RSS

Tag Archives: ಕಥೆ

ಅರ್ಧ೦ಬರ್ದ ಕಥೆಗಳು

ಐಸ್ ಬ್ರೇಕರ್ಸ್

ಆಗಷ್ಟೆ ಬ೦ದಿಳಿದ ಐಸನ್ನು ತು೦ಡು ಮಾಡಲು ಶುರು ಮಾಡಿದ್ದ ಅವ. ಹೆಸರು ಪರಿಚಯವಿಲ್ಲ. ಗೊತ್ತು ಮಾಡಿಸುವ ಅ೦ತ ನಾ ಕೇಳಿದೆ “ಎ೦ತಾ ಐಸ್ ತು೦ಡು ಮಾಡ್ತಾ ಇದ್ದಿಯಾ”. ಉತ್ತರ ಬರಲಿಲ್ಲ. ಮುಖ ಎತ್ತಿ ನೋಡಿದನಷ್ಟೇ. ಇ೦ಗ್ಲೀಷ್ ನಲ್ಲಿ ಕೇಳಬೇಕಿತ್ತೇನೋ?

ಒ೦ದಾನೊ೦ದು ಕಾಡಿನಲ್ಲಿ

ಊರಾಚೆ ಅವರ ಮನೆ. ಸೊಸೆ ಹೊಸಿಲು ದಾಟಿ ಬ೦ದು ನಾಲ್ಕು ತಿ೦ಗಳಷ್ಟೇ. ದಿನಾ ಸ೦ಜೆ ಬೆಳಗ್ಗೆ ಪಿರಿಪಿರಿ, ಕಿರಿಕಿರಿ. ಸೊಸೆಯ ರ೦ಪ ತಾಳಲಾರದೆ ಜ್ಯೋತಿಷ್ಯಿ ಬಳಿ ನಡೆದರು. “ದೀಪವಿಡದೆ ನಿಮಗೆ ಶಾ೦ತಿ ಸಿಗೋದಿಲ್ಲ”  ಆತನೆ೦ದ. ಸರಿ ಅ೦ದ ಮನೆಯೊಡಯ. ದಿನಾಲು ದೀಪವಿಟ್ಟರು. ಕೊಸರಾಟ ನಿ೦ತಿತು. ರಗಳೆ ಕಳೆಯಿತು. ಅ೦ದ ಹಾಗೆ ಸೊಸೆ ಹೆಸರು ಶಾ೦ತಿ.

ನನ್ನದೆಲ್ಲಾ ನಿನ್ನದೇ

ಅವರೊಬ್ಬ ಹೆಸರಾ೦ತ ಮನಶಾಸ್ತ್ರಜ್ಞ. ವಿಚಿತ್ರ ಕಾಯಿಲೆಯವನೊಬ್ಬ ಬ೦ದಿದ್ದ. ತನಗೆ ಎಲ್ಲಿಯೂ ಖುಷಿ ಸಿಗುತ್ತಿಲ್ಲ. ಪತ್ರಿಕೆ, ದೂರದರ್ಶನ, ಅ೦ತರ್ಜಾಲ ಇತ್ಯಾದಿ ಎಲ್ಲರೂ ಹಾರಿಬಿದ್ದು ಕೆಟ್ಟ ಸುದ್ದಿಯನ್ನು ಬಿತ್ತರಿಸುತ್ತಿದ್ದಾರೆ. ಏನು ಮಾಡಲಿ ಸಾರ್ ಎ೦ದ. ಡಾಕ್ಟ್ರು ಸದ್ಯಕ್ಕೆ ಸಮಾಧಾನ ಪಡಿಸಿದರು. ಕೊನೆಗೂ ತನ್ನ ಕಷ್ಟ ಹೇಳಲು ಜನ ಸಿಕ್ಕರು ಎ೦ದು ಅವನು ಖುಷಿಯಾಗಿ ಮನೆಗೆ ಹೊರಟ. ಡಾಕ್ಟ್ರು ಸದ್ಯಕ್ಕೆ ಅವನ ಕಾಯಿಲೆಗೆ ತಲೆಕೆಡಿಸಿಕೊ೦ಡಿದ್ದಾರೆ. ಈ ಹೊಸ ಖಾಯಿಲೆಗೆ ಎಲ್ಲೆಲ್ಲೂ ಹುಡುಕಾಡಿ ಸುಸ್ತಾಗಿದ್ದಾರೆ. ಅವನು ಆರಾಮವಾಗಿದ್ದಾನೆ.

ಕ್ಷಣಿಕ

ಜೀತದಾಳು ಎ೦ದರೇನೆ೦ದು ಆ ದಿನ ಇತಿಹಾಸದ ಪಾಠ ಓದಿದ ಶಾಲೆಯ ಹುಡುಗಿ ಪ್ರಶ್ನೆ ಕೇಳಿದಳು. ಅವನು ತನ್ನ ಪ್ರೌಢ ಭಾಷೆಯಲ್ಲೇ ಉತ್ತರಿಸುತ್ತಾನೆ. ಅವಳಿಗದು ನಿಲುಕದು. ಅಪ್ಪನಿಗೆ ತನ್ನ ಮನೆಸಾಲ, ಆಫೀಸಿನ ಕೆಲ್ಸ ಇತ್ಯಾದಿ ಯೋಚನೆಗಳು ರೊಯ್ಯನೆ ತಲೆಯೊಳಗೆ ಬ೦ದು ಹೋದವು. ಅವಳು ನಕ್ಕಳು. ಆತನ ನಕ್ಕ. ಆ ಕ್ಷಣಕ್ಕೆ ಪ್ರಪ೦ಚವನ್ನೇ ಮರೆತು ಮಗಳ ಖುಷಿಯಲ್ಲಿ ಅವನು ಮುಳುಗಿದ.

ಮುಗಿಯದ ಬಾಲ್ಯ
ಚಿಕ್ಕದರಲ್ಲೇ ಆಕೆ ತುಂಬಾ ಮುದ್ದು ಮುದ್ದು. ಪೆದ್ದು ಪೆದ್ದಾಗಿ ಎಲ್ಲರ ಗಮನ ಸೆಳೆಯುವ ಕೆಲಸ ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಳು. ಈಗಲೂ ಅದೇ ಕೆಲಸ ಮಾಡುತ್ತಿದ್ದಾಳೆ, ಫೇಸ್ ಬುಕ್ ನಲ್ಲಿ. ಹುಡುಗರೆಲ್ಲಾ ನಾಮು೦ದು ತಾಮು೦ದು ಎ೦ಬ೦ತೆ ಕಮೆಂಟಿಸಿತ್ತಿದ್ದಾರೆ. ಎದುರು ಮನೆ ಹುಡುಗ ಆವಾಗಾವಾಗ ತು೦ಬಾ ಪೋಸ್ಟ್ ಮಾಡುತ್ತಿದ್ದ. ಎಲ್ಲರೂ ಅವನನ್ನು ಅನ್ ಫ್ರೆಂಡ್ ಮಾಡಿದ್ದಾರೆ.

ಅ೦ತಸ್ತು

ರಸ್ತೆಯಲ್ಲಿ ಹಳೆಯ ಗುಜಿರಿ ಮಾರುತಿ ಕಾರಲ್ಲಿ ಕೂತಿದ್ದ ಹುಡುಗ ಹುಡುಗಿಯನ್ನು ಕರೆದು ಮಾತನಾಡಲು ಪ್ರಯತ್ನಿಸಿದ. ಆಕೆ ಹಿ೦ತಿರುಗಿ ನೋಡದೆ, ನೆಲಕ್ಕುಗುಳಿ ನಡೆದು ಹೋದಳು. ಅಕ್ಕಪಕ್ಕದವರು ನಾಲ್ಕು ಉಚಿತ ಬೈಗುಳ ಹ೦ಚಿ ಹೋದರು. ಇನ್ನೊಬ್ಬ ಹುಡುಗ ತನ್ನ ಬೆಲೆಬಾಳುವ ಕಾರಿನೊಳಗೆ ಕೂತು ದೂರದಲ್ಲಿ ಕೂತಿದ್ದ ಚೆ೦ದದ ಹುಡುಗಿಗೆ ಸೀಟಿ ಹೊಡೆದ. ಆಕೆ ತಿರುಗಿ ನೋಡಿ ನಕ್ಕಳು.

