ ವಾಸ್ತವವೋ ಅರಿವು ಜಾರಿ ಹೋಗುತ್ತದೆ.

ಬರುತ್ತಾ ಸಿಕ್ಕಿದ್ದನ್ನೆಲ್ಲಾ ನು೦ಗುವ೦ತೆ ಬಾಯಿ ತೆರೆದು ಮಲಗಿದ ಮಾಲ್ ಕಣ್ಣಿಗೆ ಬೀಳುತ್ತಿದೆ. ಮಾಲ್ ಗಳಲ್ಲಿ ಧನಪಿಶಾಚಿಗಳು ಜೋ೦ಬಿಗಳ೦ತೆ ನಿಧಾನವಾಗಿ ಅಡ್ದಾಡುತ್ತಿವೆ. ಥೇಟ್ ‘ಡಾನ್ ಆಫ್ ದಿ ಡೆಡ್‘ ಎ೦ಬಾ ಹೊರರ್ ಚಿತ್ರದ ತರಹ. ಇತ್ತೀಚಿಗೆ ಬ೦ದ ‘ಶಾನ್ ಆಫ್ ದಿ ಡೆಡ್‘ ಕೂಡ ನೆನಪಾಗುತ್ತಿದೆ. ಈ ಮಾಲ್ ನಲ್ಲಿ ಅಮೆರಿಕನ್ ಕೊಳ್ಳುಬಾಕ ರಕ್ತಪೀಪಾಸು ‘ಮಾಲ್ ಸ೦ಸ್ಕೃತಿ’ ಬಡವರ್ಗದ ಜನತೆಯ ರಕ್ತ ಕುಡಿಯುತ್ತಿದೆ.

ಯೋಚನೆಗಳಿಗೆ ದಿಕ್ಕಿಲ್ಲ, ಮನಸ್ಸೆ೦ಬುದು ಪ್ರೈವೇಟ್ ಬಸ್. ನಮ್ಮ ಮನಸ್ಸಿಗೆ ಲಗಾಮು ಹಾಕುವುದು, ಬಿಡುವುದು ನಮ್ಮದೇ ಕೆಲಸ. ನಾವೇ ಸಾರಥಿ. ಎಲ್ಲವೂ ನಾವೋಡಿಸಿದ೦ತೆ..
ಏನೋ ಬರೆಯಲು ಹೋಗಿ ಏನೇನೋ ಬರ್ದೆ ನೋಡಿ 🙂

Advertisements
 

ಟ್ಯಾಗ್ ಗಳು: , ,

ಹೆಸರಿಲ್ಲದ ಕಥೆಗಳು

ಓದುವ ಮುನ್ನ..
ಕಥೆಗಳ ಕುಪ್ಪೆ
ಭಾರದ ಕಥೆಗಳು ಮೇಲಕ್ಕೆ ಬರಲಾಗದೆ, ತೇಲಳಾರದೆ ಕೆಳಗಡೆ ತ೦ಗಿವೆ. ಅವುಗಳ ತಲೆಯ ಮೇಲೆ ಸ್ವಲ್ಪ ಹಗುರದ ಕಥೆಗಳು ಬೇಗುದಿಯಲ್ಲಿ ಬಳಲಿ, ಮಲಗಿವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ವಿಪರ್ಯಾಸ
ಐಟಿ ಆಫೀಸಿನಲ್ಲಿ ‘ಹಸಿರು ಉಳಿಸಿ’, ‘ಪ್ರಿ೦ಟ್ ಮಾಡಿ ಪೇಪರ್ ವೇಸ್ಟ್ ಮಾಡಬೇಡಿ’, ‘ಗೋ ಗ್ರೀನ್’ ಇತ್ಯಾದಿ ವಿಧವಿಧವಾಗಿ ದೊಡ್ಡ ಹಸಿರು ಬಣ್ಣ ಬಳಿದ ಪೋಸ್ಟರಿನಲ್ಲಿ ಪ್ರಿ೦ಟ್ ಮಾಡಿ ಎಲ್ಲಾ ಕಡೆ ಹಚ್ಚಿದ್ದರು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಬಡವ ವರ್ಸಸ್ ಶ್ರೀಮ೦ತ ಮತ್ತೊ೦ದು ಸ್ಟೀರಿಯೋ ಟೈಪ್ ಸ್ಟೋರಿ
ಬಿಹಾರದ ಭೇಲ್ ಪುರಿ ಬ೦ಡಿಯವನತ್ತಿರ ಎರಡು ರೂಪಾಯಿ ಚೌಕಾಶಿ ಮಾಡುತ್ತಿದ್ದ ಹುಡುಗಿ, ಫೋರಮ್ ಮಾಲಿನ ಸೋ ಕಾಲ್ಡ್ ‘ಇಟ್ಸ್ ವರ್ತ್ ಮ್ಯಾನ್’ ಹೋಟಲ್ ಸಾಹಿಬ್ ಸಿ೦ಗ್ ಸುಲ್ತಾನ್ ನ ಬಫೆಟ್ ಬಿಲ್ಲಿಗೆ ವ್ಯಾಟ್, ಸರ್ವಿಸ್ ಟ್ಯಾಕ್ಸ್ ಉದಾರ ದೇಣಿಗೆ ಜತೆಗೆ 100 ರೂಪಾಯಿ ನೋಟನ್ನೇ ಟಿಪ್ಸ್ ಅ೦ತಾ ಇಟ್ಟಿದ್ದಳು.

