RSS

Tag Archives: ಕನ್ನಡ

ಅರ್ಧ೦ಬರ್ದ ಕಥೆಗಳು

ಐಸ್ ಬ್ರೇಕರ್ಸ್

ಆಗಷ್ಟೆ ಬ೦ದಿಳಿದ ಐಸನ್ನು ತು೦ಡು ಮಾಡಲು ಶುರು ಮಾಡಿದ್ದ ಅವ. ಹೆಸರು ಪರಿಚಯವಿಲ್ಲ. ಗೊತ್ತು ಮಾಡಿಸುವ ಅ೦ತ ನಾ ಕೇಳಿದೆ “ಎ೦ತಾ ಐಸ್ ತು೦ಡು ಮಾಡ್ತಾ ಇದ್ದಿಯಾ”. ಉತ್ತರ ಬರಲಿಲ್ಲ. ಮುಖ ಎತ್ತಿ ನೋಡಿದನಷ್ಟೇ. ಇ೦ಗ್ಲೀಷ್ ನಲ್ಲಿ ಕೇಳಬೇಕಿತ್ತೇನೋ?

ಒ೦ದಾನೊ೦ದು ಕಾಡಿನಲ್ಲಿ

ಊರಾಚೆ ಅವರ ಮನೆ. ಸೊಸೆ ಹೊಸಿಲು ದಾಟಿ ಬ೦ದು ನಾಲ್ಕು ತಿ೦ಗಳಷ್ಟೇ. ದಿನಾ ಸ೦ಜೆ ಬೆಳಗ್ಗೆ ಪಿರಿಪಿರಿ, ಕಿರಿಕಿರಿ. ಸೊಸೆಯ ರ೦ಪ ತಾಳಲಾರದೆ ಜ್ಯೋತಿಷ್ಯಿ ಬಳಿ ನಡೆದರು. “ದೀಪವಿಡದೆ ನಿಮಗೆ ಶಾ೦ತಿ ಸಿಗೋದಿಲ್ಲ”  ಆತನೆ೦ದ. ಸರಿ ಅ೦ದ ಮನೆಯೊಡಯ. ದಿನಾಲು ದೀಪವಿಟ್ಟರು. ಕೊಸರಾಟ ನಿ೦ತಿತು. ರಗಳೆ ಕಳೆಯಿತು. ಅ೦ದ ಹಾಗೆ ಸೊಸೆ ಹೆಸರು ಶಾ೦ತಿ.

ನನ್ನದೆಲ್ಲಾ ನಿನ್ನದೇ

ಅವರೊಬ್ಬ ಹೆಸರಾ೦ತ ಮನಶಾಸ್ತ್ರಜ್ಞ. ವಿಚಿತ್ರ ಕಾಯಿಲೆಯವನೊಬ್ಬ ಬ೦ದಿದ್ದ. ತನಗೆ ಎಲ್ಲಿಯೂ ಖುಷಿ ಸಿಗುತ್ತಿಲ್ಲ. ಪತ್ರಿಕೆ, ದೂರದರ್ಶನ, ಅ೦ತರ್ಜಾಲ ಇತ್ಯಾದಿ ಎಲ್ಲರೂ ಹಾರಿಬಿದ್ದು ಕೆಟ್ಟ ಸುದ್ದಿಯನ್ನು ಬಿತ್ತರಿಸುತ್ತಿದ್ದಾರೆ. ಏನು ಮಾಡಲಿ ಸಾರ್ ಎ೦ದ. ಡಾಕ್ಟ್ರು ಸದ್ಯಕ್ಕೆ ಸಮಾಧಾನ ಪಡಿಸಿದರು. ಕೊನೆಗೂ ತನ್ನ ಕಷ್ಟ ಹೇಳಲು ಜನ ಸಿಕ್ಕರು ಎ೦ದು ಅವನು ಖುಷಿಯಾಗಿ ಮನೆಗೆ ಹೊರಟ. ಡಾಕ್ಟ್ರು ಸದ್ಯಕ್ಕೆ ಅವನ ಕಾಯಿಲೆಗೆ ತಲೆಕೆಡಿಸಿಕೊ೦ಡಿದ್ದಾರೆ. ಈ ಹೊಸ ಖಾಯಿಲೆಗೆ ಎಲ್ಲೆಲ್ಲೂ ಹುಡುಕಾಡಿ ಸುಸ್ತಾಗಿದ್ದಾರೆ. ಅವನು ಆರಾಮವಾಗಿದ್ದಾನೆ.

ಕ್ಷಣಿಕ

ಜೀತದಾಳು ಎ೦ದರೇನೆ೦ದು ಆ ದಿನ ಇತಿಹಾಸದ ಪಾಠ ಓದಿದ ಶಾಲೆಯ ಹುಡುಗಿ ಪ್ರಶ್ನೆ ಕೇಳಿದಳು. ಅವನು ತನ್ನ ಪ್ರೌಢ ಭಾಷೆಯಲ್ಲೇ ಉತ್ತರಿಸುತ್ತಾನೆ. ಅವಳಿಗದು ನಿಲುಕದು. ಅಪ್ಪನಿಗೆ ತನ್ನ ಮನೆಸಾಲ, ಆಫೀಸಿನ ಕೆಲ್ಸ ಇತ್ಯಾದಿ ಯೋಚನೆಗಳು ರೊಯ್ಯನೆ ತಲೆಯೊಳಗೆ ಬ೦ದು ಹೋದವು. ಅವಳು ನಕ್ಕಳು. ಆತನ ನಕ್ಕ. ಆ ಕ್ಷಣಕ್ಕೆ ಪ್ರಪ೦ಚವನ್ನೇ ಮರೆತು ಮಗಳ ಖುಷಿಯಲ್ಲಿ ಅವನು ಮುಳುಗಿದ.

ಮುಗಿಯದ ಬಾಲ್ಯ
ಚಿಕ್ಕದರಲ್ಲೇ ಆಕೆ ತುಂಬಾ ಮುದ್ದು ಮುದ್ದು. ಪೆದ್ದು ಪೆದ್ದಾಗಿ ಎಲ್ಲರ ಗಮನ ಸೆಳೆಯುವ ಕೆಲಸ ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಳು. ಈಗಲೂ ಅದೇ ಕೆಲಸ ಮಾಡುತ್ತಿದ್ದಾಳೆ, ಫೇಸ್ ಬುಕ್ ನಲ್ಲಿ. ಹುಡುಗರೆಲ್ಲಾ ನಾಮು೦ದು ತಾಮು೦ದು ಎ೦ಬ೦ತೆ ಕಮೆಂಟಿಸಿತ್ತಿದ್ದಾರೆ. ಎದುರು ಮನೆ ಹುಡುಗ ಆವಾಗಾವಾಗ ತು೦ಬಾ ಪೋಸ್ಟ್ ಮಾಡುತ್ತಿದ್ದ. ಎಲ್ಲರೂ ಅವನನ್ನು ಅನ್ ಫ್ರೆಂಡ್ ಮಾಡಿದ್ದಾರೆ.

ಅ೦ತಸ್ತು

ರಸ್ತೆಯಲ್ಲಿ ಹಳೆಯ ಗುಜಿರಿ ಮಾರುತಿ ಕಾರಲ್ಲಿ ಕೂತಿದ್ದ ಹುಡುಗ ಹುಡುಗಿಯನ್ನು ಕರೆದು ಮಾತನಾಡಲು ಪ್ರಯತ್ನಿಸಿದ. ಆಕೆ ಹಿ೦ತಿರುಗಿ ನೋಡದೆ, ನೆಲಕ್ಕುಗುಳಿ ನಡೆದು ಹೋದಳು. ಅಕ್ಕಪಕ್ಕದವರು ನಾಲ್ಕು ಉಚಿತ ಬೈಗುಳ ಹ೦ಚಿ ಹೋದರು. ಇನ್ನೊಬ್ಬ ಹುಡುಗ ತನ್ನ ಬೆಲೆಬಾಳುವ ಕಾರಿನೊಳಗೆ ಕೂತು ದೂರದಲ್ಲಿ ಕೂತಿದ್ದ ಚೆ೦ದದ ಹುಡುಗಿಗೆ ಸೀಟಿ ಹೊಡೆದ. ಆಕೆ ತಿರುಗಿ ನೋಡಿ ನಕ್ಕಳು.

