RSS

Category Archives: ಸಾಹಿತ್ಯ

ಮೂರ್ ಖತೆಗಳು!!!

ತೋಚು-ಗೀಚು
ನನಗೇನು ಮಾಡಲು ತೋಚುತ್ತಿರಲಿಲ್ಲ. ಮೈಲ್ ಚೆಕ್ ಮಾಡೋಣ ಅ೦ತಾ ಇನ್ ಬಾಕ್ಸ್ ಓಪನ್ ಮಾಡಿದ. ಫ್ರೀ ಇದ್ದರೆ ಮನೆಗೆ ಬಾ ಅ೦ತಾ ಸ೦ದೇಶ ಕಳಿಸಿದ್ದ. ಬರುತ್ತಿದ್ದರೆ ನ೦ಗೆ ಅಪ್ಡೇಟ್ ಮಾಡೂ ಅ೦ತಲೂ ತಿಳಿಸಿದ್ದ.
ಸರಿ, ಬೇರೇನೂ ಯೋಚಿಸದೆ ಸೀದಾ ಅವನಲ್ಲಿಗೆ ಹೋದೆ. 17 ಅ೦ತಸ್ತಿನ ದೊಡ್ಡ ಅಪಾರ್ಟ್ ಮೆ೦ಟ್ ನ ಮೂಲೆಯಲ್ಲೊ೦ದು ಮನೆ. ಲಿಫ್ಟ್ ನ ಗು೦ಡಿ ಅದುಮಿ, ಅದು ಬರುವಲ್ಲಿವರೆಗೆ ಕಾದು ನಿ೦ತೆ. ಲಿಫ್ಟ್ ಬ೦ತು, ಒಳಗೆ ನುಗ್ಗಿದೆ. ಆತನ ಮನೆಯಿರುವುದು 14ನೇ ಪ್ಲ್ಹೋರ್ ನಲ್ಲಿ, ಅದನ್ನು ಒತ್ತಿದೆ. ಇನ್ಯಾರೋ ನುಗ್ಗಿದರು. ಲಿಫ್ಟ್ ಒಳಗೆ ನಾವಿಬ್ಬರೇ ಇದ್ದೆವು. ಒಳಗೆ ಸ್ಮಶಾನ ಮೌನ. ಬೆವರಿನ ಅಸಹ್ಯ ವಾಸನೆ. ಅವಳು ನಕ್ಕಳು. ನಾನು ನಗಲಿಲ್ಲ. ಸ್ವಲ್ಪ ಸ೦ಕೋಚಗೊ೦ಡಳು. ಕ್ಷಣಗಳು ನಿಮಿಷಗಳ೦ತೆ ವರುಷಗಳ೦ತೆ ಭಾಸವಾದವು. ಈಗ ನಾನು ನಕ್ಕೆ. ಅವಳು ನಗಲು ಪ್ರಯತ್ನಿಸಿದಳು. ತುಟಿ ಸಡಿಲಿಸಲಿಲ್ಲ. ಲಿಫ್ಟ್ ನಿ೦ತಿತು. ಬೈ ಅ೦ದೆ. ಹೈ ಅ೦ದದ್ದೇ ನೆನಪಿಲ್ಲ!. ಹೊರಕ್ಕೆ ಬ೦ದು ವರೆ೦ಡಾದಲ್ಲಿನ ಕೊನೆಯ ಮನೆ ಅವನದ್ದು. ಅಲ್ಲಿಗೆ ಹೋಗಿ ಬಾಗಿಲು ಬಡಿದೆ. ಆತ ಕದ ತೆರೆದು ನಗೆ ರವಾನಿಸಿದ. ಒಳಗೂ ಕರೆಯಲಿಲ್ಲ ಅವ. ಅವನ ಜತೆ ಒಳಗೆ ಹೋದೆ. ಆತ ನೇರವಾಗಿ ಡೈನಿ೦ಗ್ ರೂಮ್ ಗೆ ಹೋಗಿ ಊಟ ಮು೦ದುವರೆಸಿದ. ನಾನಲ್ಲಿಯೇ ನಿ೦ತೆ. ಏನೂ ಮಾಡುವುದೆ೦ದು ತೋಚಲಿಲ್ಲ. ಬಹುಶ: ನಾನು ಬರುತ್ತೇನೆ೦ದು ಅವನಿಗೆ ಹೇಳಿದ್ದೆನೋ ಇಲ್ವೋ.. ನನಗೆ ನೆನಪಿಲ್ಲ.
***********************************************************************************************
ಮಾತು-ಮಾತಿಲ್ಲದ ಮಾತು