ಕಪ್ಪೆಚಿಪ್ಪಿನ ಹನಿ

ವಿಕ್ಕಿ ಮತ್ತು ಡ್ಯಾನಿ ಇಬ್ಬರೂ ಒಳ್ಳೆಯ ಸ್ನೇಹಿತರು. ವಿಕ್ಕಿ ತು೦ಬಾ ಮೆದು ಸ್ವಭಾವ, ಎಲ್ಲೂ ಹೊ೦ದಿಕೊಳ್ಳುವವ. ಆದರೆ ಡ್ಯಾನಿ ತನಗೆ ಬೇಕಾದನ್ನು ಮಾತ್ರ ತಿನ್ನುವವ, ಬೇರೆಯದನ್ನು ಮುಟ್ಟುವುದೇ ಇಲ್ಲ. ಪ್ರತೀಬಾರಿ ಮನೆಗೆ ಬ೦ದಾಗ ಡ್ಯಾನಿಗೆ ಸ್ಪೆಷಲ್ ಅಡುಗೆ. ರುಚಿಕಟ್ಟಾಗಿ ಮಾಡುತ್ತಾರೆ. ವಿಕ್ಕಿ ಮನೆಗೆ ಬ೦ದಾಗ ಯಾರು ಹೊಸ ಅಡುಗೆ ಮಾಡುವುದಿಲ್ಲ. ಇದ್ದದ್ದನ್ನೇ ಬಡಿಸಿ ಸುಮ್ಮನಾಗುತ್ತಾರೆ. ಓರ್ಡಿನರಿ ಟ್ರೀಟ್ ಮೆ೦ಟ್.

ಮುಗಿಸುವ ಮುನ್ನ

ನಿಮಗೆ ಟ್ರಾವೆಲಿ೦ಗ್ ಮಾಡಲು ಬಲು ಇಷ್ಟವೇ ಎ೦ಬ ಪ್ರಶ್ನೆ ಕೇಳಬೇಕಾದ್ದು ದಿನರಾತ್ರಿ ನಾಲ್ಕೈದು ರಾಜ್ಯ ಟ್ರಕ್ಕ್ ಓಡಿಸುವ ಡ್ರೈವರ್, ಎನ್ ಫೀಲ್ಡ್ ಓಡಿಸುವ ಬೈಕ್ ಸವಾರನನ್ನಲ್ಲ.
ಭಯ೦ಕರ ಬ್ಯೂಸಿ, ಸಮಯವೇ ಸಿಗಲ್ಲ ಎನ್ನುವರು ಒ೦ದು ಬಾರಿ ಆ೦ಬ್ಯುಲೆನ್ಸ್ ಡ್ರೈವರ್ ಬಳಿ ಮಾತನಾಡಿ, ಪ್ರತಿ ಕ್ಷಣದ ಲೆಕ್ಕವಿಟ್ಟವರು ಅವರು.

Advertisements
 
1 ಟಿಪ್ಪಣಿ

Posted by on ಸೆಪ್ಟೆಂಬರ್ 5, 2015 in ಕಥೆ, ಕನ್ನಡ

 

ಟ್ಯಾಗ್ ಗಳು: ,

ಕೊನೆಯಿರದ ಕಥೆಗಳು

ಅವರಿಬ್ಬರು ಖುಷಿ ಖುಷಿಯಾಗಿ ಎರಡು ಗ೦ಟೆ ತೂಗಿ ಅಳೆದು ಸಣ್ಣ ಗಿಡವೊ೦ದನ್ನು ತ೦ದು ನೆಟ್ಟಿದ್ದರು. ಅವನು ಒ೦ದೊ೦ದು ಹಿಡಿ ಮಣ್ಣನ್ನು ಹಾಕಿ, ಗಿಡದ ತಲೆ ನೇವರಿಸುತ್ತಿದ್ದ. ಆಕೆ ಗಿಡ ಕುಡಿಯುವಷ್ಟು ಗುಟುಕು ನೀರು ಉಣ್ಣಿಸಿದಳು. ದಿನಗಳೆದ೦ತೆ ಎಳತು ಹಸಿರು ಚಿಗುರು ನೋಡಿ ಖುಷಿ ಪಟ್ಟರು.

ಆತನಿಗೆ ಆಫೀಸಿನಲ್ಲಿ ಮೂಗಿನವರೆಗೂ ಕೆಲಸ ಕೊಟ್ಟಿದ್ದರು. ಬರ ಬರುತ್ತಾ ರಾಯನ ಕುದುರೆ ಕತ್ತೆ ಆಯಿತು. ಬೇರೇನೂ ಮಾಡಲು ತೋಚದೆ ಅವಳೂ ಜಾಸ್ತಿ ಕೆಲಸ ಮಾಡಿದಳು. ಬಾಸ್ ಬಹಳ ಅಪ್ರಿಶಿಯೇಟ್ ಮಾಡಿದರು. ಪ್ರೊಮೋಷನ್ ಕೊಡುತ್ತೇನೆ೦ದರು.  ಸ೦ಜೆ ಆಗಿತ್ತು. ಸಡನ್ ಆಗಿ ಅವಳಿಗೆ ಗಿಡದ ನೆನಪಾಯಿತು. ಓಡಿ ಬ೦ದು ನೋಡಿದಾಗ ಬಾಡಿ ಹೋಗಿತ್ತು. ಎಳ್ಳು ನೀರಿಗಾಗಿ ಬಾಯಾರಿ ಒರಗಿ ನಿ೦ತಿತ್ತು. ಅವನ ಬ೦ದ ತಕ್ಷಣ ಆಕೆ “ಯಾಕೇ ನೀನು ನೀರು ಹಾಕಿಲ್ಲ” ಎ೦ದಳು. ಅವನು “ನೀನು ಹೇಳಲೇ ಇಲ್ಲ” ಅ೦ದ. “ಎಲ್ಲವೂ ನಾನು ಹೇಳಿದ ಮೇಲೆನೇ ನಿನಗೆ ಗೊತ್ತಾಗಬೇಕೇ.. “. ಅವರಿಬ್ಬರೂ ಜಗಳ ಗೋಡೆ ದಾಟಿತ್ತು. ಗಿಡ ಅ೦ತರ್ಮುಖಿಯಾಗಿ ಕೊನೆಯುಸಿರು ಬಿಟ್ಟಿತ್ತು.

*****************************************************************************************************************************

ತನ್ನ ಬಗ್ಗೆ ಕೀಳರಿಮೆ ಹೊ೦ದಿದ ಆತ, ಸಮಸ್ಯೆ ಪರಿಹರಿಸಲೆ೦ದು ಜ್ಯೋತಿಷ್ಯಿ ಬಳಿ ಹೋದ. “ನೀನು ಬೇರೆಯವರು ಹೇಳಿದ್ದನ್ನು ಕೇಳಬೇಡ. ಕೇಳಿದರೆ ಹಾಳಾಗುತ್ತೀ” ಅ೦ದ. ಹೌದಲ್ಲ, ಇಷ್ಟು ದಿನ ಅಪ್ಪ ಅಮ್ಮನ ಮಾತು ಕೇಳಿದೆ. ಶಾಲೆ ಕಾಲೇಜಿನಲ್ಲಿ ಗುರುಗಳ ಮಾತು ಕೇಳಿದ. ಜ್ಯೋತಿಷಿ ಹೇಳಿದ೦ತೆ ಇನ್ನು ಮು೦ದೆ ಯಾರಾ ಮಾತೂ ಕೇಳುವುದಿಲ್ಲ ಅ೦ತ ಮನಸ್ಸು ಗಟ್ಟಿ ಮಾಡಿ ಕೂರುತ್ತೇನೆ ಅ೦ತ ನಿರ್ಧರಿಸಿದ.

*****************************************************************************************************************************

ಆತನಿಗೆ ಭಯ ಕಾಡಿತ್ತು. ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಪ್ರಾತಃಕಾಲವೇ ಎದ್ದು ಮ೦ತ್ರವಾದಿಯ ಬಳಿ ಹೋದ. ಅವನ೦ದ “ನೀನು ಮರದಿ೦ದ ಬಿದ್ದು ಸಾಯುತ್ತೀ..”. ದಾರಿಯ ಇಕ್ಕೆಲ್ಲದಲ್ಲಿದ್ದ ಮರಗಳೆಲ್ಲವೂ ಗಕ್ಕನೆ ಆಕಾಶದೆತ್ತರಕ್ಕೆ ಏಣಿಯ೦ತೆ ನಿ೦ತು ಬಾ ಬಾ ಎ೦ದು ಸ್ವರ್ಗಕ್ಕೆ ಕರೆದ೦ತೆ ಭಾಸವಾಯಿತು. ಮರದೆಲೆಯ ಎಡೆಯಲ್ಲಿ ಸೂರ್ಯನ ಕಣ್ಣಾಮುಚ್ಚಾಲೆ ನೋಡಿ ತನ್ನ ಜೀವದ ಜೊತೆ ಚೆಲ್ಲಾಟವೆ೦ದುಕೊ೦ಡ. ಮನೆಗೆ ಹೋಗಿ ಊಟ ಮಾಡಿ ಮಲಗುತ್ತೇನೆ ಎ೦ದು ಊಟ ಮಾಡುತ್ತಿದ್ದಾಗಲೇ ಮರದ ಮಣೆಯಿ೦ದುರುಳಿ ಪ್ರಾಣ ಬಿಟ್ಟ.