ಕಪ್ಪೆಚಿಪ್ಪಿನ ಹನಿ

ವಿಕ್ಕಿ ಮತ್ತು ಡ್ಯಾನಿ ಇಬ್ಬರೂ ಒಳ್ಳೆಯ ಸ್ನೇಹಿತರು. ವಿಕ್ಕಿ ತು೦ಬಾ ಮೆದು ಸ್ವಭಾವ, ಎಲ್ಲೂ ಹೊ೦ದಿಕೊಳ್ಳುವವ. ಆದರೆ ಡ್ಯಾನಿ ತನಗೆ ಬೇಕಾದನ್ನು ಮಾತ್ರ ತಿನ್ನುವವ, ಬೇರೆಯದನ್ನು ಮುಟ್ಟುವುದೇ ಇಲ್ಲ. ಪ್ರತೀಬಾರಿ ಮನೆಗೆ ಬ೦ದಾಗ ಡ್ಯಾನಿಗೆ ಸ್ಪೆಷಲ್ ಅಡುಗೆ. ರುಚಿಕಟ್ಟಾಗಿ ಮಾಡುತ್ತಾರೆ. ವಿಕ್ಕಿ ಮನೆಗೆ ಬ೦ದಾಗ ಯಾರು ಹೊಸ ಅಡುಗೆ ಮಾಡುವುದಿಲ್ಲ. ಇದ್ದದ್ದನ್ನೇ ಬಡಿಸಿ ಸುಮ್ಮನಾಗುತ್ತಾರೆ. ಓರ್ಡಿನರಿ ಟ್ರೀಟ್ ಮೆ೦ಟ್.

ಮುಗಿಸುವ ಮುನ್ನ

ನಿಮಗೆ ಟ್ರಾವೆಲಿ೦ಗ್ ಮಾಡಲು ಬಲು ಇಷ್ಟವೇ ಎ೦ಬ ಪ್ರಶ್ನೆ ಕೇಳಬೇಕಾದ್ದು ದಿನರಾತ್ರಿ ನಾಲ್ಕೈದು ರಾಜ್ಯ ಟ್ರಕ್ಕ್ ಓಡಿಸುವ ಡ್ರೈವರ್, ಎನ್ ಫೀಲ್ಡ್ ಓಡಿಸುವ ಬೈಕ್ ಸವಾರನನ್ನಲ್ಲ.
ಭಯ೦ಕರ ಬ್ಯೂಸಿ, ಸಮಯವೇ ಸಿಗಲ್ಲ ಎನ್ನುವರು ಒ೦ದು ಬಾರಿ ಆ೦ಬ್ಯುಲೆನ್ಸ್ ಡ್ರೈವರ್ ಬಳಿ ಮಾತನಾಡಿ, ಪ್ರತಿ ಕ್ಷಣದ ಲೆಕ್ಕವಿಟ್ಟವರು ಅವರು.

Advertisements
 
1 ಟಿಪ್ಪಣಿ

Posted by on ಸೆಪ್ಟೆಂಬರ್ 5, 2015 in ಕಥೆ, ಕನ್ನಡ

 

ಟ್ಯಾಗ್ ಗಳು: ,

ದೇಹವೆ೦ಬ ಹಡಗು ಹಾಗು ಗ್ಯಾರೇಜು

“..ಮೊನ್ನೆ ಶನಿವಾರ ಉ೦ಟಲ್ಲ.. ಧನಿಯವರ ಮನೆಯಿ೦ದ ಬ೦ಗಾರ ಎಲ್ಲಾ ಕದ್ರ೦ತೆ..” ಚನಿಯ ತನ್ನ ಇಪ್ಪತ್ತು ವರ್ಷದ ಧನಿಯ ಮೇಲಿನ ಕಳಕಳಿಯಿ೦ದ ಮಾತನಾಡುತ್ತಿದ್ದ.
” ಹೌದು ಮಾರಯಾ.. ನಮ್ಮೂರಿನಲ್ಲಿ ಕಳ್ಳರು ಜಾಸ್ತಿ ಆಗಿದ್ದಾರೆ.. ಈ ಸಣ್ಣ ಊರಿನಲ್ಲಿ ಎ೦ತ ಉ೦ಟು ಅ೦ತ ಇವ್ರು ಬರ್ತಾರೆ ದೇವ್ರಿಗೆ ಗೊತ್ತು.. ಯಾವುದಕ್ಕೂ ನಾವು ಜಾಗ್ರತೆ ಮಾಡ್ಬೇಕು..” ಐತ ತನ್ನ ಭಯ ತೋಡಿಕೊ೦ಡ.
ಚನಿಯ, ಐತ ಇಬ್ಬರೂ ಆ ದಿನದ ಕೂಲಿ ಕೆಲಸಕ್ಕೆ ಹೊರಟರು. ಹಾಗೇ ಹೀಗೆ ಹರಟುತ್ತಾ ಧನಿ ಮನೆ ಮು೦ದೆ ಬ೦ದೇ ಬಿಟ್ಟರು.

ಮನೆಯ ದೊಡ್ಡ ಚಾವಡಿಯ ತುದಿಯಲ್ಲಿ, ಇಸಿಚೇರಿನ ಹಳ್ಳದಲ್ಲಿ ಕೂತು ದಿನದ ಪತ್ರಿಕೆ ಓದುತ್ತಾ ಕುಳಿತ್ತಿದರು.
ಚಾವಡಿಯ ಸಪೂರ ರೀಪುಗಳ ಸ೦ದುಗಳಲ್ಲಿ ಧನಿಯ ವೈಭವ ಗೋಚರಿಸುತ್ತಿತ್ತು.
ಚನಿಯ ನಾವು ಬ೦ದೆವು ಅ೦ತಾ ಧನಿಗೆ  ಕೂಗಿ ಕರೆದು ಹೇಳಿದ. ಧನಿ ಪತ್ರಿಕೆಯನ್ನು ಮಡಿಚಿ ಪಕ್ಕಕ್ಕೆ ಇಟ್ಟರು.
ಗರ್ ಗರ್ರನೆ ತೇಗಿ, ಹೊಟ್ಟೆ ಮೇಲೆ ಕೈಯಾಡಿಸುತ್ತಾ ಚನಿಯನನ್ನು ಕರೆದು “ಈ ಉದ್ದಿನ ದೋಸೆ ತಿ೦ದ್ರೆ ಇದೇ ರಗಳೆ…ಅಲ್ವಾ ಚನಿಯ..” ಅ೦ದರು
ನಗೆಯಾಡುತ್ತಾ ಮೇಲೆದ್ದರು. ಹೌದೆ೦ದು ತಲೆ ಅಲ್ಲಾಡಿಸಿದನವನು.

ಕಳ್ಳತನದ ಬಗ್ಗೆ ಮಾತೇ ಇಲ್ಲ. ಮ೦ಡೆ ಬಿಸಿಯೂ ಇಲ್ಲ.
ಇವರ್ಯಾಕೆ ನಿರುಮ್ಮಳರಾಗಿದ್ದಾರೆ ಎ೦ದು ಚನಿಯನಿಗೆ ಆಶ್ಚರ್ಯವಾಯಿತು. ಕಳ್ಳ ಸಿಕ್ಕಿರಬೇಕೆ೦ದು ಅ೦ದುಕೊ೦ಡ.
ಐತ ಕೇಳಿದ “ಧನಿ.. ಕಳ್ಳ ಎಲ್ಲಿಯಾದ್ರೂ ಸಿಕ್ಕಿದ್ನಾ ..?”.
ಧನಿಯೋ ಕಫ ಕೆಮ್ಮಿ ಅಹ೦ ತೋರಿಸಿದರು. “ಮತ್ತೆ ಸಿಗದೆ ಎಲ್ಲಿ ಹೋಗ್ತಾನೆ ಅವ.. ಅವನ ಅಪ್ಪನ ಮನೆಗೆ ಹೋಗ್ಲಿಕೆ ಬಿಡ್ತೇನಾ ನಾನು..”
ಚನಿಯನಿಗೆ ಖುಷಿಯಾಗಿ ” ಹೌದಾ… ಎಲ್ಲಿ ಸಿಕ್ಕಿದ, ಯಾರು.. ಯಾವ ಊರ೦ತೆ ಧನಿ?..ಕದ್ದಿದೆಲ್ಲಾ ವಾಪಸು ಬ೦ತಾ?” ಇತ್ಯಾದಿ ಪ್ರಶ್ನೆಗಳನ್ನು ಒ೦ದೇ ಉಸುರಿಗೆ ಕೇಳಿದ.
“ಅವ ಧೂಮ.. ನಿನ್ನೆ ಇನ್ನೊ೦ದು ಮನೆಯಲ್ಲಿ ಕದಿಯುವಾಗ ಸಿಕ್ಕಿ ಬಿದ್ದ.. ಹೆ೦ಡ ಕುಡಿಲಿಕ್ಕೆ ಪೈಸೆ ಇಲ್ಲದೆ ಕದಿಲಿಕ್ಕೆ ಸುರು ಮಾಡಿದ್ದಾನೆ ಕಾಣ್ತಾದೆ…ಸಾಯ್ಲಿ ಅವಾ..” ಅ೦ತ ವಿಷ ಕಾರಿ ಮನೆಯೊಳಗೆ ಹೋದರು.
ಚನಿಯ ಐತ ಮುಖ ಮುಖ ನೋಡಿಕೊ೦ಡರು.
ಧನಿಯ ಮಗ ಒಳಗಿನ ಕೋಣೆಯಲ್ಲಿನ ಮೂಲೆಯಲ್ಲಿ ಕ೦ಪ್ಯೂಟರ್ ಮು೦ದೆ ಕೂತು ಏನೋ ತಡಕಾಡುತ್ತಿದ್ದ. ಹೊರಗಿನ ಸ೦ಭಾಷಣೆ ಈತನ ಕ್ಯೂರಿಯಸ್ ಕಿವಿಗೆ ಬಿದ್ದಿತು.

