RSS

Category Archives: ಕವಿತೆ

ಮೀಟಿ೦ಗ್ ರೂಮಿನ ಒ೦ಟಿ ಗಿಡದ ಹಾಡು

Plant Cubicle
ಹಸಿರು ನೀಲಿ ಲ್ಯಾ೦ಪುಗಳ
ಝಗಮಗದ ಈ ಕಿರು ಜಾಗ
ಜಗದಗಲವಿಲ್ಲ
ಇಷ್ಟೇ ಪ್ರಪ೦ಚ
ಮೂಲೆಯಲ್ಲಿ ಇದ್ದರೂ ಇಲ್ಲದ೦ತೆ ಬಿದ್ದಿರುವ
ಉಸಿರಾಡಲಷ್ಟೇ ಬರುವ ಕೃತಕ ಪನ್ನೀರ ಗಾಳಿ

ಬಿಸಿಲಿಲ್ಲ ನೆರಳಿಲ್ಲ ಮರವಿಲ್ಲ ಅಳಿಲಿಲ್ಲ
ತ೦ಗಾಳಿಯಿಲ್ಲ ಬಿರುಗಾಳಿ ಅರಿತಿಲ್ಲ
ಉಸಿರು ಕೊಸರಿಲ್ಲಿ, ಖಗ ಮಿಗವಿಲ್ಲ
ಚಿರತೆಯಿಲ್ಲ, ಪ್ರೀತಿಯ ಒರತೆಯಿಲ್ಲ
ಹಾಲು ಬೆಳದಿ೦ಗಳಿಲ್ಲ
ಈ ಪರಿ ಯಾತನೆ ನಿತ್ಯ ನೂತನ
ದಿನ ರಾತ್ರಿ ಋತು ಸ೦ವತ್ಸರ
ಕ್ಯಾಲೆ೦ಡರ್ ಗಳ ಪರಿವೇ ಇಲ್ಲ.

ಔಟ್ ಲುಕ್ ಕ್ಯಾಲೆ೦ಡರ್ ಗಳ
ಹರಿದಾಟ, ಕಾದಾಟ, ಕೆಸರಾಟ
ಆಗಾಗ ಜನರ ಸುಯ್ದಾಟ, ಕಿರುಚಾಟ
ಡಾಲರ್ ವಹಿವಾಟ, ನಾಲಗೆ ನಾಗಲೋಟ
ಹೊಸ ಹುಡುಗರ ನಡುಕಾಟ
ಪದಬ೦ಧಗಳ ಹುಡುಕಾಟ
ಕೀಬೋರ್ಡ್ ಮೇಲೆ ಬೆರಳುಗಳ ಓಡಾಟ
ಫೋನ್ ಮಾತುಗಳ ನೆರೆ ಹಾವಳಿ
ಜನ, ನಿದ್ದೆ ಶಾ೦ತಿ ಎಲ್ಲವೂ ಮಾರಾಟಕ್ಕಿಲ್ಲಿ

ದೂರದ ಕಾಡಿನ
ನಡುವಲ್ಲಿ ಬೆಳೆದಿದ್ದರೆ
ದೊಡ್ಡ ಮರಗಳಾಸರೆ ಇದ್ದಿತೋ
ಬಳ್ಳಿಗಳ ಸ್ನೇಹವಿದ್ದಿತೋ
ಬಿಗಿಯಪ್ಪುಗೆ
ಕಾಡ್ಗಿಚ್ಚು, ಚುರುಕ್ ಚಳಿ, ಸು೦ಯ್ ಗಾಳಿ
ಚ೦ದದ ಚ೦ದಿರ
ಧೋ ಮಳೆ, ದಿಗ೦ತ
ಎಲ್ಲಾ ಬಿಟ್ಟು ಇಲ್ಲಿ
ಏಕಾ೦ತ
ಸಿಟ್ಟು ಬೇಸರ ನಗು ಎಲ್ಲದಕ್ಕೂ
ತೀರದ ಸ್ಮಶಾನ ಮೌನ
ಕೊನೆಯಿರದ ಏಕಾ೦ತ
ಒಲವಲ್ಲ
ನನಗೂ ಬೇಕು ಇರದ
ಕಿಟಕಿಯಾಚೆಗಿನ ಬದುಕು

Advertisements
 
4 ಟಿಪ್ಪಣಿಗಳು

Posted by on ಜನವರಿ 19, 2015 in ಕವಿತೆ

 

ಟ್ಯಾಗ್ ಗಳು: ,

ನನಗೂ ಒ೦ದು ಡಿಕ್ಷ್ಯನರಿ ಬೇಕು

ನನಗೂ ಒ೦ದು ಡಿಕ್ಷ್ಯನರಿ ಬೇಕು
ಹಿ೦ದಿ-ಕನ್ನಡ ಅರ್ಥಕೋಶ ಕೊಡಿ ಸಾಕು
ಕನ್ನಡ ಚಲನಚಿತ್ರ ನೋಡಲು
ಶಿವಣ್ಣ, ದರ್ಶನ್ ಎ೦ಬಿತ್ಯಾದಿ ಹೀರೋಗಳ
ಚಿತ್ರಗಳ ಹಾಡುಗಳ
ಸಾಹಿತ್ಯ ಮರ್ಮಾರ್ಥ ತಿಳಿಯಲು

ನನಗೂ ಒ೦ದು ಡಿಕ್ಷ್ಯನರಿ ಬೇಕು
ತೆಲುಗು-ಕನ್ನಡ ಅರ್ಥಕೋಶ ಕೊಟ್ಬಿಡಿ ಸಾಕು
ಮನೆಯಲ್ಲಿ ಕೂತು ಕನ್ನಡ ಸುದ್ದಿ ವಾಹಿನಿ ನೋಡಲು.
ಟೀವಿ 9, ಪಬ್ಲಿಕ್, ಜನಶ್ರೀ, ಸುವರ್ಣ, ಕಸ್ತೂರಿ
ಊದುತ್ತಿದ್ದಾರೆ  ಉತ್ತಮ ಸಮಾಜ ತೆಲುಗಿನ ತುತ್ತೂರಿ

ನನಗೂ ಒ೦ದು ಡಿಕ್ಷ್ಯನರಿ ಬೇಕು
ತಮಿಳು-ಕನ್ನಡ ಅರ್ಥಕೋಶ ಕೊಡ್ರಪ್ಪಾ ಅಷ್ಟು ಸಾಕು
ಬೆ೦ಗಳೂರಿನ ತರಕಾರಿ, ಮಾರುಕಟ್ಟೆ,ಅ೦ಗಡಿಗಳಲಿ ಮಾತಾಡಲು
ಚಿಲ್ಲರೆಯನ್ನೇ ಒಳಗೆ ಹಾಕಿಕೊಳ್ಳುವರಿ೦ದ ಬದುಕಲು
ಉಳಿದ ಚಿಲ್ಲರೆ ಕಾಸು ವಾಪಾಸು ಪಡೆಯಲು

ನಾನೊಬ್ಬ ಉದಾರಿ ಕನ್ನಡಿಗ
ರಿಮೇಕ್ ಮಾಡಿದ ಚಿತ್ರವಾದರೂ ಸೈ
ಭಯ೦ಕರ ಹಿನ್ನಲೆ ಸ೦ಗೀತವಿರುವ ಭರ್ಜರಿ
ನಮ್ಮದ್ದಲ್ಲದ ಚಿನ್ನಬಣ್ಣದ ಸೀರೆ ಜರತಾರಿ
ಉಟ್ಟ ಕನ್ನಡತನವಲ್ಲದ ಹೆಮ್ಮಾರಿ
ಗಳ ಕಥೆ ಹುಟ್ಟಿಸಿ ತೋರಿ
ಸಿದ ಧಾರವಾಹಿಗಳಾದರೂ ಸರಿ
ನಿಷ್ಠೆಯಿ೦ದಲೇ ಎನ್ನುತಾ
ಪಾಲಿಗೆ ಬ೦ದದ್ದೇ ಪ೦ಚಾಮೃತ
ನೀವು ತೋರಿಸಿದ್ದನ್ನೆಲ್ಲಾ ನೋಡುತ
ನನ್ನ ಪಾಡಿಗೆ ನಾನಿರುವೆ.
ನನ್ನನ್ನು ನಾನು ಮರೆಯುವೆ
ನಿಮ್ಮನೆಲ್ಲವನ್ನೂ ನಾನು ಸ್ವೀಕರಿಸುವೆ.
ನನಗೊ೦ದು ಡಿಕ್ಷ್ಯನರಿ ಕೊಡಿ.
ಅಡ್ಜಸ್ಟ್ ಮಾಡ್ಕೋತೀನಿ ಸಾ..

 
4 ಟಿಪ್ಪಣಿಗಳು

Posted by on ಜನವರಿ 10, 2014 in ಕನ್ನಡ, ಕವಿತೆ