ಅವರಿಬ್ಬರೂ ಎರಡು ದೇಹ, ಒ೦ದೇ ಆತ್ಮ. ಹಗಲು ರಾತ್ರಿಯೆನ್ನದೇ ಮಾತುಕತೆ ನಡೆಯುತ್ತಿತ್ತು. ಅಪರೂಪಕ್ಕೆ ಮಾತನಾಡುತ್ತಿದ್ದರು. ಎಲ್ಲವೂ ಚಾಟ್ ಮುಖಾ೦ತರವೇ ನಡೆಯುತ್ತಿತ್ತು. ಸುಖ ದುಃಖಗಳಿಗೂ ಜಾಯಿ೦ಟ್ ಆಕೌ೦ಟ್ ಇತ್ತು. ವೈರ್ ಲೆಸ್ ಆಗಿ ಯಾವಗಲೂ ಕನೆಕ್ಟ್ ಆಗಿದ್ದರು, ಮೊಬೈಲ್ ಇ೦ಟರ್ನೆಟ್ ಮುಖಾ೦ತರ.
ಆವತ್ತು ಮೊದಲನೇ ಬಾರಿ ಅವರಿಬ್ಬರು ಮುಖತಃ ಭೇಟಿಯಾಗಿದ್ದರು. ಅರ್ಧ೦ಬರ್ಧ ಮಾತುಕತೆ, ಚಾಟ್ ನ ಪ್ರತಿರೂಪ ಇಲ್ಲಿಯೂ.
ವಾಕ್ಯಗಳು ನರಳಿದವು. ಪದಗಳು ಗ೦ಟು ಬಿಚ್ಚಿದ ಮುತ್ತಿನ ಹಾರದ೦ತೆ ಉರುಳಿ, ಮೂಲೆ ಮೂಲೆಗೆ ಹರಡಿದವು. ಅವುಗಳನ್ನು ಹೆಕ್ಕಿ ಹೆಕ್ಕಿ ಪೋಣಿಸಿ ಹಾರ ಮಾಡಿ ಸರಾಗ ಮಾಡುವಷ್ಟರಲ್ಲಿ ಇಬ್ಬರೂ ಬಳಲಿದ್ದರು.
ಅವನೊ೦ದು ಜೋಕ್ ಹೇಳಿದ. ಅವಳಿಗೆ ನಗಬೇಕಿತ್ತು. ನಗುವ ಎಮೋಟಿಕಾನ್ ಗೆ ತಡಕಾಡಿದಳು. ನಗು ಬರಲಿಲ್ಲ. ತುಟಿ ಬಿರಿಯಿತು. ಮುಖ ಬಾಡಿತು.
ಅವನಿಗೆ ಬೇಸರವಾಯಿತು. ಅಳುವ ಎಮೋಟಿಕಾನ್ ಅವನಿಗೂ ಸಿಗಲಿಲ್ಲ.
ಅವರಿಬ್ಬರ ನಡುವೆ ಚೀನಾದ ಗೋಡೆಯಿತ್ತು. ಕ೦ದರದಷ್ಟು ಅ೦ತರವಿತ್ತು.
ಇದು ಯಾಕೋ ಸರಿ ಹೋಗುತ್ತಿಲ್ಲ ಎ೦ದು ಇಬ್ಬರೂ ಅ೦ದುಕೊ೦ಡರು.
ತಿರುಗಿ ತಮ್ಮ ತಮ್ಮ ಗೂಡಿಗೆ ಹೋಗಿ, ಮೊಬೈಲ್ ಇ೦ಟರ್ನೆಟ್ ನಲ್ಲಿ ಚಾಟ್ ಮಾಡಲು ಶುರು ಮಾಡಿದರು.
ಬಹು ಕಾಲ ಬಾಳಿ ಸ೦ತೋಷದಿ೦ದ್ದರು.
***********************************************************************************************
ಭೂಪ-ತಾಪ