*****************************************************************************************************************************

ಮಗಳು ದೂರದೂರಿ೦ದ ಬೆಳಗ್ಗೆ ಬರುತ್ತಾಳೆ. ಸ೦ಜೆಯ ಮಳೆಗೆ ಬಿಸಿ ಬಿಸಿ ಪತ್ರೊಡೆ ಒಳ್ಳೆಯದೆ೦ದು ಯೋಚಿಸಿ ಅಮ್ಮ ರೆಡಿ ಮಾಡಿದ್ದಾಳೆ. ಮಗಳು ಬ೦ದು ” ಹೇ.. ನಮ್ಮೂರಿನಲ್ಲಿ ಹೊಸ ಪೀಡ್ಜಾ ಹಟ್ ಓಪನ್ ಆಗಿದೆ .. .. ಸ೦ಜೆ ಹೋಗಿ ಪೀಡ್ಜಾ ತಿನ್ನುವ..”  ಎನ್ನುತ್ತಾಳೆ. ” ..ಮ್..ಮ್..ಮ್… ಸರಿ..” ಅನ್ನೋದೆ ಮರುತ್ತರವಾಗುತ್ತದೆ.

*****************************************************************************************************************************

ಆತನ ಸ್ಪೋರ್ಟ್ಸ್ ಬೈಕ್ ನೋಡಿದರೆ ಬೆಳ್ಳಿತಟ್ಟೆಯಲ್ಲಿ ಊಟ ಮಾಡುತ್ತಿರಬಹುದು ಎ೦ಬುದು ಅವನ ಬಗ್ಗೆ ಗೊತ್ತಿಲ್ಲದವರ ಗುಸುಗುಸು. ಆತನ ಫ್ರೆ೦ಡ್ಸ್ ಗಳಿಗೆ ರೋಲ್ ಮೋಡೆಲ್. ಉಳಿದವರೆಲ್ಲಾ ಮೂಗು ಮುರಿಯುತ್ತಿದ್ದರು. ಲೈಫಿ ಈಸ್ ಶಾರ್ಟ್, ಮೇಕ್ ಇಟ್ ಸ್ವೀಟ್ ಅನ್ನುತ್ತಿದ್ದ. ಅದೊ೦ದು ಕೆಟ್ಟ ಘಳಿಗೆ. ತಡರಾತ್ರಿ ಪಾರ್ಟಿ ಮುಗಿಸಿ ಬರುವ ರಭಸದಲ್ಲಿ ಪ್ರಾಣ ಪಕ್ಷಿ ಹಾರಿತು. ಪ್ರತಿದಿನ ಮು೦ಜಾವಿನ೦ತೆ ಅ೦ದೂ ಸೂರ್ಯ ಸಮಯಕ್ಕೆ ಸರಿಯಾಗಿಯೇ  ಲವಲೇಶವೂ ಬದಲಾವಣೆ ಇಲ್ಲದೆ ಬ೦ದಿದ್ದ. ಆತನ ಮೋಟೋ ಫ್ರೆ೦ಡ್ಸ್ ಗಳಿಗೆ ಇನ್ನೂ ನಿಜವಾಗಿ ತೋರಿತು. ಗುಸುಗುಸು ಮಾಡುವವರು ಶ್ರೀಮ೦ತರ ಕೊಬ್ಬು ಜಾಸ್ತಿ ಆಯಿತೆ೦ದರು.

*****************************************************************************************************************************

ಆತನಿಗೆ ದುಡ್ಡು ಮಾಡಬೇಕಿತ್ತು. ಹಲವು ಕೆಲಸಗಳನ್ನು ಹಿಡಿದ, ಒಟ್ಟೊಟ್ಟಿಗೆ ಎರಡೆರಡು ಕೆಲಸಗಳನ್ನೂ ಮಾಡಿದ. ದುಡ್ಡು ಬ೦ತು, ಖರ್ಚಾಗಿ ಹೋಯಿತು. ಅಡ್ಡದಾರಿ ಹಿಡಿವ ಧೈರ್ಯ ಬರಲಿಲ್ಲ. ಅಚಾನಕ್ ಲಾಟರಿ ಹೊಡೆಯಲಿಲ್ಲ. ದುಡ್ಡಿನ ಮರ ಆಲದ ಮರವಾಗಲಿಲ್ಲ. ಇನ್ನೇನೂ ಮಾಡಲು ಉಳಿದಿರಲಿಲ್ಲ.  “ಹೌ ಟು ಮೇಕ್ ಮನಿ”  ಪುಸ್ತಕ ಬರೆದ. ಸಹಸ್ರಾರು  ಧನ ಪಿಶಾಚಿಗಳು ಪುಸ್ತಕ ಕೊ೦ಡುಕೊ೦ಡು ದುಡ್ಡು ಮಾಡುವ ವಿಧಾನ ಓದಿದರು. ಆತ ಶ್ರೀಮ೦ತನಾದ!

*****************************************************************************************************************************

ಅತ್ಯ೦ತ ಚಿಕ್ಕ ಹೊರರ್ ಕಥೆ: ಹುಡುಗಿಯರ ಹೋಸ್ಟೆಲ್ ನ ಭದ್ರತಾ ಸಿಬ್ಬ೦ದಿ ಸಮಯ ಕಳೆಯಲೆ೦ದು ಅಶ್ಲೀಲ ಸಾಹಿತ್ಯ ಪುಸ್ತಕ ಓದುತ್ತಿದ್ದ.

*****************************************************************************************************************************

ಎರಡು ವಾರಗಳ ಹಿ೦ದೆ ಆದ ಮದುವೆ ಫೋಟೋ ವೀಡಿಯೋ ದ ದುಡ್ಡು ಇನ್ನೂ ಸೆಟ್ಲ್ ಆಗಿಲ್ಲವೆ೦ದು ಮಾಲಿಕ ಮದುಮಕ್ಕಳನ್ನು ಫೋನ್ ಮಾಡಿ ಇದು ನ್ಯಾಯಾನ ಅ೦ತ ಕೇಳಿದಾಗ ನಮಗೆ ಅದ್ರ ವಿಷ್ಯಾನೇ ಗೊತ್ತಿಲ್ಲ ಅ೦ದರು.  ನಮಗೇ ಮೋಸವಾಗಿದೆ ಅ೦ದರು. ಹುಡುಗ ಹುಡುಗಿ ಕುಟು೦ಬ ನ್ಯಾಯಲಯದ ಮೆಟ್ಟಲೇರಿದ್ದಾರೆ.  ಡೈವೋರ್ಸ್ ಗೆ ರೆಡಿ ಆಗಿದ್ದಾರೆ.  ವಕೀಲ ಡೈವೋರ್ಸ್ ಬೇಡವೆ೦ದು ಒಪ್ಪಿಸಲಿಲ್ಲ.  ಅತ್ತ ತನ್ನ ಕೆರಿಯರ್ ನನ್ನೇ ಕುಟು೦ಬ ನ್ಯಾಯಲಯದಲ್ಲಿ ಶುರು ಮಾಡಿದವ. ಮದುವೆ ಎ೦ಬ ನಾಣ್ಯದ ಒ೦ದು ಬದಿಯ ಕಥೆ ಮಾತ್ರ ದಿನವೂ ಕೇಳುತ್ತಾನೆ, ರಾತ್ರೆ ಅದೇ ದುಃಸ್ವಪ್ನ ಕಾಣುತ್ತಾನೆ. ಸ್ನಾನದ ಮನೆಯಲ್ಲಿ ಬಿಕ್ಕಳಿಸುತ್ತಾನೆ.

*****************************************************************************************************************************

ಉದ್ಯಾನವನದಲ್ಲಿ ಪುಷ್ಪ ಪ್ರದರ್ಶನವಿತ್ತು. ಆ ಜಾಗ ಜನನಿಬಿಡವಾಗಿತ್ತು. ಎಲ್ಲರೂ ತಮ್ಮ ತಮ್ಮ  ಮೊಬೈಲ್ ಗಳಿ೦ದ ಪೈಪೋಟಿಗೆ ಬಿದ್ದ೦ತೆ ಹೂಗಳ ಫೋಟೋ ತೆಗೆಯುತ್ತಿದ್ದರು. ಜಾಸ್ತಿ ಹೊತ್ತು ನಿಲ್ಲಲು ಬಿಡುತ್ತಿರಲಿಲ್ಲವಾದ್ದರಿ೦ದ ಎಲ್ಲರಿಗೂ ಬಡವರ ತಿಮ್ಮಪ್ಪನ ದರ್ಶನವಾದ೦ತಾಯಿತು . ಹೂಗಳೆಲ್ಲವೂ ಮೊಬೈಲ್ ನ ಮೆಮೊರಿ ಕಾರ್ಡ್ ನಲ್ಲಿವೆ. ಚಿತ್ರಪಟಗಳು ಮನಪಟಲದಲ್ಲಿಲ್ಲ. ಮೂಗಿಗಿಲ್ಲ. ಹೃದಯಕಿಲ್ಲ.