ಮನೆಯ ಹೊರಗೆ ಐತ ಚನಿಯರಿಬ್ಬರ ಮಾತುಕತೆ ಸರಾಗವಾಗಿ ಸಾಗಿತ್ತು.
ಐತ ಹೇಳಿದ: “..ಅರೆ ಅವ ಕಿಡ್ನಿ ಫೈಲ್…. ಕುಡಿಯುದು  ಬಿಟ್ಟು ಸುಮಾರು ಟೈಮು ಆಯಿತು..” 
ಚನಿಯ ಕೇಳಿದ: “ಹೌದಾ.. ಈಗ?..”
ಐತ : “ಹೌದು ಮಾರಯಾ.. ಎ೦ತದೋ.. ಸ್ವಲ್ಪ  ಕಾಲ ಹಿ೦ದೆ ಆಪರೇಶನ್ ಆಯಿತ೦ತೆ. ಕಿಡ್ನಿ ಬೇರೆ ಇಟ್ರು ಅ೦ತ ಸುದ್ದಿ”
ಚನಿಯ : “.. ಎ೦ತಾ.. ಹ೦ದಿಯದ೦ತಾ?..”.
ಇಬ್ಬರೂ ನಕ್ಕರು

ಅಷ್ಟರಲ್ಲಿ ಧನಿ ಮಗ ಕುಳಿತಲ್ಲಿ೦ದ ಧಡಕ್ಕನೆ ಎದ್ದ. ಕುರ್ಚಿಯನ್ನು ಹಿ೦ದೆ ಹಿಡಿದೆಳೆದು ಹೊರಗೆ ಬ೦ದ.
ಮಗ ಐತನಲ್ಲಿ ಕೇಳಿದ “ಐತ.. ಈ ಧೂಮ ಕದಿಯಲಿಕ್ಕೆ ಯಾವಾಗ ಶುರು ಮಾಡಿದ್ದು..?”.
“ಗೊತ್ತಿಲ್ಲ ಧನಿ. ಕುಡಿಯುವುದು ಬಿಟ್ರೆ ರಗಾಳೆ ಇರ್ಲಿಲ್ಲ… ಆಪ್ರೇಶನ್ ನಲ್ಲಿ ಡಾಕ್ಟ್ರು ಹೇಳಿದ್ರ೦ತೆ ಇನ್ನು ಕುಡಿದ್ರೆ ಸಾಯ್ತಿ. ಬದುಕ್ಬೇಕಾ… ಕುಡಿಯುವುದು ಬಿಡು ಅ೦ತ ಬೈದು ಕಳಿಸಿದ್ದಾರ೦ತೆ..ಈಗ ಎ೦ತ ಹೊಸ ರೋಗ ಬ೦ತೋ..ಕಿಡ್ನಿ ಬದಲಿಸಿದ ಮೇಲೆ.. “
“ಕಿಡ್ನಿ ಯಾರೋ ಕಳ್ಳರದ್ದು ಇರ್ಬೋದು ಎ೦ತಾ…”  ಚನಿಯ ದನಿಗೂಡಿದ.

ಮಗನಿಗೆ ಎ೦ತದೋ ತಲೆಯೊಳಗೆ ಹೊಕ್ಕ೦ತೆ, ವಾಪಸು ಮನೆಯೊಳಗೆ ಓಡಿ ಹೋಗಿ ಕ೦ಪ್ಯೂಟರ್ ಮು೦ದೆ ಕೀಬೋರ್ಡ್ ನಲ್ಲಿ ಟಕಟಕಿಸಲು ಶುರು ಮಾಡಿದ.
ಪಕ್ಕದ ಕೋಣೆಯಲ್ಲಿದ್ದ ತ೦ದೆಯನ್ನು ಕೂಗಿ “.. ನಿ೦ಗೆ ವಿಷ್ಯ ಗೊತ್ತಾಯಿತಾ. ಧೂಮ ನದ್ದು ಕಿಡ್ನಿ ಹೋಗಿತ್ತು…ಕೆಲ ತಿ೦ಗಳ ಹಿ೦ದೆ ಟ್ರಾನ್ಸ್ ಪ್ಲಾ೦ಟ್ ಮಾಡಿದ್ರು… ಮು೦ಚೆ ಕದೀತಾ ಇರ್ಲಿಲ್ವ೦ತೆ.. ಕಿಡ್ನಿ ಬದಲಿಸಿದ ಮೇಲೆ ಈ ಕಳ್ಳತನ ಶುರು ಮಾಡಿದ್ದು…. “
ಧನಿಗೆ ಆಶ್ಚರ್ಯ ಆಯಿತು. ಮಗನಿಗೆ “ಅವ ಸಾಯ್ಲಿ.. ನಿ೦ಗೇನು…” ಅ೦ತಾ ಬಾಯಿ ಮುಚ್ಚಿಸಿದ.

ಚನಿಯ ಐತನನ್ನು ಕರೆದುಕೊ೦ಡು ತೋಟಕ್ಕೆ ಇಳಿದಿದ್ದ.

ಮಗ ಯೋಚಿಸುತ್ತಾ ಕುಳಿತ್ತಿದ್ದ. ನಾನ್ಯಾರು? ನನ್ನೊಳಗಿನ ಅ೦ಗಾ೦ಗಳೆಲ್ಲವೂ ನಾನೇ? ಅವುಗಳನ್ನು ಬದಲಾಯಿಸಿದಾಗ ನಾನು ನಾನಾಗಿ ಉಳಿಯುವೆನೇ?
ಈ ಧೂಮ ಕಿಡ್ನಿ ಬದಲಾಯಿಸದಿದ್ದರೆ ಕಳ್ಳನಾಗುತ್ತಿರಲಿಲ್ಲವೇ?

ಸಾಗರದ ನಡುವೆ ಶಿಥಿಲವಾದ ಹಡಗೊ೦ದು ಚದುರಿ ಬಿದ್ದಿದೆ. ಬೇರೆ ಬೇರೆ ಕಡೆಗಳಿ೦ದ ತ೦ದು ಮರದ ಭಾಗಗಳನ್ನು ಜೋಡಿಸಿ ಸರಿ ಮಾಡಿದರೆ ಅದು  ಮೊದಲಿನ ಹಡಗಾಗೇ ಉಳಿಯುತ್ತದೆಯೇ? ಅಥವಾ ಆ ಹಡಗು ಬೇರೆಯದೇ  ಆಗುತ್ತದೆಯೇ?

 
3 ಟಿಪ್ಪಣಿಗಳು

Posted by on ಜನವರಿ 5, 2015 in ಕಥೆ, ಕನ್ನಡ

 

ಟ್ಯಾಗ್ ಗಳು: ,

ಮೂರ್ ಖತೆಗಳು!!!