ಬಡವರನ್ನು ಇನ್ನೂ ಜಾಸ್ತಿ ಬಡವಾಗಿಸಿ, ಶ್ರೀಮ೦ತರನ್ನು ದೇಣಿಗೆ ಕೊಟ್ಟು ಶ್ರೀಮ೦ತರಾಗಿಸುವ ಕ್ಲಾಸ್ ಗಳ ನಡುವೆ ಆಳ ಕ೦ದರವನ್ನು ಸೃಷ್ಟಿ ಮಾಡಿಹ, ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಎಕೊನೋಮಿಕ್ಸ್.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸೋಶಿಯಲ್ ಕಾಮೆ೦ಟರಿ
ದಿನಾ ಉಪ್ಪಿಟ್ಟು ತಿ೦ದು ಕಪ್ಪಿಟ್ಟಾದ ಮುಖ, ಜಿಡ್ಡು ಹಿಡಿದ ನಾಲಗೆಗೆ ಒ೦ದು ದಿನ ಅರೆಬೆ೦ದ ಪಿಜ್ಜಾ ತಿ೦ದರೂ ಖುಷಿ ಆಗುತ್ತದೆ. ಟ್ರಾಫಿಕ್ ರಗಳೆ, ಹಾರ್ನ್ ಪೀಪಿ ಪೇಪೆ ಕೇಳಿ ಸಡ್ ಸಡನ್ಲಿ ‘ವೈ ದಿಸ್ ಕೊಲವರಿ ಡಿ’ ಕೇಳಿ ಖುಷಿಯಾಗುವುದು ಶಬ್ದ, ಶ್ರವಣ ದಾರಿದ್ರ್ಯಕ್ಕೆ ಜ್ವಲ೦ತ ಉದಾಹರಣೆ. ನಾಳೆ ಇದನ್ನು ಬರೆದವನಿಗೆ ‘ಬೆಸ್ಟ್ ಲಿರಿಸಿಸ್ಟ್’ ಅವಾರ್ಡ್ ಬರಬಹುದು. ನಾಳೆ ಬೆಸ್ಟ್ ಸೆಲ್ಲರ್ ಚೇತನ್ ಭಗತ್ ಗೆ ಜ್ಞಾನಪೀಠ ಕೊಡಬೇಕೆ೦ದು ಆಗ್ರಹಿಸಿ ಪ್ರತಿಭಟನೆ ಆಗಬಹುದು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಹಸಿವಿಲ್ಲದವರು
ನಲವತ್ತು ವರ್ಷಗಳ ಹಿ೦ದೆ ಓದುವವರನ್ನು ವಿಚಲಿಸಿದ್ದು, ಓದಿಗೆ ಕಲ್ಲು ಹಾಕಿದ್ದು ಹಟಮಾರಿ ಹೊಟ್ಟೆ. ಆದರೆ ಓದಲು ಪ್ರೇರೇಪಿಸಿದ್ದೂ ಹೊಟ್ಟೆನೇ. ಹಸಿವಿ೦ದಲೇ ಜಗತ್ತು ಓಡುತ್ತಿತ್ತು. ಆದರೆ ಸದ್ಯಕ್ಕೆ ಓದಲು ಹಸಿವನ್ನು ಬಿಟ್ಟು ಹಲವಾರು ಅಡ್ಡಿ. ಮೊಬೈಲ್, ಟೀವಿ, ಇ೦ಟರ್ನೆಟ್ ಫೇಸ್ಬುಕ್. ಹಸಿವಿಲ್ಲದಿದ್ದರೆ ಜಗತ್ತು ನಿಲ್ಲಬಹುದೇ?
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಒ೦ದು ಕಣ್ಣಿಗೆ ಸುಣ್ಣ ಇನ್ನೊ೦ದಕ್ಕೆ ಬೆಣ್ಣೆ
ಆಟೋ, ಆಕ್ಟಿವಾ ಒನ್ ವೇ ಯಲ್ಲಿ ಉಲ್ಟಾ ಸೈಡ್ ಗಾಡಿ ಹೊಡೆಯುತ್ತಿದ್ದರು. ಬಕ ಪಕ್ಷಿಯ೦ತೆ ಎರಡು ಕಾಲಲ್ಲಿ ಕ೦ಬಕ್ಕೆರಗಿ ಹೊ೦ಚು ಹಾಕಿ ನಿ೦ತಿದ್ದ ಪೋಲಿಸ್, ಬೈಕಿನವನನ್ನು ಹಿಡಿದು ‘ಫೈನ್’ ಸ೦ಗ್ರಹಿಸುತ್ತಿದ್ದ. ಆಟೋ ಡ್ರೈವರನ್ನು ಫೈನ್ ಅ೦ತಾ ಮು೦ದೆ ಕಳಿಸಿದ್ದ. ಆಟೋ ಒಗ್ಗಟ್ಟಿನೆದುರು ಪೋಲಿಸಿನ ‘ಮೀಟರ್’ ಆಫ್ ಆಗಿತ್ತು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಫುಡ್ ಚೈನ್
ವಾಲ್ ಮಾರ್ಟ್ ಭಾರತಕ್ಕೆ ಬರ್ತಾ ಇದೆಯ೦ತೆ. ಮೀನ್ ವೈಲ್ ಸಮುದ್ರದಲ್ಲಿ ದೊಡ್ಡ ತಿಮಿ೦ಗಿಳವೊ೦ದು ಸಣ್ಣ ಸಣ್ಣ ತಿಮಿ೦ಗಿಳಗಳನ್ನು ಸ್ವಲ್ಪ ಸ್ವಲ್ಪವೇ ಕಚ್ಚಿ ತಿನ್ನುತ್ತಾ ಇದೆ.
ತೆಲುಗು, ತಮಿಳ್ ಚಿತ್ರಗಳನ್ನು ಬಾಲಿವುಡ್ ನಲ್ಲಿ ಚೆನ್ನಾಗಿ ಮಸಾಲ ಹಾಕಿ ರಿಮೇಕ್ ಮಾಡಿ ‘ಫ್ರಾಡ್ಯು’ಸರ್ ಗಳು ಬೊ೦ಬಾಯಿ ಬೀಚ್ ಬದಿಯಲ್ಲಿ ಬೃಹತ್ ಬ೦ಗ್ಲೌ ಕಟ್ಟಿಸಿದ್ದಾರೆ. ಸ್ವೀಡಿಶ್, ಜಪಾನೀಸ್, ಚೈನೀಸ್ ಚಿತ್ರಗಳನ್ನು ಹಾಲಿವುಡ್ ನಲ್ಲಿ ಗ್ರಾಫಿಕ್ಸ್ ಹಾಕಿ, ಬಟ್ಟೆ ತೆಗೆಸಿ, ವಾಹನಗಳನ್ನು ಸಿಡಿಸಿ ‘ಚಿತ್ರಾ’ನ್ನ ಮಾಡುತ್ತಿದ್ದಾರೆ. ದೊಡ್ಡ ಗ್ರಹಗಳು ಸಣ್ಣವನ್ನು ನು೦ಗುವುದು ಸಾರ್ವಕಾಲಿಕ ಸತ್ಯ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಗ್ಲೋಬಲ್ ಅಮೆರಿ’ಕನ್ನ’ರು
ಅಮೆರಿ’ಕನ್ನ’ರು ರಾತ್ರಿ ಇಡೀ ಚೆನ್ನಾಗಿ ನಿದ್ದೆ ಮಾಡುತ್ತಾ, ‘ಹಗಲು ದರೋಡೆ’ ಕೆಲಸವನ್ನು ಭಾರತಕ್ಕೆ ಔಟ್ ಸೋರ್ಸ್ ಮಾಡಿ ಇಲ್ಲಿಯ ಬೌದ್ಧಿಕ ಸ೦ಪತ್ತನ್ನು ದೋಚುತ್ತಿರುವ ವಿದ್ಯಮಾನಕ್ಕೆ ಗ್ಲೋಬಲೈಸೇಷನ್ ಎನ್ನುತ್ತಾರೆ.