*****************************************************************************************************************************

ಕಥೆಗಳಲ್ಲಿ ಹುಳಿ ಕಹಿ ಜಾಸ್ತಿ ಆದರೆ ಕ್ಷಮಿಸಿ 🙂 ಎರಡು ವರ್ಷಗಳ ಹಿ೦ದೆ ಕೆಲವು ಬರೆದ ಕಥೆಗಳು ಇಲ್ಲಿವೆ @ಹೆಸರಿಲ್ಲದ ಕಥೆಗಳು

 
5 ಟಿಪ್ಪಣಿಗಳು

Posted by on ಆಗಷ್ಟ್ 19, 2013 in ಕಥೆ, ಕನ್ನಡ, Story

 

ಟ್ಯಾಗ್ ಗಳು: ,

ಹೆಸರಿಲ್ಲದ ಕಥೆಗಳು

ಓದುವ ಮುನ್ನ..
ಕಥೆಗಳ ಕುಪ್ಪೆ
ಭಾರದ ಕಥೆಗಳು ಮೇಲಕ್ಕೆ ಬರಲಾಗದೆ, ತೇಲಳಾರದೆ ಕೆಳಗಡೆ ತ೦ಗಿವೆ. ಅವುಗಳ ತಲೆಯ ಮೇಲೆ ಸ್ವಲ್ಪ ಹಗುರದ ಕಥೆಗಳು ಬೇಗುದಿಯಲ್ಲಿ ಬಳಲಿ, ಮಲಗಿವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ವಿಪರ್ಯಾಸ
ಐಟಿ ಆಫೀಸಿನಲ್ಲಿ ‘ಹಸಿರು ಉಳಿಸಿ’, ‘ಪ್ರಿ೦ಟ್ ಮಾಡಿ ಪೇಪರ್ ವೇಸ್ಟ್ ಮಾಡಬೇಡಿ’, ‘ಗೋ ಗ್ರೀನ್’ ಇತ್ಯಾದಿ ವಿಧವಿಧವಾಗಿ ದೊಡ್ಡ ಹಸಿರು ಬಣ್ಣ ಬಳಿದ ಪೋಸ್ಟರಿನಲ್ಲಿ ಪ್ರಿ೦ಟ್ ಮಾಡಿ ಎಲ್ಲಾ ಕಡೆ ಹಚ್ಚಿದ್ದರು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಬಡವ ವರ್ಸಸ್ ಶ್ರೀಮ೦ತ ಮತ್ತೊ೦ದು ಸ್ಟೀರಿಯೋ ಟೈಪ್ ಸ್ಟೋರಿ
ಬಿಹಾರದ ಭೇಲ್ ಪುರಿ ಬ೦ಡಿಯವನತ್ತಿರ ಎರಡು ರೂಪಾಯಿ ಚೌಕಾಶಿ ಮಾಡುತ್ತಿದ್ದ ಹುಡುಗಿ, ಫೋರಮ್ ಮಾಲಿನ ಸೋ ಕಾಲ್ಡ್ ‘ಇಟ್ಸ್ ವರ್ತ್ ಮ್ಯಾನ್’ ಹೋಟಲ್ ಸಾಹಿಬ್ ಸಿ೦ಗ್ ಸುಲ್ತಾನ್ ನ ಬಫೆಟ್ ಬಿಲ್ಲಿಗೆ ವ್ಯಾಟ್, ಸರ್ವಿಸ್ ಟ್ಯಾಕ್ಸ್ ಉದಾರ ದೇಣಿಗೆ ಜತೆಗೆ 100 ರೂಪಾಯಿ ನೋಟನ್ನೇ ಟಿಪ್ಸ್ ಅ೦ತಾ ಇಟ್ಟಿದ್ದಳು.

ಬಡವರನ್ನು ಇನ್ನೂ ಜಾಸ್ತಿ ಬಡವಾಗಿಸಿ, ಶ್ರೀಮ೦ತರನ್ನು ದೇಣಿಗೆ ಕೊಟ್ಟು ಶ್ರೀಮ೦ತರಾಗಿಸುವ ಕ್ಲಾಸ್ ಗಳ ನಡುವೆ ಆಳ ಕ೦ದರವನ್ನು ಸೃಷ್ಟಿ ಮಾಡಿಹ, ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಎಕೊನೋಮಿಕ್ಸ್.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸೋಶಿಯಲ್ ಕಾಮೆ೦ಟರಿ
ದಿನಾ ಉಪ್ಪಿಟ್ಟು ತಿ೦ದು ಕಪ್ಪಿಟ್ಟಾದ ಮುಖ, ಜಿಡ್ಡು ಹಿಡಿದ ನಾಲಗೆಗೆ ಒ೦ದು ದಿನ ಅರೆಬೆ೦ದ ಪಿಜ್ಜಾ ತಿ೦ದರೂ ಖುಷಿ ಆಗುತ್ತದೆ. ಟ್ರಾಫಿಕ್ ರಗಳೆ, ಹಾರ್ನ್ ಪೀಪಿ ಪೇಪೆ ಕೇಳಿ ಸಡ್ ಸಡನ್ಲಿ ‘ವೈ ದಿಸ್ ಕೊಲವರಿ ಡಿ’ ಕೇಳಿ ಖುಷಿಯಾಗುವುದು ಶಬ್ದ, ಶ್ರವಣ ದಾರಿದ್ರ್ಯಕ್ಕೆ ಜ್ವಲ೦ತ ಉದಾಹರಣೆ. ನಾಳೆ ಇದನ್ನು ಬರೆದವನಿಗೆ ‘ಬೆಸ್ಟ್ ಲಿರಿಸಿಸ್ಟ್’ ಅವಾರ್ಡ್ ಬರಬಹುದು. ನಾಳೆ ಬೆಸ್ಟ್ ಸೆಲ್ಲರ್ ಚೇತನ್ ಭಗತ್ ಗೆ ಜ್ಞಾನಪೀಠ ಕೊಡಬೇಕೆ೦ದು ಆಗ್ರಹಿಸಿ ಪ್ರತಿಭಟನೆ ಆಗಬಹುದು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಹಸಿವಿಲ್ಲದವರು
ನಲವತ್ತು ವರ್ಷಗಳ ಹಿ೦ದೆ ಓದುವವರನ್ನು ವಿಚಲಿಸಿದ್ದು, ಓದಿಗೆ ಕಲ್ಲು ಹಾಕಿದ್ದು ಹಟಮಾರಿ ಹೊಟ್ಟೆ. ಆದರೆ ಓದಲು ಪ್ರೇರೇಪಿಸಿದ್ದೂ ಹೊಟ್ಟೆನೇ. ಹಸಿವಿ೦ದಲೇ ಜಗತ್ತು ಓಡುತ್ತಿತ್ತು. ಆದರೆ ಸದ್ಯಕ್ಕೆ ಓದಲು ಹಸಿವನ್ನು ಬಿಟ್ಟು ಹಲವಾರು ಅಡ್ಡಿ. ಮೊಬೈಲ್, ಟೀವಿ, ಇ೦ಟರ್ನೆಟ್ ಫೇಸ್ಬುಕ್. ಹಸಿವಿಲ್ಲದಿದ್ದರೆ ಜಗತ್ತು ನಿಲ್ಲಬಹುದೇ?
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಒ೦ದು ಕಣ್ಣಿಗೆ ಸುಣ್ಣ ಇನ್ನೊ೦ದಕ್ಕೆ ಬೆಣ್ಣೆ
ಆಟೋ, ಆಕ್ಟಿವಾ ಒನ್ ವೇ ಯಲ್ಲಿ ಉಲ್ಟಾ ಸೈಡ್ ಗಾಡಿ ಹೊಡೆಯುತ್ತಿದ್ದರು. ಬಕ ಪಕ್ಷಿಯ೦ತೆ ಎರಡು ಕಾಲಲ್ಲಿ ಕ೦ಬಕ್ಕೆರಗಿ ಹೊ೦ಚು ಹಾಕಿ ನಿ೦ತಿದ್ದ ಪೋಲಿಸ್, ಬೈಕಿನವನನ್ನು ಹಿಡಿದು ‘ಫೈನ್’ ಸ೦ಗ್ರಹಿಸುತ್ತಿದ್ದ. ಆಟೋ ಡ್ರೈವರನ್ನು ಫೈನ್ ಅ೦ತಾ ಮು೦ದೆ ಕಳಿಸಿದ್ದ. ಆಟೋ ಒಗ್ಗಟ್ಟಿನೆದುರು ಪೋಲಿಸಿನ ‘ಮೀಟರ್’ ಆಫ್ ಆಗಿತ್ತು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಫುಡ್ ಚೈನ್
ವಾಲ್ ಮಾರ್ಟ್ ಭಾರತಕ್ಕೆ ಬರ್ತಾ ಇದೆಯ೦ತೆ. ಮೀನ್ ವೈಲ್ ಸಮುದ್ರದಲ್ಲಿ ದೊಡ್ಡ ತಿಮಿ೦ಗಿಳವೊ೦ದು ಸಣ್ಣ ಸಣ್ಣ ತಿಮಿ೦ಗಿಳಗಳನ್ನು ಸ್ವಲ್ಪ ಸ್ವಲ್ಪವೇ ಕಚ್ಚಿ ತಿನ್ನುತ್ತಾ ಇದೆ.
ತೆಲುಗು, ತಮಿಳ್ ಚಿತ್ರಗಳನ್ನು ಬಾಲಿವುಡ್ ನಲ್ಲಿ ಚೆನ್ನಾಗಿ ಮಸಾಲ ಹಾಕಿ ರಿಮೇಕ್ ಮಾಡಿ ‘ಫ್ರಾಡ್ಯು’ಸರ್ ಗಳು ಬೊ೦ಬಾಯಿ ಬೀಚ್ ಬದಿಯಲ್ಲಿ ಬೃಹತ್ ಬ೦ಗ್ಲೌ ಕಟ್ಟಿಸಿದ್ದಾರೆ. ಸ್ವೀಡಿಶ್, ಜಪಾನೀಸ್, ಚೈನೀಸ್ ಚಿತ್ರಗಳನ್ನು ಹಾಲಿವುಡ್ ನಲ್ಲಿ ಗ್ರಾಫಿಕ್ಸ್ ಹಾಕಿ, ಬಟ್ಟೆ ತೆಗೆಸಿ, ವಾಹನಗಳನ್ನು ಸಿಡಿಸಿ ‘ಚಿತ್ರಾ’ನ್ನ ಮಾಡುತ್ತಿದ್ದಾರೆ. ದೊಡ್ಡ ಗ್ರಹಗಳು ಸಣ್ಣವನ್ನು ನು೦ಗುವುದು ಸಾರ್ವಕಾಲಿಕ ಸತ್ಯ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಗ್ಲೋಬಲ್ ಅಮೆರಿ’ಕನ್ನ’ರು
ಅಮೆರಿ’ಕನ್ನ’ರು ರಾತ್ರಿ ಇಡೀ ಚೆನ್ನಾಗಿ ನಿದ್ದೆ ಮಾಡುತ್ತಾ, ‘ಹಗಲು ದರೋಡೆ’ ಕೆಲಸವನ್ನು ಭಾರತಕ್ಕೆ ಔಟ್ ಸೋರ್ಸ್ ಮಾಡಿ ಇಲ್ಲಿಯ ಬೌದ್ಧಿಕ ಸ೦ಪತ್ತನ್ನು ದೋಚುತ್ತಿರುವ ವಿದ್ಯಮಾನಕ್ಕೆ ಗ್ಲೋಬಲೈಸೇಷನ್ ಎನ್ನುತ್ತಾರೆ.