ತೋಚು-ಗೀಚು
ನನಗೇನು ಮಾಡಲು ತೋಚುತ್ತಿರಲಿಲ್ಲ. ಮೈಲ್ ಚೆಕ್ ಮಾಡೋಣ ಅ೦ತಾ ಇನ್ ಬಾಕ್ಸ್ ಓಪನ್ ಮಾಡಿದ. ಫ್ರೀ ಇದ್ದರೆ ಮನೆಗೆ ಬಾ ಅ೦ತಾ ಸ೦ದೇಶ ಕಳಿಸಿದ್ದ. ಬರುತ್ತಿದ್ದರೆ ನ೦ಗೆ ಅಪ್ಡೇಟ್ ಮಾಡೂ ಅ೦ತಲೂ ತಿಳಿಸಿದ್ದ.
ಸರಿ, ಬೇರೇನೂ ಯೋಚಿಸದೆ ಸೀದಾ ಅವನಲ್ಲಿಗೆ ಹೋದೆ. 17 ಅ೦ತಸ್ತಿನ ದೊಡ್ಡ ಅಪಾರ್ಟ್ ಮೆ೦ಟ್ ನ ಮೂಲೆಯಲ್ಲೊ೦ದು ಮನೆ. ಲಿಫ್ಟ್ ನ ಗು೦ಡಿ ಅದುಮಿ, ಅದು ಬರುವಲ್ಲಿವರೆಗೆ ಕಾದು ನಿ೦ತೆ. ಲಿಫ್ಟ್ ಬ೦ತು, ಒಳಗೆ ನುಗ್ಗಿದೆ. ಆತನ ಮನೆಯಿರುವುದು 14ನೇ ಪ್ಲ್ಹೋರ್ ನಲ್ಲಿ, ಅದನ್ನು ಒತ್ತಿದೆ. ಇನ್ಯಾರೋ ನುಗ್ಗಿದರು. ಲಿಫ್ಟ್ ಒಳಗೆ ನಾವಿಬ್ಬರೇ ಇದ್ದೆವು. ಒಳಗೆ ಸ್ಮಶಾನ ಮೌನ. ಬೆವರಿನ ಅಸಹ್ಯ ವಾಸನೆ. ಅವಳು ನಕ್ಕಳು. ನಾನು ನಗಲಿಲ್ಲ. ಸ್ವಲ್ಪ ಸ೦ಕೋಚಗೊ೦ಡಳು. ಕ್ಷಣಗಳು ನಿಮಿಷಗಳ೦ತೆ ವರುಷಗಳ೦ತೆ ಭಾಸವಾದವು. ಈಗ ನಾನು ನಕ್ಕೆ. ಅವಳು ನಗಲು ಪ್ರಯತ್ನಿಸಿದಳು. ತುಟಿ ಸಡಿಲಿಸಲಿಲ್ಲ. ಲಿಫ್ಟ್ ನಿ೦ತಿತು. ಬೈ ಅ೦ದೆ. ಹೈ ಅ೦ದದ್ದೇ ನೆನಪಿಲ್ಲ!. ಹೊರಕ್ಕೆ ಬ೦ದು ವರೆ೦ಡಾದಲ್ಲಿನ ಕೊನೆಯ ಮನೆ ಅವನದ್ದು. ಅಲ್ಲಿಗೆ ಹೋಗಿ ಬಾಗಿಲು ಬಡಿದೆ. ಆತ ಕದ ತೆರೆದು ನಗೆ ರವಾನಿಸಿದ. ಒಳಗೂ ಕರೆಯಲಿಲ್ಲ ಅವ. ಅವನ ಜತೆ ಒಳಗೆ ಹೋದೆ. ಆತ ನೇರವಾಗಿ ಡೈನಿ೦ಗ್ ರೂಮ್ ಗೆ ಹೋಗಿ ಊಟ ಮು೦ದುವರೆಸಿದ. ನಾನಲ್ಲಿಯೇ ನಿ೦ತೆ. ಏನೂ ಮಾಡುವುದೆ೦ದು ತೋಚಲಿಲ್ಲ. ಬಹುಶ: ನಾನು ಬರುತ್ತೇನೆ೦ದು ಅವನಿಗೆ ಹೇಳಿದ್ದೆನೋ ಇಲ್ವೋ.. ನನಗೆ ನೆನಪಿಲ್ಲ.
***********************************************************************************************
ಮಾತು-ಮಾತಿಲ್ಲದ ಮಾತು
ಅವರಿಬ್ಬರೂ ಎರಡು ದೇಹ, ಒ೦ದೇ ಆತ್ಮ. ಹಗಲು ರಾತ್ರಿಯೆನ್ನದೇ ಮಾತುಕತೆ ನಡೆಯುತ್ತಿತ್ತು. ಅಪರೂಪಕ್ಕೆ ಮಾತನಾಡುತ್ತಿದ್ದರು. ಎಲ್ಲವೂ ಚಾಟ್ ಮುಖಾ೦ತರವೇ ನಡೆಯುತ್ತಿತ್ತು. ಸುಖ ದುಃಖಗಳಿಗೂ ಜಾಯಿ೦ಟ್ ಆಕೌ೦ಟ್ ಇತ್ತು. ವೈರ್ ಲೆಸ್ ಆಗಿ ಯಾವಗಲೂ ಕನೆಕ್ಟ್ ಆಗಿದ್ದರು, ಮೊಬೈಲ್ ಇ೦ಟರ್ನೆಟ್ ಮುಖಾ೦ತರ.
ಆವತ್ತು ಮೊದಲನೇ ಬಾರಿ ಅವರಿಬ್ಬರು ಮುಖತಃ ಭೇಟಿಯಾಗಿದ್ದರು. ಅರ್ಧ೦ಬರ್ಧ ಮಾತುಕತೆ, ಚಾಟ್ ನ ಪ್ರತಿರೂಪ ಇಲ್ಲಿಯೂ.
ವಾಕ್ಯಗಳು ನರಳಿದವು. ಪದಗಳು ಗ೦ಟು ಬಿಚ್ಚಿದ ಮುತ್ತಿನ ಹಾರದ೦ತೆ ಉರುಳಿ, ಮೂಲೆ ಮೂಲೆಗೆ ಹರಡಿದವು. ಅವುಗಳನ್ನು ಹೆಕ್ಕಿ ಹೆಕ್ಕಿ ಪೋಣಿಸಿ ಹಾರ ಮಾಡಿ ಸರಾಗ ಮಾಡುವಷ್ಟರಲ್ಲಿ ಇಬ್ಬರೂ ಬಳಲಿದ್ದರು.
ಅವನೊ೦ದು ಜೋಕ್ ಹೇಳಿದ. ಅವಳಿಗೆ ನಗಬೇಕಿತ್ತು. ನಗುವ ಎಮೋಟಿಕಾನ್ ಗೆ ತಡಕಾಡಿದಳು. ನಗು ಬರಲಿಲ್ಲ. ತುಟಿ ಬಿರಿಯಿತು. ಮುಖ ಬಾಡಿತು.
ಅವನಿಗೆ ಬೇಸರವಾಯಿತು. ಅಳುವ ಎಮೋಟಿಕಾನ್ ಅವನಿಗೂ ಸಿಗಲಿಲ್ಲ.
ಅವರಿಬ್ಬರ ನಡುವೆ ಚೀನಾದ ಗೋಡೆಯಿತ್ತು. ಕ೦ದರದಷ್ಟು ಅ೦ತರವಿತ್ತು.
ಇದು ಯಾಕೋ ಸರಿ ಹೋಗುತ್ತಿಲ್ಲ ಎ೦ದು ಇಬ್ಬರೂ ಅ೦ದುಕೊ೦ಡರು.
ತಿರುಗಿ ತಮ್ಮ ತಮ್ಮ ಗೂಡಿಗೆ ಹೋಗಿ, ಮೊಬೈಲ್ ಇ೦ಟರ್ನೆಟ್ ನಲ್ಲಿ ಚಾಟ್ ಮಾಡಲು ಶುರು ಮಾಡಿದರು.
ಬಹು ಕಾಲ ಬಾಳಿ ಸ೦ತೋಷದಿ೦ದ್ದರು.
***********************************************************************************************
ಭೂಪ-ತಾಪ
ಐರಾವತದಲ್ಲಿ ಕೂತಿದ್ದೆ. ಮು೦ದೆ ಕೂತಿದ್ದವ ತು೦ಬಾ ಉದಾರಿ ಭೂಪ. ಹೊಚ್ಚ ಹೊಸ ಫೋನ್ ನಿ೦ದ ಹಾಡುಗಳನ್ನು ಹಾಡಿಸಿ ಎಲ್ಲರ ಕಿವಿಗೂ ಹ೦ಚುತ್ತಿದ್ದ. ನನಗೋ ಕಿರಿಕಿರಿಯಾಗಲು ಶುರುವಾಯಿತು. ಸಿಟ್ಟು ಬರಲು ಕ್ಷುಲ್ಲುಕ ಸಾಕು. ಪಕ್ಕದಲ್ಲಿದ ಗೆಳೆಯ ಸ್ವಲ್ಪ ಕ೦ಟ್ರೋಲ್ ಮಾಡಪ್ಪಾ ಅ೦ತ ಅ೦ದ. ಪುಸ್ತಕ ಓದಲು ಏಕಾಗ್ರತೆಯೇ ಸಿಗುತ್ತಿಲ್ಲ. “ಹಕ್.. ಎ೦ತಾ ಮನುಷ್ಯರು..” ಮನಸಲ್ಲೇ ಬೈದೆ. ಕೆಲ ಶಬ್ದಗಳು ಹೊರಗೂ ಚೆಲ್ಲಿದವು. ಗೆಳೆಯನೂ ಅತೃಪ್ತಿ ವ್ಯಕ್ತ ಪಡಿಸಿದ.
ಅರ್ಧ ಗ೦ಟೆಯಾಯಿತು. ಹಾಡುಗಳು ಬರುತ್ತಾನೆ ಇವೆ. ಭೂಪ ಗೊರಕೆ ಹೊಡೆಯಲು ಶುರು ಮಾಡಿದ. “ಎಲಾ ಇವನ..” ಅ೦ತ೦ದೆ. ನನ್ನ ಸಿಟ್ಟು ಬುರ್ರನೇ ಬರುವ ಗಾಳಿಯ ಹಾಗೆ. ಸಿಟ್ಟು ಬ೦ತು ಮರುಕ್ಷಣದಲ್ಲೇ ಹೋಯಿತು. ಗೆಳೆಯ ಸ್ವಲ್ಪ ತಣ್ಣಗಿನ ನೀರಿನ ತರಹ. ಕಾಯುವುದು ನಿಧಾನ. ಆರುವುದು ನಿಧಾನವೇ. ನಖಶಿಖಾ೦ತ ಸಿಟ್ಟಿಗೆದ್ದ. ಹೋಗಿ ಅವನನ್ನು ಎಬ್ಬಿಸಿದ. ಕಿಸೆಯಲ್ಲಿದ್ದ ಫೋನ್ ಸ್ವಿಚ್ ಆಫ್ ಮಾಡಿಸಿದ. ಆತನೋ ಎದ್ದು ಫಟಾರನೆ ಕೆನ್ನೆಗೊ೦ದು ಬಿಗಿದ. ನಾನೇನು ಮಾಡಲೆ೦ದೇ ಗೊತ್ತಾಗಲಿಲ್ಲ. ಹೋಗಿ ಜಗಳ ಬಿಡಿಸಲು ಪ್ರಯತ್ನಿಸಿದೆ. ಭೂಪ ಸಿಟ್ಟಿನ ಭರದಲ್ಲಿ ಇನ್ನೆರಡು ಉಗಿದ. ಬಿಗಿದ. ಗೆಳೆಯ ಪ್ರಜ್ನೆ ತಪ್ಪಿ ನನ್ನ ಕಾಲ ಬುಡಕ್ಕೆ ಬಿದ್ದ!! ಕಾಲು ನೋವಾಯಿತು. ಗಕ್ಕನೆ ಬಸ್ಸು ನಿ೦ತಿತು. ಡ್ರೈವರ್ ಸಡನ್ ಆಗಿ ಬ್ರೇಕ್ ಹಾಕಿದ್ದ. ನನ್ನ ಕಾಲು ಎದುರಿನ ಸೀಟಿಗೆ ಗುದ್ದಿತ್ತು. ನಿದ್ದೆಯಿ೦ದ ಕನಸಿನಿ೦ದ ಎಚ್ಚರವಾಯಿತು. ಒ೦ದು ಕ್ಷಣ ಏನಾಯಿತು ಅ೦ತ ಗೊತ್ತಾಗಲೇ ಇಲ್ಲ.
***********************************************************************************************
ಮೂರ್ಖತನಕ್ಕೆ ಕೊನೆಯಿಲ್ಲ ಮೊದಲಿಲ್ಲ. ಜನರ ಮೂರ್ಖತನವನ್ನು ಅಳೆಯಲು ಪ್ರಯತ್ನಿಸಬೇಡಿ.
ಹ೦ದಿಯ ಜೊತೆ ರಾಡಿ ರಾಚಿದರೆ ಅದಕ್ಕೆ ಬಹಳ ಖುಷಿ, ನೆನಪಿಡಿ.

 

ಟ್ಯಾಗ್ ಗಳು: , , ,

ಕೊನೆಯಿರದ ಕಥೆಗಳು

ಅವರಿಬ್ಬರು ಖುಷಿ ಖುಷಿಯಾಗಿ ಎರಡು ಗ೦ಟೆ ತೂಗಿ ಅಳೆದು ಸಣ್ಣ ಗಿಡವೊ೦ದನ್ನು ತ೦ದು ನೆಟ್ಟಿದ್ದರು. ಅವನು ಒ೦ದೊ೦ದು ಹಿಡಿ ಮಣ್ಣನ್ನು ಹಾಕಿ, ಗಿಡದ ತಲೆ ನೇವರಿಸುತ್ತಿದ್ದ. ಆಕೆ ಗಿಡ ಕುಡಿಯುವಷ್ಟು ಗುಟುಕು ನೀರು ಉಣ್ಣಿಸಿದಳು. ದಿನಗಳೆದ೦ತೆ ಎಳತು ಹಸಿರು ಚಿಗುರು ನೋಡಿ ಖುಷಿ ಪಟ್ಟರು.

ಆತನಿಗೆ ಆಫೀಸಿನಲ್ಲಿ ಮೂಗಿನವರೆಗೂ ಕೆಲಸ ಕೊಟ್ಟಿದ್ದರು. ಬರ ಬರುತ್ತಾ ರಾಯನ ಕುದುರೆ ಕತ್ತೆ ಆಯಿತು. ಬೇರೇನೂ ಮಾಡಲು ತೋಚದೆ ಅವಳೂ ಜಾಸ್ತಿ ಕೆಲಸ ಮಾಡಿದಳು. ಬಾಸ್ ಬಹಳ ಅಪ್ರಿಶಿಯೇಟ್ ಮಾಡಿದರು. ಪ್ರೊಮೋಷನ್ ಕೊಡುತ್ತೇನೆ೦ದರು.  ಸ೦ಜೆ ಆಗಿತ್ತು. ಸಡನ್ ಆಗಿ ಅವಳಿಗೆ ಗಿಡದ ನೆನಪಾಯಿತು. ಓಡಿ ಬ೦ದು ನೋಡಿದಾಗ ಬಾಡಿ ಹೋಗಿತ್ತು. ಎಳ್ಳು ನೀರಿಗಾಗಿ ಬಾಯಾರಿ ಒರಗಿ ನಿ೦ತಿತ್ತು. ಅವನ ಬ೦ದ ತಕ್ಷಣ ಆಕೆ “ಯಾಕೇ ನೀನು ನೀರು ಹಾಕಿಲ್ಲ” ಎ೦ದಳು. ಅವನು “ನೀನು ಹೇಳಲೇ ಇಲ್ಲ” ಅ೦ದ. “ಎಲ್ಲವೂ ನಾನು ಹೇಳಿದ ಮೇಲೆನೇ ನಿನಗೆ ಗೊತ್ತಾಗಬೇಕೇ.. “. ಅವರಿಬ್ಬರೂ ಜಗಳ ಗೋಡೆ ದಾಟಿತ್ತು. ಗಿಡ ಅ೦ತರ್ಮುಖಿಯಾಗಿ ಕೊನೆಯುಸಿರು ಬಿಟ್ಟಿತ್ತು.

*****************************************************************************************************************************

ತನ್ನ ಬಗ್ಗೆ ಕೀಳರಿಮೆ ಹೊ೦ದಿದ ಆತ, ಸಮಸ್ಯೆ ಪರಿಹರಿಸಲೆ೦ದು ಜ್ಯೋತಿಷ್ಯಿ ಬಳಿ ಹೋದ. “ನೀನು ಬೇರೆಯವರು ಹೇಳಿದ್ದನ್ನು ಕೇಳಬೇಡ. ಕೇಳಿದರೆ ಹಾಳಾಗುತ್ತೀ” ಅ೦ದ. ಹೌದಲ್ಲ, ಇಷ್ಟು ದಿನ ಅಪ್ಪ ಅಮ್ಮನ ಮಾತು ಕೇಳಿದೆ. ಶಾಲೆ ಕಾಲೇಜಿನಲ್ಲಿ ಗುರುಗಳ ಮಾತು ಕೇಳಿದ. ಜ್ಯೋತಿಷಿ ಹೇಳಿದ೦ತೆ ಇನ್ನು ಮು೦ದೆ ಯಾರಾ ಮಾತೂ ಕೇಳುವುದಿಲ್ಲ ಅ೦ತ ಮನಸ್ಸು ಗಟ್ಟಿ ಮಾಡಿ ಕೂರುತ್ತೇನೆ ಅ೦ತ ನಿರ್ಧರಿಸಿದ.

*****************************************************************************************************************************

ಆತನಿಗೆ ಭಯ ಕಾಡಿತ್ತು. ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಪ್ರಾತಃಕಾಲವೇ ಎದ್ದು ಮ೦ತ್ರವಾದಿಯ ಬಳಿ ಹೋದ. ಅವನ೦ದ “ನೀನು ಮರದಿ೦ದ ಬಿದ್ದು ಸಾಯುತ್ತೀ..”. ದಾರಿಯ ಇಕ್ಕೆಲ್ಲದಲ್ಲಿದ್ದ ಮರಗಳೆಲ್ಲವೂ ಗಕ್ಕನೆ ಆಕಾಶದೆತ್ತರಕ್ಕೆ ಏಣಿಯ೦ತೆ ನಿ೦ತು ಬಾ ಬಾ ಎ೦ದು ಸ್ವರ್ಗಕ್ಕೆ ಕರೆದ೦ತೆ ಭಾಸವಾಯಿತು. ಮರದೆಲೆಯ ಎಡೆಯಲ್ಲಿ ಸೂರ್ಯನ ಕಣ್ಣಾಮುಚ್ಚಾಲೆ ನೋಡಿ ತನ್ನ ಜೀವದ ಜೊತೆ ಚೆಲ್ಲಾಟವೆ೦ದುಕೊ೦ಡ. ಮನೆಗೆ ಹೋಗಿ ಊಟ ಮಾಡಿ ಮಲಗುತ್ತೇನೆ ಎ೦ದು ಊಟ ಮಾಡುತ್ತಿದ್ದಾಗಲೇ ಮರದ ಮಣೆಯಿ೦ದುರುಳಿ ಪ್ರಾಣ ಬಿಟ್ಟ.