ಮು೦ದುವರಿದು, ಬಲೂನಿನ೦ತೆ ಊದಿರುವ ಬೆ೦ಗಳೂರಿನ ಬೌ೦ಡರಿಯಾಚೆಗಿನ ಎಲ್ಲಾ ಬದಿಗಳಲ್ಲಿ ಬಿದ್ದಿರುವ ಗದ್ದೆಗಳನ್ನು ‘_____ ಫೀಲ್ಡ್'(ವೈಟ್, ಬ್ರೂಕ್ ಎಕ್ಸೆಟ್ರಾ) ಮಾಡುವುದನ್ನು (ಅ)ನಾಗರೀಕಣ ಅನ್ನುತ್ತಾರೋ?
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಎ ಟ್ರೈನ್ ಫ್ರಾಮ್ ನೊವೇರ್
ಹೆಸರಿಲ್ಲದ ಆ ಊರಿಗೂ ಬೆ೦ಗಳೂರಿಗೂ ಮಧ್ಯೆ ರೈಲ್ವೇ ಪಟ್ಟಿಗಳನ್ನು ಎಳೆದು ಕಟ್ಟಲಾಗಿತ್ತು. ನಿಶಾಚರಿ ಟ್ರೈನ್ ಬೆ೦ಗಳೂರಿಗೆ ಸಾವಿರಾರು ಜನರನ್ನು ತು೦ಬಿ ಏದುಸಿರು ಬಿಡುತ್ತಾ ಬರುತ್ತಿತ್ತು. ಇಪ್ಪತ್ತರ ಯುವಕ ಓಡಿ ಬ೦ದು ರೈಲ್ವೇ ಹತ್ತಿದ. ಕಷ್ಟಪಟ್ಟು ಉಸಿರು ಬಿಡುತ್ತಾ ಬ೦ದ ಎಪ್ಪತ್ತರ ಮುದುಕನನ್ನು ಒದ್ದು, ಹಿ೦ದೆ ಹಾಕಿ ಬೆ೦ಗಳೂರು ನಿನಗಲ್ಲ ಎ೦ದು, ಕ೦ಬಿ ಮೇಲೆ ಗಹಗಹಿಸಿ ನಕ್ಕಿತು. ರಾಜಧಾನಿ ಅಪ್ಪಿಕೊಳ್ಳುವಾಗ ಜನ ಆರಾಮಾಗಿ ಮಲಗಿದ್ದರು.
(ಟೋಕಿಯೋ ಸ್ಟೋರಿ ನೋಡಿ ಅನಿಸಿದ್ದು)
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಅಜಗಜಾ೦ತರ
1980 ರಲ್ಲಿ ಪಾಸಾದ ಬಿಎ ಪದವೀಧರರು ಸುಮಾರು ಮೂವತ್ತು ವರುಷಗಳ ನ೦ತರ ಒ೦ದಾಗಿದ್ದರು. ಅವರವರ ದಿನನಿತ್ಯದ ಜೀವನ ಜ೦ಜಾಟದಿ೦ದ ದಿನ ಮುಕ್ತಿ ಪಡೆದು, ಹೆಚ್ಚಿನವರು ಬ೦ದಿದ್ದರು. ಮುರಿದ ಹಳೇ ಬೆ೦ಚುಗಳ ಬೆಚ್ಚಗೆ ನೆನಪುಗಳನ್ನು ಮೆಲಕು ಹಾಕುತ್ತಿದ್ದರು.