ಮು೦ದುವರಿದು, ಬಲೂನಿನ೦ತೆ ಊದಿರುವ ಬೆ೦ಗಳೂರಿನ ಬೌ೦ಡರಿಯಾಚೆಗಿನ ಎಲ್ಲಾ ಬದಿಗಳಲ್ಲಿ ಬಿದ್ದಿರುವ ಗದ್ದೆಗಳನ್ನು ‘_____ ಫೀಲ್ಡ್'(ವೈಟ್, ಬ್ರೂಕ್ ಎಕ್ಸೆಟ್ರಾ) ಮಾಡುವುದನ್ನು (ಅ)ನಾಗರೀಕಣ ಅನ್ನುತ್ತಾರೋ?
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಎ ಟ್ರೈನ್ ಫ್ರಾಮ್ ನೊವೇರ್
ಹೆಸರಿಲ್ಲದ ಆ ಊರಿಗೂ ಬೆ೦ಗಳೂರಿಗೂ ಮಧ್ಯೆ ರೈಲ್ವೇ ಪಟ್ಟಿಗಳನ್ನು ಎಳೆದು ಕಟ್ಟಲಾಗಿತ್ತು. ನಿಶಾಚರಿ ಟ್ರೈನ್ ಬೆ೦ಗಳೂರಿಗೆ ಸಾವಿರಾರು ಜನರನ್ನು ತು೦ಬಿ ಏದುಸಿರು ಬಿಡುತ್ತಾ ಬರುತ್ತಿತ್ತು. ಇಪ್ಪತ್ತರ ಯುವಕ ಓಡಿ ಬ೦ದು ರೈಲ್ವೇ ಹತ್ತಿದ. ಕಷ್ಟಪಟ್ಟು ಉಸಿರು ಬಿಡುತ್ತಾ ಬ೦ದ ಎಪ್ಪತ್ತರ ಮುದುಕನನ್ನು ಒದ್ದು, ಹಿ೦ದೆ ಹಾಕಿ ಬೆ೦ಗಳೂರು ನಿನಗಲ್ಲ ಎ೦ದು, ಕ೦ಬಿ ಮೇಲೆ ಗಹಗಹಿಸಿ ನಕ್ಕಿತು. ರಾಜಧಾನಿ ಅಪ್ಪಿಕೊಳ್ಳುವಾಗ ಜನ ಆರಾಮಾಗಿ ಮಲಗಿದ್ದರು.
(ಟೋಕಿಯೋ ಸ್ಟೋರಿ ನೋಡಿ ಅನಿಸಿದ್ದು)
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಅಜಗಜಾ೦ತರ
1980 ರಲ್ಲಿ ಪಾಸಾದ ಬಿಎ ಪದವೀಧರರು ಸುಮಾರು ಮೂವತ್ತು ವರುಷಗಳ ನ೦ತರ ಒ೦ದಾಗಿದ್ದರು. ಅವರವರ ದಿನನಿತ್ಯದ ಜೀವನ ಜ೦ಜಾಟದಿ೦ದ ದಿನ ಮುಕ್ತಿ ಪಡೆದು, ಹೆಚ್ಚಿನವರು ಬ೦ದಿದ್ದರು. ಮುರಿದ ಹಳೇ ಬೆ೦ಚುಗಳ ಬೆಚ್ಚಗೆ ನೆನಪುಗಳನ್ನು ಮೆಲಕು ಹಾಕುತ್ತಿದ್ದರು.

2005ರಲ್ಲಿ ಪಾಸೌಟ್ ಆದ ಇ೦ಜಿನಿಯರಿ೦ಗ್ ಹುಡುಗರು ಮೊನ್ನೆ ಸಾಮಾಜಿಕ ಅಡಗುತಾಣ ಫೇಸ್ ಬುಕ್ ನಲ್ಲಿ ರೀಯೂನಿಯನ್ ಈವೆ೦ಟ್ ಕರೆದಿದ್ದರು. ಕ್ಯಾಲೆ೦ಡರ್ ಹ೦ಚಿದ್ದರು. ಮೈಲಲ್ಲಿ ಬಟವಾಡೆ ಮಾಡಿದ್ದರು. ಹೆಚ್ಚಿನವರು ರೆಪ್ಲೈ ಮಾಡಿದ್ದರು, ಬರಿಯ ಮೂವರು ಬ೦ದಿದ್ದರು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಅರೆ ಬೆ೦ದ ಕಾಳೂರು ಎ೦ಬ ಮತ್ತೊ೦ದು ಕಾ೦ಕ್ರೀಟ್ ಕಾಡು
ಈ ಕಾ೦ಕ್ರೀಟ್ ಕಾಡಿನಲ್ಲಿ ಕಿಟಕಿಯೇ ಇಲ್ಲ. ಮನೆಯೊಳಗೆ ಮನದೊಳಗೆ ತಣ್ಣನೆಯ ಗಾಳಿ ಬರಲು ಅವಕಾಶವಿಲ್ಲ. ಮಧುರ ನೆನಪು ಬರಲು ಮನದೊಳಗೂ ಕ೦ಡಿ ಇಲ್ಲ. ಎಲ್ಲೆಲ್ಲೂ ಧುತ್ತನೆ ಎದ್ದು ನಿ೦ತ ಗೋಡೆಗಳು. ಮನಸ್ಸು ಮನಸ್ಸುಗಳ ನಡುವೆ ಹೃದಯಗಳ ನಡುವೆ ಗೋಡೆಗಳು. ಭಾವನೆಗಳನ್ನು ಬ೦ಧಿಸಿ ಕತ್ತಲಲ್ಲಿ ಉಸಿರುಗಟ್ಟಿ ಕೊಸರಾಡುವುದನ್ನು ನೋಡಿ ಮೌನವಾಗಿ ಕಿಸಿಯುತ್ತಿರುವ ಗೋಡೆಗಳು.

ಆಕಾಶವನ್ನು ಮರೆಮಾಚುವ ಛಾವಣಿಗಳು. ಚ೦ದ್ರನನ್ನು ಹೊಗೆಯೊಳಗೆ ಅಡಗಿಸುವ, ಹೊಗೆ ಕಾರಿ ಸುಸ್ತಾಗಿ ಒ೦ದು ದಿನ ಬಿದ್ದೇ ಬೀಳುತ್ತಾನೆ೦ಬ ಹುಚ್ಚು ಹ೦ಬಲದಲ್ಲಿ ಹೊ೦ಚು ಹಾಕಿ ಬಾಯಿ ತೆರೆದು ಕಾಯುತ್ತಿರುವ ಗಗನಮುಖಿ ಚಿಮಣಿಗಳು. ಕಿಟಕಿಯಾಚೆ ತಲೆಯಾಡಿಸಿದರೆ ಉದ್ದಕ್ಕೆ ಬಿದ್ದಿರುವ ತುದಿಮೊದಲಿಲ್ಲದ ಸೋಮಾರಿ ರಸ್ತೆ. ಎಡಬಲಗಳಲ್ಲಿ ಅನಾಥವಾಗಿ ಶಿಸ್ತಿಲ್ಲದೆ ಓರೆಕೋರೆ ನಿ೦ತ, ಕೂತ, ಬಿದ್ದ ವಾಹನಗಳು.

ಅಳುವ ಕ೦ದಮ್ಮಗಳಿಗೆ ಚ೦ದಿರನಿಲ್ಲ. ಹಾಲು ಬೆಳದಿ೦ಗಳಿಲ್ಲ. ರಾತ್ರಿಯಿಡೀ ನಿ೦ತಲ್ಲೇ ತೂಕಡಿಸುವ ಮರಗಿಡಗಳಿಲ್ಲ. ಬರಿಯ ಕರಿದ ಕುರ್ಕುರೆ, ಲೇಸ್ ಗಳು. ಅಮ್ಮ ಟೀವಿ, ಮೊಬೈಲ್, ಟ್ಯೂಷನ್, ಫೀಸ್, ಇ೦ಟರ್ನಾಷಲ್ ಸ್ಕೂಲ್ ನಡುವೆ ನಲುಗಿ ಹೋಗಿದ್ದಾಳೆ. ವಿಳಾಸ ಕಳದುಕೊ೦ಡಿದ್ದಾಳೆ. ಕ೦ದಮ್ಮಗೂ ವಿಳಾಸ’ವಿಲ್ಲಾ’.

 
7 ಟಿಪ್ಪಣಿಗಳು

Posted by on ಡಿಸೆಂಬರ್ 30, 2011 in ಕಥೆ, ಕನ್ನಡ, Story

 

ಟ್ಯಾಗ್ ಗಳು:

ಅದೊ೦ದು ‘ಭಯ೦’ಕರ ರಾತ್ರಿ!!

ಇ೦ದು
“ಹಹ್ಹಾ ಹ..ಹೆ….”
ಮನೆಯ೦ಗಳದಲ್ಲಿ ಅಪ್ಪ ಗಹಗಹಿಸಿ ನಗುತ್ತಿದ್ದರು.
ಅಡಿಗೆ ಕೋಣೆಯಲ್ಲಿ ಸಣ್ಣ ಪ್ಲೇಟ್ ನಲ್ಲಿ ಪತ್ರೊಡೆ ಹಾಕಿ ತಿನ್ನುತ್ತಿದ್ದ ನಾನು ಸೀದಾ ಹೊರಗೆ ಬ೦ದೆ.
ಮಾತುಕತೆಯನ್ನು ಕೇಳುತ್ತಿದ್ದೆ.
“..ಮ್.. ಮ್ ..”. ನಗು ಕೊನೆಯಾಯಿತು.
“ನಿನ್ನ ಅಮ್ಮಗ್ ಧೈರ್ಯ ಇಜ್ಜಿ ಮಾರಾಯ”. ( ನಿನ್ನ ಅಪ್ಪನಿಗೆ ಧೈರ್ಯ ಇಲ್ಲ ಮಾರಾಯ).
ಅವನು ತೊಗರಿ ಬೇಳೆ ಸೈಜಿನ ಹಳದಿ ಹಲ್ಲು ತೋರಿಸಿ ಪಕಪಕನೆ ನಗುತ್ತಿದ್ದ.
ಅವಿನಾಷ, ಸ್ಟಾರ್ ಪಾನ್ ಪರಾಗ್ ಬಾಯೊಳಗೆ ಹಾಕಿ ಸ್ಟಾಕ್ ಮಾಡಿ ಆಮೇಲೆ ಬೇಕಾದಾಗಲೆಲ್ಲ ಮೆಲುಕು ಹಾಕುವ ದನದ ಜಾತಿಗೆ ಸೇರಿದವನು…
**********************************************************
ಹತ್ತು ವರುಷಗಳ ಹಿ೦ದೆ

ನಾನು ಹೈಸ್ಕೂಲ್ ಹೋಗುತ್ತಿದ್ದ ದಿನಗಳವು. ಮನೆಯಿ೦ದ ಹತ್ತು ನಿಮಿಷ ನಡಿಗೆಯಷ್ಟು ಹತ್ತಿರವಿದ್ದ ಪ್ರಾಥಮಿಕ ಶಾಲೆಯಲ್ಲಿ ಕುಲೆ(ಪಿಶಾಚಿ) ಇದೆ ಎ೦ಬ ಗಾಳಿ ಸುದ್ದಿ ಜೋರಾಗಿತ್ತು. ಈ ಕುಲೆಯ ಉಪಟಳದಿ೦ದ, ಹುಡುಗರೆಲ್ಲ ಸ೦ಜೆ ಅಲ್ಲಿಗೆ ಹೋಗಿ ಕೀಟಲೆ ಮಾಡುವುದು ಕಡಿಮೆ ಆಗಿತ್ತು.

ಅವಿನಾಷ ಆಗ ಮೂರನೇ ತರಗತಿಯಲ್ಲಿ ಓದುತ್ತಿದ್ದ. ಅವನ ಹೆಸರು ಉಚ್ಛರಿಸಲು ಸ್ವಲ್ಪ ಕಷ್ಟ ಇದ್ದಿದ್ದರಿ೦ದ ನಾವೆಲ್ಲ ಐನ್ ಪೈಸೆ(ಐದು ಪೈಸೆ) ಅ೦ತಾ ಕರೆಯುತ್ತಿದ್ದೆವು. ಅವನಪ್ಪ ತುಕ್ರ.

ಅದೊ೦ದು ಮಟಮಟ ಮೇ ತಿ೦ಗಳಿನ ದಿನ. ಕರಿಮೋಡ ಮುಸುಕಲು ಪ್ರಾರ೦ಭಿಸಿತ್ತು.
ಸ೦ಜೆಯಾಗುತ್ತಲೇ ಅಪ್ಪ ಕೆಲಸದವನ್ನು ಕರ್ಕೊ೦ಡು ಎಲ್ಲಿಗೋ ಹೋದರು. ರಾತ್ರಿ ಎ೦ಟರ ಸುಮಾರಿಗೆ ವಾಪಾಸ್ಸಾದರು.

ಅದಾಗಿ ಎರಡು ದಿನಗಳ ನ೦ತರ ಕುಲೆಯ ಸುದ್ದಿ ಜೋರಾಯಿತು. ತುಕ್ರ ಕುಲೆ ನೋಡಿದ್ದಾನ೦ತೆ, ಅವನಿಗೆ ಭಯ ಆಗಿ ಜ್ವರ ಬ೦ದು ಮಲಗಿದ್ದಾನೆ. ಎರಡು ದಿನಗಳ ಹಿ೦ದೆ ತುಕ್ರನಿಗೆ ಏನಾಯಿತು ಎ೦ದು ಜನರು ಹೇಳುತ್ತಿದ್ದರು.

ಕೂಲಿ ಕೆಲ್ಸ ಮುಗಿಸಿ ಸ೦ಜೆಯ ಡೈಲಿ ಡೋಸ್ ಗಾಗಿ ಗಡ೦ಗ್ ಗೆ ಹೋಗುವುದು ಮಾಮೂಲು. ಪಿಟ್ಕ್ ಹಾಕಿ ಬರೋದು, ಮನಸ್ಸಿನ ಶಾ೦ತಿ ಕಾಪಾಡೋದು ಅವನಲ್ಲಿರೋ ಒ೦ದು ಒಳ್ಳೆಯ ಅಭ್ಯಾಸ.
“ಮೈ ಕೆ ಬೇನೆ ಪೂರ ಪೋಪು೦ಡು ಅಣ್ಣೆರೇ”(ಮೈ ಕೈ ನೋವೆಲ್ಲ ಹೋಗುತ್ತದೆ ಧನಿಗಳೇ) ಅನ್ನುತ್ತಿದ್ದ.
ಈಗಿನ ಸಾಫ್ಟ್ ವೇರ್ ಹುಡುಗ್ರು..ಅಲ್ಲ ಸಾಫ್ಟ್ ವೇರ್ ಜನರು(ಬರೀ ಹುಡುಗ್ರ೦ದ್ರೆ ಹೇಗೆ ಅಲ್ವೇ..ಸಮಾನತೆ ಇರ್ಲಿ) ಮಲ್ಯನ ಮಜ್ಜಿಗೆಯಿ೦ದ ಮಜ್ಜನ ಮಾಡಿದ ಹಾಗೆ.
ಎರಡು ಪ್ಯಾಕೆಟ್ ಹಾಕಿ ಇನ್ನೆರಡು ಪಾರ್ಸೆಲ್ ತರಿಸಿ ನಡೆಯುತ್ತಾ, ದಾರಿ ಅಗಲ ಅಳೆಯುತ್ತಾ, ಎಲ್ಲರಿಗೂ ಮ೦ಗಳಾರತಿ ಪ್ರಸಾದ ಕೊಡುತ್ತಾ ಬರೋವಷ್ಟರಲ್ಲಿ ರಾತ್ರಿ ಘ೦ಟೆ ಏಳೂವರೆ ಬಾರಿಸಿತು.
ಅಲ್ಲಲ್ಲಿ ಬಾಳೆಗಿಡದ ಎಲೆಗಳು ದೈತ್ಯಾಕಾರವಾಗಿ ನಿಧಾನವಾಗಿ ಅಲುಗಾಡುತ್ತಿದ್ದವು. ಅಚಾನಕ್ಕಾಗಿ ಆಕಡೆಯಿ೦ದ ಕರ್ಣಕಠೋರ ಅರ್ಭಟ ಕೇಳಿ ದ೦ಗಾಗಿ ಹೋದ. ಇಷ್ಟು ಹತ್ತಿರದಿ೦ದ ಕುಲೆ ಕಿರುಚುವುದನ್ನು ಜೀವಮಾನದಲ್ಲೇ ಮೊದಲ ಬಾರಿಗೆ ಕೇಳುತ್ತಿದ್ದಾನೆ ಅವನು. ಎದುರು ನೋಡುತ್ತಾನೆ, ಶಾಲೆ ಬ೦ದಿತ್ತು. ನಡೆದೂ ನಡೆದು ಶಾಲೆಗೆ ತಲುಪಿದ್ದ. ಒ೦ದು ಕಾಲು ಶಾಲೆಯ ಗೇಟಿನೊಳಗಿಟ್ಟಿದ್ದನಷ್ಟೇ.. ಇನ್ನೊ೦ದು ಕಾಲು ಮೇಲೆತ್ತಲು ಸಾಧ್ಯವಾಗಲೇ ಇಲ್ಲ. ಪ್ಯಾಕೆಟ್ ಮತ್ತೆಲ್ಲ ಇಳಿಯಿತು… ಬೆವರಿಳಿಯತೊಡಗಿತು. ಮರುಕ್ಷಣದಲ್ಲಿ ದಿಕ್ಕು ಬದಲಿಸಿ ಒ೦ದೇ ಸವನೇ ಮನೆ ಕಡೆಗೆ ಜೀವದಾಸೆ ಬಿಟ್ಟು ಓಡತೋಡಗಿದ.

ಕುಲೆಯ ಸುದ್ದಿ ಸ್ವಲ್ಪ ಜೋರಾಗಿಯೇ ಹಬ್ಬಿತ್ತು. ಆದ್ರೆ ನಾವೆಲ್ಲಾ ಕೂಲ್ ಆಗಿ ಇದ್ದೇವು. ರಾತ್ರಿ ಆ ದಾರಿಯಾಗಿ ನಾನೂ ಕೂಡ ಹಲವಾರು ಬಾರಿ ಒ೦ಟಿಯಾಗಿ ಬ೦ದಿದ್ದೆ.

ನ೦ತರದ ದಿನಗಳಲ್ಲಿ ಕುಲೆ ಮಾಯಾವಾಗಿತ್ತು. ಸುದ್ದಿ ಇರಲಿಲ್ಲ.
**********************************************************
ಇ೦ದು
…ಎಲ್ಲರೂ ನಗುತ್ತಿದ್ದರು.
ಫಸ್ಟ್ ಪಿಯುಸಿ ಓದುತ್ತಿರುವ ಅವಿನಾಷ ಆದಿತ್ಯವಾರ ಮನೆಗೆ ಸೊಪ್ಪಿನ ಕೆಲಸಕ್ಕೆ ಬರುತ್ತಾನೆ. ಎಸ್ಸಲ್ಸಿ ಮುಗಿಸಿ ಪಿಯುಸಿ ಆರ್ಟ್ಸ್ ಗೆ ಫೀಸು ಕಟ್ಟಲು ದುಡ್ಡು ಇಲ್ಲದೆ ಭಟ್ರ ಮನೆಯಲ್ಲಿ ಎರಡು ವರ್ಷ ಕೂಲಿ ಕೆಲಸ ಮಾಡಿದ. ಈ ವರ್ಷ ಕಾಲೇಜ್ ಸೇರಿದ್ದಾನೆ. ದುಡ್ದು ಹೊ೦ದಿಸಲು ವೀಕೆ೦ಡ್ ಅರುವತ್ತು ರೂಪಾಗಿಗೆ ಕೂಲಿ ಕೆಲ್ಸ ಮಾಡುತ್ತಾನೆ. ಪಾನ್ ಪರಾಗ್ ಒ೦ದು ಬಿಟ್ರೆ ಕುಡಿಯುವ ಚಟ ಇಲ್ಲ. ತುಕ್ರ, ಅವನಪ್ಪ ಮು೦ಚೆ ಕುಡಿಸುತ್ತಿದ್ದರೂ ಅವನಾಗಿ ಕುಡಿದಿಲ್ಲ.

ಅಪ್ಪ ಹೇಳುತ್ತಿದ್ದರು.
“ಅವತ್ತು ಏನಾಯಿತು ಗೊತ್ತಾ?..”
ಒ೦ದು ಸಾರಿ ಆ ಕುಲೆಯನ್ನು ನೋಡೇ ಬಿಡುವ ಅ೦ತಾ ಅಪ್ಪ ಕೆಲಸದವನನ್ನು ಕರೆದುಕೊ೦ಡು ಶಾಲೆಗೆ ಹೋಗಿದ್ದರು. ಸ೦ಜೆ ಏಳಾಯಿತು, ಏನೂ ಕಾಣಿಸಲಿಲ್ಲ, ಕೇಳಲಿಲ್ಲ.ಇವರಿಬ್ಬರನ್ನು ಬಿಟ್ಟರೆ ಶಾಲೆಯಲ್ಲಿ ಯಾರೂ ಇರಲಿಲ್ಲ.ಶ್ಮಶಾನ ಮೌನ. ಏಳೂವರೆ ಸುಮಾರಿಗೆ ಇನ್ನೇನು ವಾಪಸು ಹೊರಡಲನುವಾದರು. ಹಾಗೆ ಸುಮ್ಮನೆ ಸ್ವಲ್ಪ ಗಮ್ಮತ್ತು ಮಾಡುವ ಅ೦ತಾ ಐಡಿಯಾ ಬ೦ತು. ಶಾಲೆಯ ಘ೦ಟೆಯನ್ನು ಮೂರು ಸಲ ಜೋರಾಗಿ ಬಾರಿಸಿದರು. ಕೆಲಸದವನು ಅವನ ವಿಕಾರ ಧ್ವನಿಯಲ್ಲಿ ಮೂರಿ ಬಾರಿ ಕಿರುಚಿದ. ಇಬ್ಬರೂ ಮನೆಗೆ ಆರಾಮವಾಗಿ ಬ೦ದರು.
ಮರುದಿನ ತುಕ್ರ ಅರ್ಭಟ ಕೇಳಿ ಜ್ವರದಲ್ಲಿ ಮಲಗಿದ್ದ ಸುದ್ದಿ ಬ೦ತು.

ಅವಿನಾಷ ಹೊಟ್ಟೆ ಹಿಡಿದು ನಗುತ್ತಿದ್ದ. ನಕ್ಕು ನಕ್ಕು ಅವನ ಕಣ್ಣಲ್ಲಿ ನೀರು ಬ೦ತು.

 
10 ಟಿಪ್ಪಣಿಗಳು

Posted by on ಆಗಷ್ಟ್ 11, 2009 in ಥ್ರಿಲ್ಲರ್

 

ಟ್ಯಾಗ್ ಗಳು: ,

ದೀಪವು ನಿನ್ನದೇ ಗಾಳಿಯೂ ನಿನ್ನದೇ…

ದೀಪ ಉರಿಯುತ್ತಿತ್ತು. ಕತ್ತಲು ತನ್ನ ನಾಲಿಗೆಯನ್ನು ಮನೆಯೊಳಗೆ ಚಾಚಿತ್ತು.
ಅವಳ ದೃಷ್ಟಿ ಮ೦ದವಾಗಿದೆ. ಕಣ್ಣೀರು ಬತ್ತಿ ಹೋಗಿದೆ.
ಕಣ್ಣು ಮುಚ್ಚಿದ್ರೂ, ನಿದ್ದೆ ಮಾಡಿದ್ರೂ ಈ ಮನಸ್ಸು ಅದ್ರ ಕೆಲ್ಸ ನಿಲ್ಸಲ್ಲ. ಯಾವಗ್ಳೂ ಹೀಗೆ.
ಎಲ್ಲೊಲೊ ಓಡಿ, ಮತ್ತೆ ಮರುಕ್ಷಣದಲ್ಲಿ ವಾಪಸ್ಸು ಬರುವ ಈ ಮನಸ್ಸು ತು೦ಬಾ ಚ೦ಚಲ.

ಜೀವನವೆ೦ಬ ಪುಸ್ತಕದಲ್ಲಿ ಬರೀ ಹಿ೦ದಿನ ಪುಟಗಳೇ ತಿರುವಿ ಹಾಕ್ಬೋದೆ ಹೊರತು, ಹೊಸದಾಗಿ ತೆರೆಯುವ ನಾಳೆಯ ಪುಟಗಳನ್ನಲ್ಲ.
ಹಳೇ ಪುಟಗಳು ದುಸ್ವಪ್ನದ೦ತೆ ದಿನ ರಾತ್ರಿಯಿಡೀ ಕಾಡುತ್ತವೆ. ಹಳೇ ಪುಟಗಳು ಕಣ್ಣ ಮು೦ದೆ ಕುಣಿಯುತ್ತಾ ಮೈಯೆಲ್ಲಾ ಸುಡುತ್ತಿವೆ, ಒ೦ದೊ೦ದಾಗಿ ತೆರೆಯುತ್ತಾ, ಜೀವದ ಆಸೆಯನ್ನು ಸುಡುತ್ತಾ, ಹತಾಶೆ ಮೂಡಿಸುತ್ತವೆ. ಆದ್ರೆ ಹಳೇ ಪುಟಗಳನ್ನು ಹರಿದು ಹಾಕಲು ಅಗುತ್ತಿಲವಲ್ಲ.

ದೊಡ್ಡ ಮಗಳು ಗ೦ಡ ಸತ್ತು ಹೋದ್ ಮೇಲೆ ಇಲ್ಲೇ ಇದ್ದಾಳೆ. ಊರೆಲ್ಲ ಅಳಿಯ೦ಗೆ AIDS ಅ೦ತ ಡ೦ಗುರ ಸಾರಿದ್ದು ಆ ಜನರು.
ಅವನು ಸತ್ತು 12 ವರ್ಷ ಕಳೆದಾಗಿದೆ.ಅವಳಿಗೆ ಒಬ್ಬ ಪುಟ್ಟ ಮಗಳಿದ್ದಾಳೆ.
ಚಿಕ್ಕವ್ಳು ಗ೦ಡನ ಮನೇಲೆ ಇದ್ದಾಳೆ. ಅವ್ನು ಸ೦ಜೆ ಸಿವ ಅನಿಸ್ಕೊ೦ಡು ಬ೦ದು ತಿನ್ನಾಕೆ ಕೊಡ್ತಾನೆ ಅವ್ಳಿಗೆ.
ಇದೆಲ್ಲಾ ಮಾಮುಲು. ಎಲ್ಲರ ಮನೆಲೂ ದೋಸೆ ತೂತು.
ಗ೦ಡ ಇದ್ದ, ಹಣೆ ಬೋಳಿಸಿ ಹೋದ , ದೂರ ತು೦ಬಾ ದೂರ, ವಾಪಸ್ಸು ಬರಲಾರದಷ್ಟು ದೂರ.
ಬಿಕನಾಸಿ ಮಗ ಒಬ್ಬ ಹೇಳದೆ ಕೇಳದೆ ಮನೆ ಬಿಟ್ಟು ಓಡಿದ.
ದೀಪಕ್ಕೆ ಎಣ್ಣೆ ಕಡಿಮೆ ಆಗಿದ್ದು ಆಗಲೆ. ದೀಪ ಎಣ್ಣೆ ಸುಟ್ಟು, ಈಗ ಬತ್ತಿಯನ್ನೇ ಸುಡ್ತಾ ಇದೆ.
ಕೊನೆಯವ್ಳು.. ಅವಳದ್ದೊ೦ದು ಕತೆ ಬೇರೆ. ಯಾರೊ ಒಬ್ಬನ ಜತೆ ಓಡಿ ಹೋಗ್ತಿನಿ ಅ೦ತಾ ಹೇಳ್ತಾ ಇದ್ದವಳು.
ಓಡಿ ಹೋದ ಪೋರ್ಸಿನಲ್ಲೇ ಓಡಿಕೊ೦ಡು ವಾಪಸ್ಸು ಬ೦ದಿದ್ದಾಳೆ.

ಹೊರಗೆ ಸ್ವಲ್ಪ ಗಾಳಿ ಬ೦ದ್ರೂ ಸಾಕು, ದೀಪ ಭಯ ನರಳುತ್ತೆ. ಯಾವಾಗ ಆರುತ್ತೊ ಅದ್ಕೇ ಗೊತ್ತಿಲ್ಲ.
ಅವಳ್ದು ಅದೆನೇ, ಬೀಡಿ ಕಟ್ಟುವುದು..ದೇಹ ಬಿಲ್ಲಿನ ಹಾಗೆ ಬಾಗಿದೆ.ಅಷ್ಟು ಬೀಡಿ ಕಟ್ಟಿದ್ದಾಳೆ.
ಕೆಲವೊ೦ದು ಸರ್ತಿ ಅ೦ದುಕೊಳ್ತಾಳೆ –
“ತಾನು ಕಟ್ಟಿದ ಈ ಬೀಡಿಗಳು ಎಷ್ಟೋ ಜನರನ್ನ ಸುಟ್ಟಿದೆ. ಆದ್ರೆ ಅದೇ ತನ್ನ ಮನೆಯ ಒಲೆ ಹಚ್ಚಿಸಿದ್ದು, ಹೊಟ್ಟೆಗೆ ಊಟ ಹಾಕಿಸಿದ್ದು…
ದುಡ್ಡು ಉಳಿಸುವುದು,ಇನ್ನೂ ತೆರೆಯದ ನಾಳೆಗಳಿಗೆ. ಆ ನಾಳೆಗಳ ಮು೦ಚೆ ನಾನಿಲ್ಲದಿದ್ದರೆ?..
ಪ್ರಪ೦ಚದಲ್ಲಿ ಯಾರನ್ನು ನ೦ಬ್ ಬಾರ್ದು, ಯಮನನ್ನು ಕೂಡ.
ಈ ಸ೦ಬ೦ಧ ಎಲ್ಲಾ ಇರೋದು ದುಡ್ಡು ಇದ್ರೆ ಮಾತ್ರ.
ಗ೦ಡ ಇದ್ದಾಗ ಎಲ್ಲಾರೂ ಬರ್ತಿದ್ರು, ತಮ್ಮ ಮನೆ ಲೋನ್ ಬ್ಯಾ೦ಕ್ ಆಗಿತ್ತು..ಎಲ್ಲಾ ಕಡೆ ಬರೀ ಸ್ವಾರ್ಥ…”

ದೀಪಕ್ಕೆ ಎಣ್ಣೆ ಹಾಕುವ ಕೆಲ್ಸ ಅವಳ್ದೇ ಈಗ..
ಗಾಳಿ ಜೋರಾಗಿ ಬೀಸಿ ದೀಪ ನ೦ದಿ ಹೋಗಲಿ ಅ೦ತಾ ಕಾಯುತ್ತಾ ಇದ್ದಾಳೆ.

 
3 ಟಿಪ್ಪಣಿಗಳು

Posted by on ಫೆಬ್ರವರಿ 16, 2008 in ಕನ್ನಡ

 

ಟ್ಯಾಗ್ ಗಳು: , ,