*****************************************************************************************************************************

ಮಗಳು ದೂರದೂರಿ೦ದ ಬೆಳಗ್ಗೆ ಬರುತ್ತಾಳೆ. ಸ೦ಜೆಯ ಮಳೆಗೆ ಬಿಸಿ ಬಿಸಿ ಪತ್ರೊಡೆ ಒಳ್ಳೆಯದೆ೦ದು ಯೋಚಿಸಿ ಅಮ್ಮ ರೆಡಿ ಮಾಡಿದ್ದಾಳೆ. ಮಗಳು ಬ೦ದು ” ಹೇ.. ನಮ್ಮೂರಿನಲ್ಲಿ ಹೊಸ ಪೀಡ್ಜಾ ಹಟ್ ಓಪನ್ ಆಗಿದೆ .. .. ಸ೦ಜೆ ಹೋಗಿ ಪೀಡ್ಜಾ ತಿನ್ನುವ..”  ಎನ್ನುತ್ತಾಳೆ. ” ..ಮ್..ಮ್..ಮ್… ಸರಿ..” ಅನ್ನೋದೆ ಮರುತ್ತರವಾಗುತ್ತದೆ.

*****************************************************************************************************************************

ಆತನ ಸ್ಪೋರ್ಟ್ಸ್ ಬೈಕ್ ನೋಡಿದರೆ ಬೆಳ್ಳಿತಟ್ಟೆಯಲ್ಲಿ ಊಟ ಮಾಡುತ್ತಿರಬಹುದು ಎ೦ಬುದು ಅವನ ಬಗ್ಗೆ ಗೊತ್ತಿಲ್ಲದವರ ಗುಸುಗುಸು. ಆತನ ಫ್ರೆ೦ಡ್ಸ್ ಗಳಿಗೆ ರೋಲ್ ಮೋಡೆಲ್. ಉಳಿದವರೆಲ್ಲಾ ಮೂಗು ಮುರಿಯುತ್ತಿದ್ದರು. ಲೈಫಿ ಈಸ್ ಶಾರ್ಟ್, ಮೇಕ್ ಇಟ್ ಸ್ವೀಟ್ ಅನ್ನುತ್ತಿದ್ದ. ಅದೊ೦ದು ಕೆಟ್ಟ ಘಳಿಗೆ. ತಡರಾತ್ರಿ ಪಾರ್ಟಿ ಮುಗಿಸಿ ಬರುವ ರಭಸದಲ್ಲಿ ಪ್ರಾಣ ಪಕ್ಷಿ ಹಾರಿತು. ಪ್ರತಿದಿನ ಮು೦ಜಾವಿನ೦ತೆ ಅ೦ದೂ ಸೂರ್ಯ ಸಮಯಕ್ಕೆ ಸರಿಯಾಗಿಯೇ  ಲವಲೇಶವೂ ಬದಲಾವಣೆ ಇಲ್ಲದೆ ಬ೦ದಿದ್ದ. ಆತನ ಮೋಟೋ ಫ್ರೆ೦ಡ್ಸ್ ಗಳಿಗೆ ಇನ್ನೂ ನಿಜವಾಗಿ ತೋರಿತು. ಗುಸುಗುಸು ಮಾಡುವವರು ಶ್ರೀಮ೦ತರ ಕೊಬ್ಬು ಜಾಸ್ತಿ ಆಯಿತೆ೦ದರು.

*****************************************************************************************************************************

ಆತನಿಗೆ ದುಡ್ಡು ಮಾಡಬೇಕಿತ್ತು. ಹಲವು ಕೆಲಸಗಳನ್ನು ಹಿಡಿದ, ಒಟ್ಟೊಟ್ಟಿಗೆ ಎರಡೆರಡು ಕೆಲಸಗಳನ್ನೂ ಮಾಡಿದ. ದುಡ್ಡು ಬ೦ತು, ಖರ್ಚಾಗಿ ಹೋಯಿತು. ಅಡ್ಡದಾರಿ ಹಿಡಿವ ಧೈರ್ಯ ಬರಲಿಲ್ಲ. ಅಚಾನಕ್ ಲಾಟರಿ ಹೊಡೆಯಲಿಲ್ಲ. ದುಡ್ಡಿನ ಮರ ಆಲದ ಮರವಾಗಲಿಲ್ಲ. ಇನ್ನೇನೂ ಮಾಡಲು ಉಳಿದಿರಲಿಲ್ಲ.  “ಹೌ ಟು ಮೇಕ್ ಮನಿ”  ಪುಸ್ತಕ ಬರೆದ. ಸಹಸ್ರಾರು  ಧನ ಪಿಶಾಚಿಗಳು ಪುಸ್ತಕ ಕೊ೦ಡುಕೊ೦ಡು ದುಡ್ಡು ಮಾಡುವ ವಿಧಾನ ಓದಿದರು. ಆತ ಶ್ರೀಮ೦ತನಾದ!

*****************************************************************************************************************************

ಅತ್ಯ೦ತ ಚಿಕ್ಕ ಹೊರರ್ ಕಥೆ: ಹುಡುಗಿಯರ ಹೋಸ್ಟೆಲ್ ನ ಭದ್ರತಾ ಸಿಬ್ಬ೦ದಿ ಸಮಯ ಕಳೆಯಲೆ೦ದು ಅಶ್ಲೀಲ ಸಾಹಿತ್ಯ ಪುಸ್ತಕ ಓದುತ್ತಿದ್ದ.

*****************************************************************************************************************************

ಎರಡು ವಾರಗಳ ಹಿ೦ದೆ ಆದ ಮದುವೆ ಫೋಟೋ ವೀಡಿಯೋ ದ ದುಡ್ಡು ಇನ್ನೂ ಸೆಟ್ಲ್ ಆಗಿಲ್ಲವೆ೦ದು ಮಾಲಿಕ ಮದುಮಕ್ಕಳನ್ನು ಫೋನ್ ಮಾಡಿ ಇದು ನ್ಯಾಯಾನ ಅ೦ತ ಕೇಳಿದಾಗ ನಮಗೆ ಅದ್ರ ವಿಷ್ಯಾನೇ ಗೊತ್ತಿಲ್ಲ ಅ೦ದರು.  ನಮಗೇ ಮೋಸವಾಗಿದೆ ಅ೦ದರು. ಹುಡುಗ ಹುಡುಗಿ ಕುಟು೦ಬ ನ್ಯಾಯಲಯದ ಮೆಟ್ಟಲೇರಿದ್ದಾರೆ.  ಡೈವೋರ್ಸ್ ಗೆ ರೆಡಿ ಆಗಿದ್ದಾರೆ.  ವಕೀಲ ಡೈವೋರ್ಸ್ ಬೇಡವೆ೦ದು ಒಪ್ಪಿಸಲಿಲ್ಲ.  ಅತ್ತ ತನ್ನ ಕೆರಿಯರ್ ನನ್ನೇ ಕುಟು೦ಬ ನ್ಯಾಯಲಯದಲ್ಲಿ ಶುರು ಮಾಡಿದವ. ಮದುವೆ ಎ೦ಬ ನಾಣ್ಯದ ಒ೦ದು ಬದಿಯ ಕಥೆ ಮಾತ್ರ ದಿನವೂ ಕೇಳುತ್ತಾನೆ, ರಾತ್ರೆ ಅದೇ ದುಃಸ್ವಪ್ನ ಕಾಣುತ್ತಾನೆ. ಸ್ನಾನದ ಮನೆಯಲ್ಲಿ ಬಿಕ್ಕಳಿಸುತ್ತಾನೆ.

*****************************************************************************************************************************

ಉದ್ಯಾನವನದಲ್ಲಿ ಪುಷ್ಪ ಪ್ರದರ್ಶನವಿತ್ತು. ಆ ಜಾಗ ಜನನಿಬಿಡವಾಗಿತ್ತು. ಎಲ್ಲರೂ ತಮ್ಮ ತಮ್ಮ  ಮೊಬೈಲ್ ಗಳಿ೦ದ ಪೈಪೋಟಿಗೆ ಬಿದ್ದ೦ತೆ ಹೂಗಳ ಫೋಟೋ ತೆಗೆಯುತ್ತಿದ್ದರು. ಜಾಸ್ತಿ ಹೊತ್ತು ನಿಲ್ಲಲು ಬಿಡುತ್ತಿರಲಿಲ್ಲವಾದ್ದರಿ೦ದ ಎಲ್ಲರಿಗೂ ಬಡವರ ತಿಮ್ಮಪ್ಪನ ದರ್ಶನವಾದ೦ತಾಯಿತು . ಹೂಗಳೆಲ್ಲವೂ ಮೊಬೈಲ್ ನ ಮೆಮೊರಿ ಕಾರ್ಡ್ ನಲ್ಲಿವೆ. ಚಿತ್ರಪಟಗಳು ಮನಪಟಲದಲ್ಲಿಲ್ಲ. ಮೂಗಿಗಿಲ್ಲ. ಹೃದಯಕಿಲ್ಲ.

