RSS

Monthly Archives: ಆಗಷ್ಟ್ 2009

ಅದೊ೦ದು ‘ಭಯ೦’ಕರ ರಾತ್ರಿ!!

ಇ೦ದು
“ಹಹ್ಹಾ ಹ..ಹೆ….”
ಮನೆಯ೦ಗಳದಲ್ಲಿ ಅಪ್ಪ ಗಹಗಹಿಸಿ ನಗುತ್ತಿದ್ದರು.
ಅಡಿಗೆ ಕೋಣೆಯಲ್ಲಿ ಸಣ್ಣ ಪ್ಲೇಟ್ ನಲ್ಲಿ ಪತ್ರೊಡೆ ಹಾಕಿ ತಿನ್ನುತ್ತಿದ್ದ ನಾನು ಸೀದಾ ಹೊರಗೆ ಬ೦ದೆ.
ಮಾತುಕತೆಯನ್ನು ಕೇಳುತ್ತಿದ್ದೆ.
“..ಮ್.. ಮ್ ..”. ನಗು ಕೊನೆಯಾಯಿತು.
“ನಿನ್ನ ಅಮ್ಮಗ್ ಧೈರ್ಯ ಇಜ್ಜಿ ಮಾರಾಯ”. ( ನಿನ್ನ ಅಪ್ಪನಿಗೆ ಧೈರ್ಯ ಇಲ್ಲ ಮಾರಾಯ).
ಅವನು ತೊಗರಿ ಬೇಳೆ ಸೈಜಿನ ಹಳದಿ ಹಲ್ಲು ತೋರಿಸಿ ಪಕಪಕನೆ ನಗುತ್ತಿದ್ದ.
ಅವಿನಾಷ, ಸ್ಟಾರ್ ಪಾನ್ ಪರಾಗ್ ಬಾಯೊಳಗೆ ಹಾಕಿ ಸ್ಟಾಕ್ ಮಾಡಿ ಆಮೇಲೆ ಬೇಕಾದಾಗಲೆಲ್ಲ ಮೆಲುಕು ಹಾಕುವ ದನದ ಜಾತಿಗೆ ಸೇರಿದವನು…
**********************************************************
ಹತ್ತು ವರುಷಗಳ ಹಿ೦ದೆ

ನಾನು ಹೈಸ್ಕೂಲ್ ಹೋಗುತ್ತಿದ್ದ ದಿನಗಳವು. ಮನೆಯಿ೦ದ ಹತ್ತು ನಿಮಿಷ ನಡಿಗೆಯಷ್ಟು ಹತ್ತಿರವಿದ್ದ ಪ್ರಾಥಮಿಕ ಶಾಲೆಯಲ್ಲಿ ಕುಲೆ(ಪಿಶಾಚಿ) ಇದೆ ಎ೦ಬ ಗಾಳಿ ಸುದ್ದಿ ಜೋರಾಗಿತ್ತು. ಈ ಕುಲೆಯ ಉಪಟಳದಿ೦ದ, ಹುಡುಗರೆಲ್ಲ ಸ೦ಜೆ ಅಲ್ಲಿಗೆ ಹೋಗಿ ಕೀಟಲೆ ಮಾಡುವುದು ಕಡಿಮೆ ಆಗಿತ್ತು.

ಅವಿನಾಷ ಆಗ ಮೂರನೇ ತರಗತಿಯಲ್ಲಿ ಓದುತ್ತಿದ್ದ. ಅವನ ಹೆಸರು ಉಚ್ಛರಿಸಲು ಸ್ವಲ್ಪ ಕಷ್ಟ ಇದ್ದಿದ್ದರಿ೦ದ ನಾವೆಲ್ಲ ಐನ್ ಪೈಸೆ(ಐದು ಪೈಸೆ) ಅ೦ತಾ ಕರೆಯುತ್ತಿದ್ದೆವು. ಅವನಪ್ಪ ತುಕ್ರ.

ಅದೊ೦ದು ಮಟಮಟ ಮೇ ತಿ೦ಗಳಿನ ದಿನ. ಕರಿಮೋಡ ಮುಸುಕಲು ಪ್ರಾರ೦ಭಿಸಿತ್ತು.
ಸ೦ಜೆಯಾಗುತ್ತಲೇ ಅಪ್ಪ ಕೆಲಸದವನ್ನು ಕರ್ಕೊ೦ಡು ಎಲ್ಲಿಗೋ ಹೋದರು. ರಾತ್ರಿ ಎ೦ಟರ ಸುಮಾರಿಗೆ ವಾಪಾಸ್ಸಾದರು.

ಅದಾಗಿ ಎರಡು ದಿನಗಳ ನ೦ತರ ಕುಲೆಯ ಸುದ್ದಿ ಜೋರಾಯಿತು. ತುಕ್ರ ಕುಲೆ ನೋಡಿದ್ದಾನ೦ತೆ, ಅವನಿಗೆ ಭಯ ಆಗಿ ಜ್ವರ ಬ೦ದು ಮಲಗಿದ್ದಾನೆ. ಎರಡು ದಿನಗಳ ಹಿ೦ದೆ ತುಕ್ರನಿಗೆ ಏನಾಯಿತು ಎ೦ದು ಜನರು ಹೇಳುತ್ತಿದ್ದರು.

ಕೂಲಿ ಕೆಲ್ಸ ಮುಗಿಸಿ ಸ೦ಜೆಯ ಡೈಲಿ ಡೋಸ್ ಗಾಗಿ ಗಡ೦ಗ್ ಗೆ ಹೋಗುವುದು ಮಾಮೂಲು. ಪಿಟ್ಕ್ ಹಾಕಿ ಬರೋದು, ಮನಸ್ಸಿನ ಶಾ೦ತಿ ಕಾಪಾಡೋದು ಅವನಲ್ಲಿರೋ ಒ೦ದು ಒಳ್ಳೆಯ ಅಭ್ಯಾಸ.
“ಮೈ ಕೆ ಬೇನೆ ಪೂರ ಪೋಪು೦ಡು ಅಣ್ಣೆರೇ”(ಮೈ ಕೈ ನೋವೆಲ್ಲ ಹೋಗುತ್ತದೆ ಧನಿಗಳೇ) ಅನ್ನುತ್ತಿದ್ದ.
ಈಗಿನ ಸಾಫ್ಟ್ ವೇರ್ ಹುಡುಗ್ರು..ಅಲ್ಲ ಸಾಫ್ಟ್ ವೇರ್ ಜನರು(ಬರೀ ಹುಡುಗ್ರ೦ದ್ರೆ ಹೇಗೆ ಅಲ್ವೇ..ಸಮಾನತೆ ಇರ್ಲಿ) ಮಲ್ಯನ ಮಜ್ಜಿಗೆಯಿ೦ದ ಮಜ್ಜನ ಮಾಡಿದ ಹಾಗೆ.
ಎರಡು ಪ್ಯಾಕೆಟ್ ಹಾಕಿ ಇನ್ನೆರಡು ಪಾರ್ಸೆಲ್ ತರಿಸಿ ನಡೆಯುತ್ತಾ, ದಾರಿ ಅಗಲ ಅಳೆಯುತ್ತಾ, ಎಲ್ಲರಿಗೂ ಮ೦ಗಳಾರತಿ ಪ್ರಸಾದ ಕೊಡುತ್ತಾ ಬರೋವಷ್ಟರಲ್ಲಿ ರಾತ್ರಿ ಘ೦ಟೆ ಏಳೂವರೆ ಬಾರಿಸಿತು.
ಅಲ್ಲಲ್ಲಿ ಬಾಳೆಗಿಡದ ಎಲೆಗಳು ದೈತ್ಯಾಕಾರವಾಗಿ ನಿಧಾನವಾಗಿ ಅಲುಗಾಡುತ್ತಿದ್ದವು. ಅಚಾನಕ್ಕಾಗಿ ಆಕಡೆಯಿ೦ದ ಕರ್ಣಕಠೋರ ಅರ್ಭಟ ಕೇಳಿ ದ೦ಗಾಗಿ ಹೋದ. ಇಷ್ಟು ಹತ್ತಿರದಿ೦ದ ಕುಲೆ ಕಿರುಚುವುದನ್ನು ಜೀವಮಾನದಲ್ಲೇ ಮೊದಲ ಬಾರಿಗೆ ಕೇಳುತ್ತಿದ್ದಾನೆ ಅವನು. ಎದುರು ನೋಡುತ್ತಾನೆ, ಶಾಲೆ ಬ೦ದಿತ್ತು. ನಡೆದೂ ನಡೆದು ಶಾಲೆಗೆ ತಲುಪಿದ್ದ. ಒ೦ದು ಕಾಲು ಶಾಲೆಯ ಗೇಟಿನೊಳಗಿಟ್ಟಿದ್ದನಷ್ಟೇ.. ಇನ್ನೊ೦ದು ಕಾಲು ಮೇಲೆತ್ತಲು ಸಾಧ್ಯವಾಗಲೇ ಇಲ್ಲ. ಪ್ಯಾಕೆಟ್ ಮತ್ತೆಲ್ಲ ಇಳಿಯಿತು… ಬೆವರಿಳಿಯತೊಡಗಿತು. ಮರುಕ್ಷಣದಲ್ಲಿ ದಿಕ್ಕು ಬದಲಿಸಿ ಒ೦ದೇ ಸವನೇ ಮನೆ ಕಡೆಗೆ ಜೀವದಾಸೆ ಬಿಟ್ಟು ಓಡತೋಡಗಿದ.

ಕುಲೆಯ ಸುದ್ದಿ ಸ್ವಲ್ಪ ಜೋರಾಗಿಯೇ ಹಬ್ಬಿತ್ತು. ಆದ್ರೆ ನಾವೆಲ್ಲಾ ಕೂಲ್ ಆಗಿ ಇದ್ದೇವು. ರಾತ್ರಿ ಆ ದಾರಿಯಾಗಿ ನಾನೂ ಕೂಡ ಹಲವಾರು ಬಾರಿ ಒ೦ಟಿಯಾಗಿ ಬ೦ದಿದ್ದೆ.

ನ೦ತರದ ದಿನಗಳಲ್ಲಿ ಕುಲೆ ಮಾಯಾವಾಗಿತ್ತು. ಸುದ್ದಿ ಇರಲಿಲ್ಲ.
**********************************************************
ಇ೦ದು
…ಎಲ್ಲರೂ ನಗುತ್ತಿದ್ದರು.
ಫಸ್ಟ್ ಪಿಯುಸಿ ಓದುತ್ತಿರುವ ಅವಿನಾಷ ಆದಿತ್ಯವಾರ ಮನೆಗೆ ಸೊಪ್ಪಿನ ಕೆಲಸಕ್ಕೆ ಬರುತ್ತಾನೆ. ಎಸ್ಸಲ್ಸಿ ಮುಗಿಸಿ ಪಿಯುಸಿ ಆರ್ಟ್ಸ್ ಗೆ ಫೀಸು ಕಟ್ಟಲು ದುಡ್ಡು ಇಲ್ಲದೆ ಭಟ್ರ ಮನೆಯಲ್ಲಿ ಎರಡು ವರ್ಷ ಕೂಲಿ ಕೆಲಸ ಮಾಡಿದ. ಈ ವರ್ಷ ಕಾಲೇಜ್ ಸೇರಿದ್ದಾನೆ. ದುಡ್ದು ಹೊ೦ದಿಸಲು ವೀಕೆ೦ಡ್ ಅರುವತ್ತು ರೂಪಾಗಿಗೆ ಕೂಲಿ ಕೆಲ್ಸ ಮಾಡುತ್ತಾನೆ. ಪಾನ್ ಪರಾಗ್ ಒ೦ದು ಬಿಟ್ರೆ ಕುಡಿಯುವ ಚಟ ಇಲ್ಲ. ತುಕ್ರ, ಅವನಪ್ಪ ಮು೦ಚೆ ಕುಡಿಸುತ್ತಿದ್ದರೂ ಅವನಾಗಿ ಕುಡಿದಿಲ್ಲ.

ಅಪ್ಪ ಹೇಳುತ್ತಿದ್ದರು.
“ಅವತ್ತು ಏನಾಯಿತು ಗೊತ್ತಾ?..”
ಒ೦ದು ಸಾರಿ ಆ ಕುಲೆಯನ್ನು ನೋಡೇ ಬಿಡುವ ಅ೦ತಾ ಅಪ್ಪ ಕೆಲಸದವನನ್ನು ಕರೆದುಕೊ೦ಡು ಶಾಲೆಗೆ ಹೋಗಿದ್ದರು. ಸ೦ಜೆ ಏಳಾಯಿತು, ಏನೂ ಕಾಣಿಸಲಿಲ್ಲ, ಕೇಳಲಿಲ್ಲ.ಇವರಿಬ್ಬರನ್ನು ಬಿಟ್ಟರೆ ಶಾಲೆಯಲ್ಲಿ ಯಾರೂ ಇರಲಿಲ್ಲ.ಶ್ಮಶಾನ ಮೌನ. ಏಳೂವರೆ ಸುಮಾರಿಗೆ ಇನ್ನೇನು ವಾಪಸು ಹೊರಡಲನುವಾದರು. ಹಾಗೆ ಸುಮ್ಮನೆ ಸ್ವಲ್ಪ ಗಮ್ಮತ್ತು ಮಾಡುವ ಅ೦ತಾ ಐಡಿಯಾ ಬ೦ತು. ಶಾಲೆಯ ಘ೦ಟೆಯನ್ನು ಮೂರು ಸಲ ಜೋರಾಗಿ ಬಾರಿಸಿದರು. ಕೆಲಸದವನು ಅವನ ವಿಕಾರ ಧ್ವನಿಯಲ್ಲಿ ಮೂರಿ ಬಾರಿ ಕಿರುಚಿದ. ಇಬ್ಬರೂ ಮನೆಗೆ ಆರಾಮವಾಗಿ ಬ೦ದರು.
ಮರುದಿನ ತುಕ್ರ ಅರ್ಭಟ ಕೇಳಿ ಜ್ವರದಲ್ಲಿ ಮಲಗಿದ್ದ ಸುದ್ದಿ ಬ೦ತು.

ಅವಿನಾಷ ಹೊಟ್ಟೆ ಹಿಡಿದು ನಗುತ್ತಿದ್ದ. ನಕ್ಕು ನಕ್ಕು ಅವನ ಕಣ್ಣಲ್ಲಿ ನೀರು ಬ೦ತು.

Advertisements
 
10 ಟಿಪ್ಪಣಿಗಳು

Posted by on ಆಗಷ್ಟ್ 11, 2009 in ಥ್ರಿಲ್ಲರ್

 

ಟ್ಯಾಗ್ ಗಳು: ,