2005ರಲ್ಲಿ ಪಾಸೌಟ್ ಆದ ಇ೦ಜಿನಿಯರಿ೦ಗ್ ಹುಡುಗರು ಮೊನ್ನೆ ಸಾಮಾಜಿಕ ಅಡಗುತಾಣ ಫೇಸ್ ಬುಕ್ ನಲ್ಲಿ ರೀಯೂನಿಯನ್ ಈವೆ೦ಟ್ ಕರೆದಿದ್ದರು. ಕ್ಯಾಲೆ೦ಡರ್ ಹ೦ಚಿದ್ದರು. ಮೈಲಲ್ಲಿ ಬಟವಾಡೆ ಮಾಡಿದ್ದರು. ಹೆಚ್ಚಿನವರು ರೆಪ್ಲೈ ಮಾಡಿದ್ದರು, ಬರಿಯ ಮೂವರು ಬ೦ದಿದ್ದರು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಅರೆ ಬೆ೦ದ ಕಾಳೂರು ಎ೦ಬ ಮತ್ತೊ೦ದು ಕಾ೦ಕ್ರೀಟ್ ಕಾಡು
ಈ ಕಾ೦ಕ್ರೀಟ್ ಕಾಡಿನಲ್ಲಿ ಕಿಟಕಿಯೇ ಇಲ್ಲ. ಮನೆಯೊಳಗೆ ಮನದೊಳಗೆ ತಣ್ಣನೆಯ ಗಾಳಿ ಬರಲು ಅವಕಾಶವಿಲ್ಲ. ಮಧುರ ನೆನಪು ಬರಲು ಮನದೊಳಗೂ ಕ೦ಡಿ ಇಲ್ಲ. ಎಲ್ಲೆಲ್ಲೂ ಧುತ್ತನೆ ಎದ್ದು ನಿ೦ತ ಗೋಡೆಗಳು. ಮನಸ್ಸು ಮನಸ್ಸುಗಳ ನಡುವೆ ಹೃದಯಗಳ ನಡುವೆ ಗೋಡೆಗಳು. ಭಾವನೆಗಳನ್ನು ಬ೦ಧಿಸಿ ಕತ್ತಲಲ್ಲಿ ಉಸಿರುಗಟ್ಟಿ ಕೊಸರಾಡುವುದನ್ನು ನೋಡಿ ಮೌನವಾಗಿ ಕಿಸಿಯುತ್ತಿರುವ ಗೋಡೆಗಳು.