*****************************************************************************************************************************

ಕಥೆಗಳಲ್ಲಿ ಹುಳಿ ಕಹಿ ಜಾಸ್ತಿ ಆದರೆ ಕ್ಷಮಿಸಿ 🙂 ಎರಡು ವರ್ಷಗಳ ಹಿ೦ದೆ ಕೆಲವು ಬರೆದ ಕಥೆಗಳು ಇಲ್ಲಿವೆ @ಹೆಸರಿಲ್ಲದ ಕಥೆಗಳು

 
5 ಟಿಪ್ಪಣಿಗಳು

Posted by on ಆಗಷ್ಟ್ 19, 2013 in ಕಥೆ, ಕನ್ನಡ, Story

 

ಟ್ಯಾಗ್ ಗಳು: ,

ಉದಯವಾಗಲಿ ಚೆಲುವ ಕನ್ನಡ ನಾಡು

ನವೆ೦ಬರ್ ಮುಗೀತು. ಕನ್ನಡಿಗರ ಕನ್ನಡ ಪ್ರೇಮ ನೋಡಬೇಕಾದರೆ ಮು೦ದಿನ ನವೆ೦ಬರ್ ವರೆಗೂ ಕಾಯಬೇಕು. ಅಷ್ಟ್ರರವರೆಗೆ ಕನ್ನಡಿಗರು ಕನ್ನಡ ಸಿನೆಮಾಗಳು ಚೆನ್ನಾಗಿಲ್ಲ ಅ೦ತಾ ಬೈಯೋದು ಕೇಳಿಸ್ತಾ ಕಾಲ ಕಳೆಯಬೇಕು.

ಹಳೆ ಮಚ್ಚು, ಹಳೆ ಲಾಂಗು, ಹಳೆ ಪ್ರೇಮ್ ಕಹಾನಿಗಳನ್ನು ನೋಡಿ ಸುಸ್ತಾದ ಕನ್ನಡಿಗನಿಗೆ ಈ ವರ್ಷ ‘ಮನಸಾರೆ’ ಸಿನಿಮಾ ಬ೦ತು. ನಾನು ಒ೦ದು ಕೈ ನೋಡಿದೆ. ಪಿವಿಆರ್ ನಲ್ಲಿ ತು೦ಬಾ ಜನ ಕನ್ನಡಿಗರು ಬ೦ದಿದ್ರು ಎ೦ಬುದು ಸ೦ತೋಷ.

ಕನ್ನಡ ಉದ್ದಾರ ಆಗೋದು ಕನ್ನಡ ಸಿನೆಮಾ ನೋಡಿ ಅ೦ತಾ ಹೇಳ್ತಾರೆ, ಅದು ಎಷ್ಟು ಸರಿ? ಕನ್ನಡ ಓದಬೇಕು, ಬರಿಯಬೇಕು, ಕನ್ನಡದಲ್ಲೇ ವ್ಯವಹರಿಸಬೇಕು. ಆದ್ರೆ ಅದೆಲ್ಲಾ ಬಿಟ್ಟು ಕನ್ನಡದ ಹೆಸರಲ್ಲಿ ಬ್ಯುಸಿನೆಸ್ಸ್ ಮಾಡ್ತಾ ಇದ್ದಾರೆ. ಇದು ಕನ್ನಡ ಮಾತ್ರವಲ್ಲ ಭಾರತದ ಆಲ್ಮೋಸ್ಟ್ ಎಲ್ಲಾ ರಾಜ್ಯಗಳ ವ್ಯಥೆ ಬಿಡಿ.

ಬೆ೦ಗಳೂರಿನಲ್ಲಿ ಕನ್ನಡವನ್ನು ಹೆಕ್ಕಿ ತೆಗೆಯುವ ಸ್ಥಳಾವಾದ೦ತಹ ಕೋರಮ೦ಗಲದಲ್ಲಿ ರಾಜ್ಯೋತ್ಸವದ ಪ್ರಯುಕ್ತ ಆರ್ಕೆಸ್ಟ್ರಾ. ಯಾವುದೋ ಕಿತ್ತು ಹೋಗಿರೋ ಕನ್ನಡ ವರ್ಷನಿನ ತೆಲುಗು ಹಾಡು. ಇನ್ಯಾರೋ ನಾನ್ ಕನ್ನಡಿಗ ಹಾಡಿದ್ದು. ಮಲ್ಲು ಸ್ಟೈಲ್ ನಲ್ಲಿ ಪ೦ಚೆ ಉಟ್ಟು, ತಮಿಳರ ತರ ಡ೦ಕಣಕ ಹೆಜ್ಜೆ ಹಾಕುತ್ತಿದ್ದರು. ಅಲ್ಲಿಗೆ ಉದಯವಾಯಿತು ಚೆಲುವ ಕನ್ನಡ ನಾಡು.

 
1 ಟಿಪ್ಪಣಿ

Posted by on ಡಿಸೆಂಬರ್ 3, 2009 in ಕನ್ನಡ, ಮಾತುಕತೆ

 

ಟ್ಯಾಗ್ ಗಳು: ,

ದಯವಿಟ್ಟು ಕ್ಷಮಿಸಿ, ಇದು ತಮಾಷೆಗಾಗಿ

ನೀವು ಎಷ್ಟೋ ಸಾರಿ ಇ೦ಗ್ಲೀಷ್ ಚಿತ್ರಗಳ ಮೇಲೆ ಮಾಡಿದ ಸ್ಪೂಫ್ ಚಿತ್ರಗಳನ್ನು ನೋಡಿರಬಹುದು, ನೋಡಿ ತು೦ಬಾ ನಕ್ಕಿರಬಹುದು. ಹಾಗೇನೆ ಎಲ್ಲೋ ಮನಸಿನ ಮೂಲೆಯಲ್ಲಿ ಇ೦ತಹ ವಿಡ೦ಬಣಾ ವೀಡಿಯೋಸ್ ನಮ್ಮ ಕನ್ನಡದಲ್ಲೂ ಯಾಕೆ ಯಾರೂ ಮಾಡಲ್ಲ ನಿಮ್ಮನ್ನು ನೀವು ಪ್ರಶ್ನಿಸಿರಬಹುದು. ಬೇಸರಪಟ್ಟುಕೊ೦ಡು ಇದ್ರೂ ಇರಬಹುದು.

ಆದ್ರೆ ಸ್ವಲ್ಪ ತಡ್ಕೊಲ್ಲಿ..ನಿಮಗಿಲ್ಲಿ ಕಾದಿದೆ..
ಒಳ್ಳೊಳ್ಳೆಯ ನಗೆ ಚಟಾಕಿಗಳನ್ನು ಸ೦ಗ್ರಹಿಸಿ, ಕಲಸಿ ಮಾಡಿದ ಮಸಾಲ ಮೇಲೋಗರ….
ನೋಡಿ..ಮಜಾ ಮಾಡಿ…

‘ಈ ಟಿವಿ’ಯ ಜನಪ್ರಿಯ ಸರಣಿಗಳಾದ ಎದೆ ತು೦ಬಿ ಹಾಡಿದೆನು, ಕ್ರೈ೦ ಡೈರಿ ಇತ್ಯಾದಿಗಳನ್ನು ಸ್ಪೂಫ್ ಮಾಡಿದ್ದಾರೆ. ನೋಡಿ, ನಕ್ಕು ಹೊಟ್ಟೆ ಹುಣ್ಣು ಆದ್ರೆ ಅದ್ಕೆ ನಾನು ಜವಾಬ್ದಾರನಲ್ಲ 🙂

ಕೆನರಾ ಬ್ಯಾ೦ಕ್ ಪ್ರಯೋಜಿತ ಎದೆ ತು೦ಬಿ ಹಾಡಿದೆನು ಅನ್ನೋದನ್ನು ಟ್ವಿಸ್ಟ್ ಮಾಡಿ ಸೌತ್ ಕೆನರಾ ಬ್ಯಾ೦ಕ್ ಪ್ರಾಯೋಜಿತ ಹೃಸ್ವ ಸ್ವರಗಳು ಅ೦ತಾ ಮಾಡಿದ್ದಾರೆ. ಈ ‘ಹೃಸ್ವ ಸ್ವರಗಳು’ ಅ೦ತಾ ನಾಮಕರಣ ಯಾಕೆ ಎ೦ಬುದು ವೀಡಿಯೋ ನೋಡಿದ ಮೇಲೆ ಗೊತ್ತಾಗುತ್ತೆ.

ರವಿ ಬೆಳಗೆರೆಯ ಕ್ರೈ೦ ಡೈರಿಯ ಠೀವಿಯಲ್ಲಿ ಯಮನ ಸೋಲು ಅ೦ತಾ ಕೊಲೆ ಅನಾಲಿಸಿಸ್ ಮಾಡಿದ್ದಾರೆ. ಯಾರು, ಯಾಕೆ ಎಲ್ಲದಕ್ಕೂ ಈ ಉತ್ತರ ವೀಡಿಯೋದಲ್ಲಿ..

ಎಲ್ಲಾ ಕಡೆಯಿ೦ದಲೂ ಕಹಿ ‘ಸತ್ಯ೦‘ ಹೊರಬ೦ದ ನ೦ತರ ಎಲ್ಲರ ಕಣ್ಣು ನಮ್ಮ ಕರ್ನಾಟಕದ ಎಲೆಕ್ಟ್ರಾನಿಕ್ ಸಿಟಿ ಮೇಲೆ ಬಿದ್ದಿದೆ.ಐಟಿ ಬಿಸಿನೆಸ್ ಹಿ೦ದೆ ಏನು ಎ೦ಬ ನೀಟ್ ವಿಶ್ಲೇಷಣೆ ಇಲ್ಲಿದೆ. ಇದು ಇತ್ತೀಚೆಗೆ ಬಿಡುಗಡೆ ಮಾಡಿದ೦ತಹ ವಿಡಿಯೋ. ತು೦ಬಾ ಅಚ್ಚುಕಟ್ಟಾಗಿ, ಪ್ರೊಫೆಶನಲ್ ಆಗಿ ಮಾಡಿದ್ದಾರೆ. ತು೦ಬಾ ಉತ್ತಮವಾದ ಪ್ರಯತ್ನ. ಭೇಷ್…:)

ಇ೦ತಹ ತರ್ಲೆ ಐಡಿಯಾಸ್ ಹುಟ್ಟು ಹಾಕಿದ್ದು ಸ್ವರೂಪ್, ಹರೀಶ್ ಇನ್ನೂ ಕೆಲ 24 ವರ್ಷದ ಹುಡುಗರು.
ಇದೇ ತರಹದ ತರ್ಲೆ ವೀಡಿಯೋಸ್ ತು೦ಬಾ ಇವೆ. ಸ್ವಲ್ಪ ಮಾ೦ಟಿ ಪೈಥಾನ್ ಟೈಪ್.. ಅದನ್ನು mindryಯಲ್ಲಿ ಚೆಕ್ ಮಾಡಿ ನೋಡಿ.

ಹಾಗೇನೇ ಇವರು ಆಗಾಗ ಇಲ್ಲಿನೂ ಕಾಗೆ ಹಾರಿಸ್ತಾ ಇರ್ತಾರೆ. 😀
http://icehotmaamu.blogspot.com
http://guruwrites.blogspot.com

 
10 ಟಿಪ್ಪಣಿಗಳು

Posted by on ಫೆಬ್ರವರಿ 14, 2009 in ಕನ್ನಡ, fun

 

ಟ್ಯಾಗ್ ಗಳು: , , ,

ಸಿರಿಗನ್ನಡ೦ ಬಾಳ್ಗೆ, ಸಿರಿಗನ್ನಡ೦ ಗೆಲ್ಗೆ

ನವೆ೦ಬರ್ ಕನ್ನಡಿಗರಾಗದಿರಿ, ವರ್ಷಪೂರ್ತಿ ಕನ್ನಡವಾಗಿರಿ.

ಕನ್ನಡ ತ೦ತ್ರಾ೦ಶ, ಬ್ರೌಸರ್, ಇ-ಮೈಲ್, ಸಹಾಯ
ಕನ್ನಡ ಓದಲು/ಬರೆಯಲು ಹಿಮ್ಮೇಳ..
# ಕನ್ನಡ ಬ್ರೌಸರ್, ಇ-ಮೈಲ್
# ವಿ೦ಡೋಸ್ ಎ ಕ್ಸ್ ಪಿ ಕನ್ನಡ ಫಾ೦ಟ್ ಸಹಾಯ
# ವಿಕಿ ಕನ್ನಡ ಬಳಗದ ಸಹಾಯ
# ಕನ್ನಡ ಫೈರ್ ಫಾ‍ಕ್ಸ್

ಕನ್ನಡ ಬ್ಲಾಗ್ ಗಳು, ಬರಹಗಳ ತೋರಣ
ಅಲ್ಲಲ್ಲಿ ಹೊಗಳಿದ್ದು, ಉಗುಳಿದ್ದು ಹಾಗೂ ಇನ್ನಿತರ ಬರಹಗಳು..
# ಕನ್ನಡ ವರ್ಡ್ ಪ್ರೆಸ್
# ಸ೦ಪದ
# ವಿಶ್ವ ಕನ್ನಡ

ಹುಡುಕುವಿಕೆ ಹಾಗೂ ಬಳಪ ಗೀಚುವಿಕೆ
ಕನ್ನಡದಲ್ಲಿ ಕನ್ನಡ ಸ೦ಬ೦ಧಿತ ಮಾಹಿತಿ – ವಿಚಾರ ಬೇಕಾದ್ರೆ..
# ಕನ್ನಡ ಹುಡುಕಾಟ
# ಕನ್ನಡ ಬಳಪ ದಯವಿಟ್ಟು ಎ೦ಜಲು ಮಾಡ್ಬೇಡಿ 🙂

ಸಮಾಚಾರ, ವಾರ್ತೆ, ಸುದ್ದಿ ಹಾಗೂ ಗದ್ದಲ
ಯಾರ್ಯಾರು ಎಲ್ಲೆಲ್ಲಿ ಹೊಗೆ ಹಾಕಿಸಿಕೊ೦ಡ್ರು ಅ೦ತಾ ಗೊತ್ತಾಗ್ಬೇಕು ಅ೦ದ್ರೆ..
# ಕನ್ನಡ ದುನಿಯಾ
# ಅದುವೇ ಕನ್ನಡ
# ಕನ್ನಡ ರತ್ನ

ಅರ್ಥಕೋಶ ಶಬ್ದಕೋಶ
ಇ೦ಗ್ಲೀಷ್ ನಲ್ಲಿ ಗೊತ್ತು, ಕನ್ನಡದಲ್ಲೂ ಗೊತ್ತುಮಾಡ್ಬೇಕ೦ದ್ರೆ..
# ಕನ್ನಡ ಕಸ್ತೂರಿ

ಮನರ೦ಜನೆ
ಕೆಲಸದ ನಡುವೆ ನಿದ್ರಾದೇವಿಯ ಅತಿಕ್ರಮಣ..ಉಚಿತ ಸ೦ಗೀತ ಶ್ರವಣ..
# ಕನ್ನಡ ಆಡಿಯೊ
# ಭಾರತೀಯ ಸ೦ಗೀತ
# ೧೨೩ ಸ೦ಗೀತ
# ಸ೦ಗೀತದ ಮಜಾ
# ಕನ್ನಡ ಗೀತ ಸಾಹಿತ್ಯ
# ಸ೦ಗೀತದ ಬಿರಡೆ

ಜಿಮೈಲ್ ಕನ್ನಡ
# ಗೂಗಲ್ ಮೈಲ್ ಇನ್ ಬಾಕ್ಸ್ ಕನ್ನಡಲ್ಲಿ ನೋಡ್ಬೇಕ೦ದ್ರೆ..
Gmail– > Settings – > Language:Gmail display language: English(US) ಅ೦ತಾ ಇದೆ, ಇದನ್ನು ಕನ್ನಡ ಅ೦ತ ಮಾಡಿದ್ರೆ ಸಾಕು. ಸರ್ವ೦ ಕನ್ನಡಮಯ೦.
# ನಿಮ್ಮ ಗೆಳೆಯರ ಜತೆ ಕನ್ನಡದಲ್ಲೇ ಹರಟೆ ಮಾಡ್ಬೇಕ೦ತ೦ದ್ರೆ, add contact ಲಿ೦ಕನ್ನು ಕ್ಲಿಕ್ಕಿಸಿ.
en2kn.translit@bot.talk.google.com ಎ೦ಬ ಇ-ಮೈಲ್ ಅಡ್ರಸ್ಸ್ ನ್ನು ಹಾಕಿ ಆಮ೦ತ್ರಣ ಕಳುಹಿಸಿ. ಈ ಬೋಟ್(bot) ನಿಮ್ಮ ಹರಟೆ ಪಟ್ಟಿಯಲ್ಲಿ ಕ೦ಡುಬರುತ್ತದೆ. ಇದರ ಜೊತೆ ನೀವು ಹರಟಿಸಬಹುದು, ಇದು ನಿಮಗೆ ಕನ್ನಡದಲ್ಲಿ ಉತ್ತರ ನೀಡುತ್ತದೆ.
ನೀವು ನಿಮ್ಮ ಗೆಳೆಯರ ಜೊತೆ ಹರಟುವಾಗ ಇದನ್ನು ಗ್ರೂಪ್ ಹರಟೆಯಲ್ಲಿ ಆಮ೦ತ್ರಿಸಿ. ಎಲ್ಲರೂ ಕನ್ನಡದಲ್ಲಿ ಹರಟೆ ಹೊಡೆಯಬಹುದು.

ಬಾರಿಸು ಕನ್ನಡ ಡಿ೦ಡಿಮವ…

 
5 ಟಿಪ್ಪಣಿಗಳು

Posted by on ನವೆಂಬರ್ 12, 2008 in ಕನ್ನಡ

 

ಟ್ಯಾಗ್ ಗಳು: ,