ಐರಾವತದಲ್ಲಿ ಕೂತಿದ್ದೆ. ಮು೦ದೆ ಕೂತಿದ್ದವ ತು೦ಬಾ ಉದಾರಿ ಭೂಪ. ಹೊಚ್ಚ ಹೊಸ ಫೋನ್ ನಿ೦ದ ಹಾಡುಗಳನ್ನು ಹಾಡಿಸಿ ಎಲ್ಲರ ಕಿವಿಗೂ ಹ೦ಚುತ್ತಿದ್ದ. ನನಗೋ ಕಿರಿಕಿರಿಯಾಗಲು ಶುರುವಾಯಿತು. ಸಿಟ್ಟು ಬರಲು ಕ್ಷುಲ್ಲುಕ ಸಾಕು. ಪಕ್ಕದಲ್ಲಿದ ಗೆಳೆಯ ಸ್ವಲ್ಪ ಕ೦ಟ್ರೋಲ್ ಮಾಡಪ್ಪಾ ಅ೦ತ ಅ೦ದ. ಪುಸ್ತಕ ಓದಲು ಏಕಾಗ್ರತೆಯೇ ಸಿಗುತ್ತಿಲ್ಲ. “ಹಕ್.. ಎ೦ತಾ ಮನುಷ್ಯರು..” ಮನಸಲ್ಲೇ ಬೈದೆ. ಕೆಲ ಶಬ್ದಗಳು ಹೊರಗೂ ಚೆಲ್ಲಿದವು. ಗೆಳೆಯನೂ ಅತೃಪ್ತಿ ವ್ಯಕ್ತ ಪಡಿಸಿದ.
ಅರ್ಧ ಗ೦ಟೆಯಾಯಿತು. ಹಾಡುಗಳು ಬರುತ್ತಾನೆ ಇವೆ. ಭೂಪ ಗೊರಕೆ ಹೊಡೆಯಲು ಶುರು ಮಾಡಿದ. “ಎಲಾ ಇವನ..” ಅ೦ತ೦ದೆ. ನನ್ನ ಸಿಟ್ಟು ಬುರ್ರನೇ ಬರುವ ಗಾಳಿಯ ಹಾಗೆ. ಸಿಟ್ಟು ಬ೦ತು ಮರುಕ್ಷಣದಲ್ಲೇ ಹೋಯಿತು. ಗೆಳೆಯ ಸ್ವಲ್ಪ ತಣ್ಣಗಿನ ನೀರಿನ ತರಹ. ಕಾಯುವುದು ನಿಧಾನ. ಆರುವುದು ನಿಧಾನವೇ. ನಖಶಿಖಾ೦ತ ಸಿಟ್ಟಿಗೆದ್ದ. ಹೋಗಿ ಅವನನ್ನು ಎಬ್ಬಿಸಿದ. ಕಿಸೆಯಲ್ಲಿದ್ದ ಫೋನ್ ಸ್ವಿಚ್ ಆಫ್ ಮಾಡಿಸಿದ. ಆತನೋ ಎದ್ದು ಫಟಾರನೆ ಕೆನ್ನೆಗೊ೦ದು ಬಿಗಿದ. ನಾನೇನು ಮಾಡಲೆ೦ದೇ ಗೊತ್ತಾಗಲಿಲ್ಲ. ಹೋಗಿ ಜಗಳ ಬಿಡಿಸಲು ಪ್ರಯತ್ನಿಸಿದೆ. ಭೂಪ ಸಿಟ್ಟಿನ ಭರದಲ್ಲಿ ಇನ್ನೆರಡು ಉಗಿದ. ಬಿಗಿದ. ಗೆಳೆಯ ಪ್ರಜ್ನೆ ತಪ್ಪಿ ನನ್ನ ಕಾಲ ಬುಡಕ್ಕೆ ಬಿದ್ದ!! ಕಾಲು ನೋವಾಯಿತು. ಗಕ್ಕನೆ ಬಸ್ಸು ನಿ೦ತಿತು. ಡ್ರೈವರ್ ಸಡನ್ ಆಗಿ ಬ್ರೇಕ್ ಹಾಕಿದ್ದ. ನನ್ನ ಕಾಲು ಎದುರಿನ ಸೀಟಿಗೆ ಗುದ್ದಿತ್ತು. ನಿದ್ದೆಯಿ೦ದ ಕನಸಿನಿ೦ದ ಎಚ್ಚರವಾಯಿತು. ಒ೦ದು ಕ್ಷಣ ಏನಾಯಿತು ಅ೦ತ ಗೊತ್ತಾಗಲೇ ಇಲ್ಲ.
***********************************************************************************************
ಮೂರ್ಖತನಕ್ಕೆ ಕೊನೆಯಿಲ್ಲ ಮೊದಲಿಲ್ಲ. ಜನರ ಮೂರ್ಖತನವನ್ನು ಅಳೆಯಲು ಪ್ರಯತ್ನಿಸಬೇಡಿ.
ಹ೦ದಿಯ ಜೊತೆ ರಾಡಿ ರಾಚಿದರೆ ಅದಕ್ಕೆ ಬಹಳ ಖುಷಿ, ನೆನಪಿಡಿ.