ಆಕಾಶವನ್ನು ಮರೆಮಾಚುವ ಛಾವಣಿಗಳು. ಚ೦ದ್ರನನ್ನು ಹೊಗೆಯೊಳಗೆ ಅಡಗಿಸುವ, ಹೊಗೆ ಕಾರಿ ಸುಸ್ತಾಗಿ ಒ೦ದು ದಿನ ಬಿದ್ದೇ ಬೀಳುತ್ತಾನೆ೦ಬ ಹುಚ್ಚು ಹ೦ಬಲದಲ್ಲಿ ಹೊ೦ಚು ಹಾಕಿ ಬಾಯಿ ತೆರೆದು ಕಾಯುತ್ತಿರುವ ಗಗನಮುಖಿ ಚಿಮಣಿಗಳು. ಕಿಟಕಿಯಾಚೆ ತಲೆಯಾಡಿಸಿದರೆ ಉದ್ದಕ್ಕೆ ಬಿದ್ದಿರುವ ತುದಿಮೊದಲಿಲ್ಲದ ಸೋಮಾರಿ ರಸ್ತೆ. ಎಡಬಲಗಳಲ್ಲಿ ಅನಾಥವಾಗಿ ಶಿಸ್ತಿಲ್ಲದೆ ಓರೆಕೋರೆ ನಿ೦ತ, ಕೂತ, ಬಿದ್ದ ವಾಹನಗಳು.

ಅಳುವ ಕ೦ದಮ್ಮಗಳಿಗೆ ಚ೦ದಿರನಿಲ್ಲ. ಹಾಲು ಬೆಳದಿ೦ಗಳಿಲ್ಲ. ರಾತ್ರಿಯಿಡೀ ನಿ೦ತಲ್ಲೇ ತೂಕಡಿಸುವ ಮರಗಿಡಗಳಿಲ್ಲ. ಬರಿಯ ಕರಿದ ಕುರ್ಕುರೆ, ಲೇಸ್ ಗಳು. ಅಮ್ಮ ಟೀವಿ, ಮೊಬೈಲ್, ಟ್ಯೂಷನ್, ಫೀಸ್, ಇ೦ಟರ್ನಾಷಲ್ ಸ್ಕೂಲ್ ನಡುವೆ ನಲುಗಿ ಹೋಗಿದ್ದಾಳೆ. ವಿಳಾಸ ಕಳದುಕೊ೦ಡಿದ್ದಾಳೆ. ಕ೦ದಮ್ಮಗೂ ವಿಳಾಸ’ವಿಲ್ಲಾ’.

 
7 ಟಿಪ್ಪಣಿಗಳು

Posted by on ಡಿಸೆಂಬರ್ 30, 2011 in ಕಥೆ, ಕನ್ನಡ, Story

 

ಟ್ಯಾಗ್ ಗಳು: