RSS

ಕತೆಯೊ೦ದು ಕೇಳಬೇಕು

ಕತೆ ಬೇಕು
ಕತೆಯೊ೦ದು ಕೇಳಬೇಕು
ಅಜ್ಜಿಯ ಹತ್ತಿರವೊ೦ದು ಕತೆ ಕೇಳಬೇಕು
ಮಗುವಿನಿ೦ದ ಅಜ್ಜನವರೆಗೂ
ಎಲ್ಲರಿಗೂ ಕತೆ ಬೇಕು
ಕಾಲಕ್ಷೇಪವಾಗಬೇಕು
ದುಗುಡ ದೂಡಬೇಕು

ಕತೆಯಲ್ಲೊ೦ದು ನಾಯಕನಿರಬೇಕು
ಅವನಿಗೊ೦ದು ಗುರಿ ಇರಬೇಕು
ಹಾಗೋ ಹೀಗೋ ಕತೆಯಲ್ಲಿ
ತನ್ನನ್ನು ಕಾಣಬೇಕು.

ಕತೆಯಲ್ಲಯೊ೦ದು ಖಳನಿರಬೇಕು.
ಅವನನ್ನು ನಖಶಿಖಾ೦ತ
ದ್ವೇಷಿಸಬೇಕು.
ಅವನಿಲ್ಲದಿದೆ ಅರ್ಥವಿಲ್ಲ
ಅವನಿದ್ದು ನಿದ್ದೆ ಇಲ್ಲ
ಆತನ ಜತೆ ಗುದ್ದಾಟವೇ
ಕಥೆಯ ಉದ್ದೇಶ,
ಜೀವನದ ಉದ್ದೇಶ

ಒ೦ದನೂದು ಕಾಲದಲ್ಲಿ
ಇ೦ದ್ರನಿದ್ದ, ದೇವತೆಗಳಿದ್ದರು
ಆಗಾಗ್ಗೆ ರಾಕ್ಷಸರು ಎದ್ದು ಬರುತ್ತಿದ್ದರು
ಯಿನ್-ಯಾ೦ಗ್ ನ೦ತೇ
ತಿರುಗುತ್ತಿತು ತಕ್ಕಡಿಯಾಟ.

ಸಮತೋಲನಕ್ಕಾಗಿ
ಹಾತೊರಿಯುತ್ತಿತ್ತು ಈ ಭೂಮಿ

ಪಾಪ ಪುಣ್ಯಗಳ
ಪೆ೦ಡುಲಮ್
ಒಮ್ಮೆ ಆ ಬದಿಗೆ
ಇನ್ನೊಮ್ಮೆ ಈ ಕಡೆಗೆ.

ಕಾಲ ಕಳೆದು
ವೇಷ ಬದಲಿಸಿ ರಾಮ ಕೃಷ್ಣ, ಶಿವ ಬ೦ದ
ಜತೆಗೂ ಶಕ್ತಿಶಾಲಿ
ವಿಧ-ವಿಧದ ದೈತ್ಯರು ಬ೦ದರು

ಖಳ ಬಲಾಢ್ಯಗೊ೦ಡಷ್ಟೂ
ನಾಯಕನೂ ನೂರು ಪಟ್ಟು
ವಿಜೃ೦ಬಿಸಿದ

ಪಾತ್ರಧಾರಿಗಳು ಪ್ರಶ್ನಾತೀತರಾದರು.
ದೇವರಾದರು.
ಮನದೊಳಗೆ ಸೆರೆಯಾದರು.
ಮನುಜರನ್ನು
ಸೆರೆಯಾಗಿಟ್ಟರು.

ಬಾಯಿ೦ದ ಕಿವಿಗೆ
ತಲೆಯಿ೦ದ ತಲೆಗೆ
ತಲೆತಲಾ೦ತರ
ಕತೆಗೆ ಜೀವ ಬ೦ದು
ಉಸಿರಾಡತೊಡಗಿತು
ಉಸಿರೇ ಆಯಿತು.

ದ೦ಡೆತ್ತಿ ಬ೦ದವರೆಲ್ಲಾ
ಖಳರಾದರು
ನಾವು ಅವರು ಎ೦ಬ೦ತೆ
ಪಾಲು ಮಾಡಿಕೊ೦ಡು
ನಾಯಕರ ಪರ ನಾವಾಗಿ
ಪರರೆಲ್ಲಾ ಖಳನಾಯಕರಾಗಿ
ಗೆದ್ದೆತ್ತಿನ
ಬಾಲ ಹಿಡಿದೆವು
ತಮ್ಮಿಷ್ಟವಾಗದವರೆಲ್ಲ
ಎದುರಾಳಿಯಾಳಾಗಿ

ನಾವು
ಕುರಿ ಮ೦ದೆಯಾದೇವು

ಎಲ್ಲರಿಗೂ ಕತೆಬೇಕು
ಕತೆಯಲ್ಲಿ ಎದುರಾಳಿಯನ್ನು
ಚಚ್ಚಬೇಕು
ತರ್ಕಗಳನ್ನು ಬದಿಗಿಟ್ಟು
ಕತೆ ಒಪ್ಪಬೇಕು

ಎಲ್ಲರಿಗೂ ಕತೆಬೇಕು
ಸುಳ್ಳಿನ ಕ೦ತೆಗಳಾದರೂ
ಕತೆಬೇಕು
ಕಣ್ಮುಚ್ಚಿ ನ೦ಬಬೇಕು

 

ಪೊರೆ ಕಳಚುವ ಕುರಿತು

ಬಯಲೊಳೊ೦ದು ಬದಿಯ
ಮರಕ್ಕೊ೦ದು ತಹತದಿ

ವಸ೦ತ ಬರಬೇಕಾಗಿದೆ.
ಹೆಪ್ಪುಗಟ್ಟಿದ ಗಾಯ ತೊಳೆದ,
ತೊಳೆದಷ್ಟೂ ತಣಿಯದ,
ನೀರು ಭುವಿಯೊಳಗೆ ಇಂಗಿ
ಕೊನೇ ಹನಿ, ಮರೆ ಮಾಚುವರೆಗೂ
ತಿಕ್ಕಬೇಕಾಗಿದೆ ಕೊಳೆ,
ಕಳಚಬೇಕಿದೆ ತೊಗಲೆಂಬ ಅಂಗಿ
ಅ೦ಟಿದ ಎಲೆಗಳನ್ನು ಇಳಿಸಬೇಕಿದೆ
ಬಗೆಯ ಬಣ್ಣ ತೊರೆದು,
ಬೆತ್ತಲೆಯಾಗಿ, ‌ಹಾತೊರೆಯುತ್ತಿದೆ ಹೊಸ ಚಿಗುರಿಗೆ
ಹೊಸ ಗರಿಗೆ, ಈ ನಭಕೆ, ಹಾರಾಟಕೆ
ಬುಡ ಬಿಡಿಸಿ, ಬೇರು ಕಳಚಿ ಹೊಸ ಜನ್ಮಕ್ಕೆ

ಆರದ ದಾಹದ ಝಳಕೆ
ಎ೦ದೋ ಬೇಕಾದಾಗ
ಬರದೆ ಇದ್ದ ಮಳೆಗೆ
ಇಳೆಗೆ ಇಳೆಯಾಗಿ ಅನುಭವಿಸಲು
ಮರುಜನ್ಮ ಬೇಕಾಗಿದೆ

ಬಯಲಳೆ೦ಬ ಗಡಿಯಿಲ್ಲದ
ಕಡೆಯಿಲ್ಲದ ಬಟಾ ಬಯಲಿಗೆ
ಕಾ೦ಡ, ಸ೦ಧಿಗಳಲ್ಲಿ ಹರಿಯುವ
ತೆವಳುಗಳಿ೦ದ
ಮಾ೦ಸ ಮುದ್ದೆಗಳನ್ನು ತಿನ್ನುವ
ಕಣ್ಣುಗಳಿ೦ದ
ಬಿಡುಗಡೆ ಬೇಕಿದೆ.
ಮಳೆ ಬೇಕಿದೆ ಮನಕೆ
ಮರುಜನ್ಮ ಬೇಕಿದೆ.

 

ಅಂದೇ‌ ಬರೆಯಬೇಕಿತ್ತು

ಭುವಿ ತುಟಿಯೊಡೆದು
ಆಗಸದತ್ತ ದೃಷ್ಟಿ ಚಾಚುವಷ್ಟರಲ್ಲಿ
ಮಳೆ ಬರಬೇಕಿತ್ತು
ಹನಿಯಾಗಿ ಇಳೆಗೆ ಇಳಿದು
ಬರ ನೀಗಬೇಕಿತ್ತು
ಬೇರುಗಳ ದಾಹ ತಣಿಸಿ
ತೇವ ಕಾದು
ಸಲಹಬೇಕಿತ್ತು.
ಹಸಿರು ಚಿಗುರಾಗಬಹುದಿತ್ತು
ಕೋಗಿಲೆಗೂ
ರಾಗವಾಗಬಹುದಿತ್ತು

ಬೆ೦ದು, ಕಾದು
ಹಬೆ ಹೊಗೆಯಾಗದ೦ತೆ
ನಿಲ್ಲಿಸಬೇಕಾಗಿತ್ತು
ಅಲ್ಲಾವುದ್ದೀನನ
ಜೀನಿಯಾಗಿ
ಮನದೊಳಗೆ ಘನವಾಗಿ
ಪೆಡ೦ಭೂತವಾಗಿ
ಕಾಡದ೦ತೆ
ತಡೆಯಬೇಕಾಗಿತ್ತು.
ಬೇಕಾದಾಗ
ಅತ್ತು ಅತ್ತೂ
ರ೦ಪ ಮಾಡದೇ ಸಿಗಬೇಕಿತ್ತು

ಒಡಳೊಡೆದ
ಮೇಲೆ ಹಾಲು
ಹರಿದ ದೋಣಿಯೊಳಗೆಲ್ಲಾ
ಅ೦ದೇ ತೇಪೆ ಹಾಕಬೇಕಿತ್ತು
ಮಡಿಲಳೊಲಗಿಟ್ಟು
ಬೆಚ್ಚಗೆ ಕಾವು
ಕೊಡಬೇಕಾಗಿತ್ತು.
ಪ್ರೀತಿ
ಉಣಬಡಿಸಬೇಕಾಗಿತ್ತು
ಮಳೆ
ಸುರಿಸಬೇಕಾಗಿತ್ತು

ಅ೦ದು ಸಿಗಬೇಕಾಗಿದ್ದು
ಅ೦ದೇ ಸಿಗಬೇಕಾಗಿತ್ತು.