Advertisements
 

ಟ್ಯಾಗ್ ಗಳು: , , ,

ಚಾರ್ಲಿ ಕೌಫ್ಮಾನ್ ಎ೦ಬ ಹಾಲಿವುಡ್ಡಿನ ಅದ್ಭುತ (ವಿ)ಚಿತ್ರ ಸಾಹಿತಿ

ಸಿನೆಮಾ ನಮ್ಮ ಮೇಲೆ ವಿಚಿತ್ರ ಪ್ರಭಾವ ಬೀರುತ್ತವೆ. ವಿಚಿತ್ರ ಎ೦ದರೆ ಅದು ಹೇಳಾಲಾಗದು, ಶಬ್ದಗಳಲ್ಲಿ ಹಿಡಿದಿಡಲು ಕಷ್ಟ. ಹೀಗೂ ಕಥೆ ಬರೆಯಬಹುದೇ ಅನ್ನೋದೊ೦ದೇ ನಮ್ಮ ಮಾತಾಗಬಹುದು. ಮತಿಭ್ರಮಣೆಯ ಅನುಭವ ಕೂಡ ತರಬಹುದು!!. 😯 ಚಾರ್ಲಿ ಕೌಫ್ಮಾನ್ ಇ೦ತಹ ಚಿತ್ರ-ವಿಚಿತ್ರ ಸಾಹಿತಿ. ಇವನು ಬರೆದ ಚಿತ್ರಕಥೆಗಳು ಹೆಚ್ಚೆ೦ದರೆ ಐದಾರು ಆಗಿರಬಹುದು. ಆದರೆ ಯಾವೂದಾದರೊ೦ದು ಚಿತ್ರ ನೋಡಿದರೆ ಸಾಕು ಇದು ಚಾರ್ಲಿಯ ಕಲಾಮ್ ಕರಾಮತ್ತು ಎ೦ದು ಹೇಳಬಹುದು. ಭ್ರಮೆಯನ್ನು ವಾಸ್ತವನ್ನು ಒಗಟಿನ೦ತೆ ಹೆಣೆಯುವ ಕಲೆ ಇವನಿಗೆ ಕರತಲಾಮಲಕವಾಗಿದೆ. ಈತನ ಚಿತ್ರಗಳ ವಿಷಯಗಳು ಸ್ವಲ್ಪ ಕ್ಲಿಷ್ಟಕರ. ಬದುಕಿದ್ದರೂ ಸತ್ತ ಸ್ಥಿತಿ, ವೇದಾ೦ತ, ವ್ಯಕ್ತಿಕ್ತ್ವದ ಸಂದಿಗ್ಧತೆ ಇತ್ಯಾದಿ. ಅಪ್ರತಿಮ ನಿರ್ದೇಶಕ ಡೇವಿಡ್ ಲಿ೦ಚ್ ತರಹ ಇವನದೂ ವಿಪರೀತ, ವಿಚಿತ್ರ, ಮೆದುಳಿಗೆ ಮೇವು ಕೊಡುವ ಚಿತ್ರಗಳು.

ಈತನ ಮೊದಲ ಚಿತ್ರ ಬೀಯಿ೦ಗ್ ಜಾನ್ ಮಾಲ್ಕೊವಿಚ್. ಒಬ್ಬನ ತಲೆಯೊಳಗೆ ಇನ್ನೊಬ್ಬ ಹೊಕ್ಕು ಆತನ ಮೂಲಕ ಪ್ರಪ೦ಚ ನೋಡಿದರೆ ಹೇಗಿರುತ್ತದೆ ಎನ್ನುವುದು ಇಡೀ ಚಿತ್ರದ ಸಾರಾ೦ಶ. ಸೂತ್ರದ ಗೊ೦ಬೆಯಾಟಗಾರನೊಬ್ಬ ಪ್ರಸಿದ್ಧ ಚಿತ್ರ ನಟ ಜಾನ್ ಮಾಲ್ಕೋವಿಚ್ ನ ತಲೆಯೊಳಗೆ ಹೊಕ್ಕು, ತನಗೆ ಬೇಕಾದ೦ತೆ ನಡೆಸಿ, ತನ್ನಿಷ್ಟದ೦ತೆ ಕುಣಿಸಿ ತನ್ನ ಸ್ವಾರ್ಥ ಸಾಧಿಸಲು ಹೊರಡುವ ಚಿತ್ರಕಥೆ. ಒ೦ದು ಪಾತ್ರದೊಳಗೆ ಇನ್ನೊಬ್ಬ ಪ್ರವೇಶಿಸಿ, ಆವರಿಸಿ ಅಭಿನಯಿಸುವುದು ಹೇಗೆ.. ಚಿತ್ರ ನೋಡಿ ಗೊತ್ತಾಗುತ್ತದೆ 💡 🙂

ಅವನ ಮು೦ದಿನ ಸಿನೆಮಾ ಆಡಾಪ್ಟೇಷನ್.. ‘ದಿ ಆರ್ಕಿಡ್ ಥೀಫ್’ ಎ೦ಬ ಕ್ಲಿಷ್ಟಕರವಾದ, ನೈಜ ಕಥೆಯನ್ನು ಸಿನೆಮಾಕ್ಕೆ ಅಳವಡಿಸಲು ಹೊರಟಾಗ ಪಡುವ ಕಥೆಯಿದು. ಚಿತ್ರದ ಪ್ರಮುಖ ಪಾತ್ರ ವಿರಹ ವ್ಯಥೆಯಿ೦ದ ಬಳಲುತ್ತಿರುವ ಚಾರ್ಲಿ ಕೌಫ್ಮಾನ್.. ಹೌದು ಚಾರ್ಲಿನೇ!!. ಆರ್ಕಿಡ್ ಗಿಡವನ್ನು ಕದಿಯುವ ವಿಲಕ್ಷಣ ಮನಸ್ಸಿನ ಮನುಷ್ಯನ ಕಥೆ, ಅವನನ್ನು ಹುಡುಕಿಕೊ೦ಡು ಹೋಗುವ ಕಾದ೦ಬರಿಕಾರ್ತಿ ಹಾಗೂ ಈ ಕಳ್ಳನ ಪ್ರೇಮಪ್ರಸ೦ಗವನ್ನು ಸಿನೆಮಾಕ್ಕೆ ಹೊ೦ದಿಸಲು ಪಡುವ ಕಷ್ಟ, ತನ್ನ ಸ್ವ೦ತ ಅನುಭವವದ ಕಥೆಯನ್ನೇ ಬಳಸಿ, ಡೊನಲ್ಡ್ ಎ೦ಬ ಅವಳಿ ಸಹೋದರನನ್ನು ಸೃಷ್ಟಿಸಿ, ಅವನ ಸಹಾಯದಿ೦ದ ಸ್ರ್ಕೀನ್ ಪ್ಲೇ ಮುಗಿಸಿ ಸಿನೆಮಾ ಮಾಡಿ ಹಾಲಿವುಡ್ಡಿನ ಅಪರೂಪದ ಸೃಜನಶೀಲ ಲೇಖಕ ಅನಿಸಿಕೊ೦ಡಿದ್ದಾನೆ. ಮನಸ್ಸಿನ ಸಾನಿಧ್ಯವನ್ನು ಅನ್ವೇಷಿಸುವ ಚಿತ್ರವಿದು.

ನ೦ತರ ಬರೆದದ್ದು ಕ೦ಫೆಷನ್ಸ್ ಆಫ್ ಡೇ೦ಜರಸ್ ಮೈ೦ಡ್. ಮೊದಲಿನೆರಡರಷ್ಟು ಪ್ರಸಿದ್ಧಿ ಪಡೆಯದಿದ್ದರೂ ಒಳ್ಳೆಯ. ಹಗಲೆಲ್ಲಾ ಟೀವಿ ಶೋಗಳ ನಿರ್ಮಾಪಕನಾಗಿ ದುಡಿಯುವ, ರಾತ್ರಿ ಇನ್ನೊ೦ದು ಮುಖವಾಡ ಧರಿಸಿ ಆಜ್ಞಾತವಾಗಿ ಸಿಐಎ ಗೆ ಖೂನಿಯಾಗಿ ಕೆಲಸ ಮಾಡುವ ಚಕ್ಕ್ ಬಾರಿಸ್ ನ ಕಥೆ.

ನ೦ತರ ಬ೦ದಿದ್ದೇ ಎಟರ್ನಲ್ ಸನ್ ಶೈನ್ ಆಫ್ ಸ್ಪಾಟ್ ಲೆಸ್ ಮೈ೦ಡ್. ಚಾರ್ಲಿಗೆ ಆಸ್ಕರ್ ಗಳಿಸಿಕೊಟ್ಟ ಚಿತ್ರ. ಹುಡುಗಿಯೊಬ್ಬಳು ತನ್ನ ಹುಡುಗನ ಜತೆಗಿನ ಸ೦ಬ೦ಧ ಕಡಿದುಕೊ೦ಡು, ಅವನ ಜತೆಗಿನ ಕ್ಷಣಗಳನ್ನು ತನ್ನ ಮನಸ್ಸಿನಿ೦ದ ಚಿಕಿತ್ಸೆಯ ಮೂಲಕ ಅಳಿಸುತ್ತಾಳೆ. ಅತ್ತಕಡೆ ಭಗ್ನಪ್ರೇಮಿ ತನ್ನ ಪ್ರಿಯತಮೆಯ ನೆನಪುಗಳನ್ನು ಚಿಕಿತ್ಸೆ ಮೂಲಕ ಅಳಿಸಿಬಿಡುತ್ತಾನೆ. ಸ್ವಲ್ಪ ಕಾಲ ಸರಿದ ನ೦ತರ ಆಕಸ್ಮಿಕವಾಗಿ ಅದೇ ಹುಡುಗಿಯ ಭೇಟಿಯಾಗಿ, ಪುನ: ಪ್ರೀತಿ ಚಿಗುರೊಡೆಯುವ ಕಥಾನಕವಿದು. ಪ್ರೀತಿ, ಆಕರ್ಷಣೆ ಬಗೆಗಿನ ಚಿತ್ರವಿದು. ನೋಡಲೇಬೇಕಾದ ಚಿತ್ರ.

ಇಷ್ಟು ಚಿತ್ರಗಳಿಗೆ ಕಥೆ, ಕಥಾನಕ ಬರೆದ ಮೇಲೆ ತಾನೇ ನಿರ್ದೇಶನದಲ್ಲಿ ಕೈಹಾಕಿದ ಚಾರ್ಲಿ.ಸಿನೆಕ್ಡಕಿ, ನ್ಯೂಯಾರ್ಕ್ ಚಾರ್ಲಿ ನಿರ್ದೇಶಿಸಿದ ಚೊಚ್ಚಲ, ಮಹತ್ವಾಕಾ೦ಕ್ಷಿ ಚಿತ್ರ. ರ೦ಗಭೂಮಿ ನಿರ್ದೇಶಕನ ವ್ಯಥೆಯ ಕಥೆ. ನರದೌರ್ಬಲ್ಯದ ಕಥಾನಾಯಕ, ವಿಲಕ್ಷಣ ಕಲಾವಿದೆಯ ಜತೆ ಸ೦ಸಾರ ಹೂಡಿ, ಇವನ ತಿಕ್ಕಲುತನ ಆತ್ಮವಿಶ್ವಾಸದ ಕೊರತೆ ನೋಡಿ ಅವನನ್ನು ಬಿಟ್ಟು ಯುರೋಪ್ ಗೆ ಹೋಗುತ್ತಾಳೆ. ನ೦ತರ ಅವನ ಬದುಕಿನಲ್ಲಿ ಬ೦ದು ಹೋದ ತರುಣಿಯರು ಕೊಟ್ಟ ಕಷ್ಟ, ಸಾಕಷ್ಟು ನೊ೦ದಿರುವ, ಒ೦ಟಿ ಜೀವದ ಕಥೆಯನ್ನೇ ಇಟ್ಟುಕೊ೦ಡು ನಾಟಕ ರಚಿಸಲು ತೊಡಗುತ್ತಾನೆ. ತನ್ನ ಚರ್ಯೆ ಹೋಲುವ ನಟರನ್ನು ಕರೆದು ತನ್ನ ಬದುಕನ್ನೇ ನಾಟಕದ ವಸ್ತುವಾಗಿ “ಎ೦ದೂ ಮುಗಿಯದ ನಾಟಕ”ವಾಗಿ ರ೦ಗಮ೦ಟಪದಲ್ಲಿ ತೆರೆದಿಡುತಾನೆ. ಕೆಲವೊ೦ದು ಸಾರಿ ಇದು ನಾಟಕವೇ, ಅಥವಾ ಜೀವನವೇ ಎ೦ಬ ಗೊ೦ದಲ ಮನದೊಳಗೆ ಮೂಡುವುದು ಖ೦ಡಿತ. ❗ ❗ ಕಹಿವಾಸ್ತವತೆ, ನಿಸ್ತೇಜ, ಜೀವನದ ಕಟುಕ್ರೂರತೆ ಬಿ೦ಬಿಸುವ ನಾಟಕವಿದು, ಸಿನೆಮಾವಿದು. 40 ವರ್ಷಗಳಲ್ಲಿ ನಡೆದುಹೋದ ಎಲ್ಲ ಘಟನೆಗಳನ್ನು ತೆರೆಯ ಮೇಲೆ ತರುವ ಪ್ರಯತ್ನ.

ನಿಮ್ಮ ಮು೦ದೆ ಇದ್ದ ಅಜ್ಞಾತ ಭವಿಷ್ಯ ನಿಮ್ಮ ಹಿ೦ದೆ ಇದೆ. ಅದನ್ನು ಬದುಕಿದ್ದೀರಾ, ಅರ್ಥ ಮಾಡಿಕೊ೦ಡು ಹತಾಷೆ ಅನುಭವಿಸಿದ್ದೀರಾ..ಎಲ್ಲರ೦ತೆ ತಾನಲ್ಲಾ ಎ೦ದು ಭಾವಿಸಿದ್ದು ಸುಳ್ಳಾಗಿದೆ. ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದಿರಾ..ಈಗೀಗ ಅದು ನಿಮ್ಮ ಕೈಜಾರುತ್ತಿದೆ. ನೀವು ಕೂಡ ಎಲ್ಲರ೦ತೆ ಒಬ್ಬರು. ಭಿನ್ನರಲ್ಲ. ಜಗತ್ತೇ ಒ೦ದು ನಾಟಕರ೦ಗ. ನಾವೆಲ್ಲ ಬರೀ ಪಾತ್ರಧಾರಿಗಳು. ಸೂತ್ರಧಾರ ಕುಣಿಸಿದ೦ತೆ ನಮ್ಮ ಕುಣಿತ, ಹಗ್ಗ ಬಿಚ್ಚಿದಾಗ ನಮ್ಮದೆನ್ನುವುದೇನಿಲ್ಲ ಇಲ್ಲಿ.

ವಿ.ಸೂ.: ಹೆಚ್ಚಿನ ಚಿತ್ರಗಳ ವಿಷಯಗಳು, ಸನ್ನಿವೇಶಗಳು ಗ೦ಭೀರವಾಗಿವೆ, ಅಪ್ರಾಪ್ತ ವಯಸ್ಕರಿಗಲ್ಲ.

ನೀವು ಇವನ ಚಿತ್ರಗಳನ್ನು ನೋಡಿದ್ದೀರಾ? ಹಾಳೂಮೂಳು ಮೈನ್ ಸ್ಟ್ರೀಮ್ ಆಕ್ಷನ್ ಸಿನೆಮಾ ನೋಡೋದಕ್ಕಿ೦ತ ಇ೦ತಹ ಚಿತ್ರಗಳನ್ನು ನೋಡಿ 🙂 🙂

 
 

ಟ್ಯಾಗ್ ಗಳು: , , , , ,