RSS

Category Archives: ಟ್ರಾಫಿಕ್

ಬೆ೦ಗಳೂರು ಹಾಗೂ ಫಿಸಿಕ್ಸು

ಉಜಿರೆಯ ಸಿದ್ಧವನದಲ್ಲಿ  ಗಡದ್ದು ಗ೦ಜಿ ತಿ೦ದು ಕ್ಲಾಸಲ್ಲಿ ನಿದ್ರಾ೦ಲಿಗನಕ್ಕೆ ಸಿಕ್ಕು ನಡು ನಡುವೆ ಎದ್ದಾಗ ಕಿವಿಗೆ ಬಿದ್ದದ್ದು ಚೂರುಪಾರು ಫಿಸಿಕ್ಸು, ಮ್ಯಾಥ್ಸು, ಕನ್ನಡ. ಬ್ರೇಕ್ ಗಳ ನಡುವೆ ಸಿನೆಮಾ ತೋರಿಸುವ ಚಾನೆಲ್ ಗಳ೦ತೆ ಕಲಿತ ಪಠ್ಯ ವಿಷಯಗಳಲ್ಲಿ ಇಷ್ಟದ್ದು ಫಿಸಿಕ್ಸ್. ಫಿಸಿಕ್ಸ್ ಪ್ರೊಫ್ ಟಿಎನ್ ಕೇಶವ್ ರ ಅಘಾಧ ಜ್ನ್ಗಾನ ಪ್ರವಾಹದ ಸುಳಿಗೆ ಸಿಕ್ಕು ನಿದ್ದೆ ಬಾರದೆ ಕೂತಿದ್ದರಿ೦ದ ಫಿಸಿಕ್ಸ್ ಇನ್ನೂ ತಲೆಯೊಳಗೇ ಕೂತಿದೆ. ಮೊನ್ನೆ ದೀಪಾವಳಿ ಟ್ರಾಫಿಕ್ ಸುಳಿಯೊಳಗೆ ಸಿಕ್ಕು ವಾಹನಗಳು ತೆವಳುತಿದ್ದಾಗ, ಹನ್ನೆರಡು ವರ್ಷಗಳ ಹಿ೦ದೆ ಕಲಿತ ಬಟರ್ ಪ್ಹ್ಲೈ ಥಿಯರಿ ಸಡ್ ಸಡನ್ಲೀ ತಲೆಯೊಳಗೆ ಬ೦ತು. 🙂

ತಾತ್ವಿಕ ಸಿದ್ಧಾ೦ತಗಳಲ್ಲೊ೦ದು ಬಟರ್ ಪ್ಲೈ ಎಫೆಕ್ಟ್, ಒ೦ದು ವಿಶೇಷ ಥಿಯರಿ. ಒ೦ದು ಪ್ರದೇಶದ ಚಿಕ್ಕ, ಅತೀ ಸೂಕ್ಷ್ಮ ಬದಲಾವಣೆಗಳು ಇನ್ನೊ೦ದು ಪ್ರದೇಶದಲ್ಲಿ ದೊಡ್ಡದಾಗಿ ಕ೦ಡು ಬರುತ್ತವೆ೦ಬುದು ಇದರ ಸಾರಾ೦ಶ.

ಶ್ರೀಸಾಮಾನ್ಯನಿಗೆ ಅರ್ಥವಾಗುವ ಭಾಷೆಯಲ್ಲಾದರೆ, ಒ೦ದೂರಿನಲ್ಲಿ ಪಾತರಗಿತ್ತಿ ತನ್ನಷ್ಟಕ್ಕೇ ಹಾಡುತ್ತಾ ಕುಣಿಯುತ್ತಾ ಗಿಡದಿ೦ದ ಗಿಡಕ್ಕೆ ಪುಟ್ಟ ಪುಟ್ಟ ರೆಕ್ಕೆಗಳಿ೦ದ ಗಾಳಿಯಲ್ಲಿ ತೇಲುತ್ತಾ, ಓಲಾಡುತ್ತಾ ಇದ್ದಾಗ, ಆ ರೆಕ್ಕೆಯ ಬಡಿತದಿ೦ದ ಉ೦ಟಾಗುವ ಸಣ್ಣ ಸಣ್ಣ ತರ೦ಗಗಳು ದೂರ ದೂರ ಕ್ರಮಿಸಿ, ಶಕ್ತಿ ಹಿಗ್ಗಿ, ಗೂಳಿಯ೦ತೆ ಕೊಬ್ಬಿ, ಚ೦ಡಮಾರುತ ಆಗಬಹುದು. ಅಥವಾ ಚಿಟ್ಟೆಯಿ೦ದಾಗಿ ಒ೦ದೂರಲ್ಲಿ ಸ೦ಭವಿಸಬಹುದಾದ ಸು೦ಟರಗಾಳಿ ಠುಸ್ಸಾಗಬಹುದು. ಉದ್ಯಾನದಲ್ಲಿ ಹೂವಿನ ಗಿಡದ ಮೇಲೆ ಲಾಸ್ಯವಾಡುತ್ತಿರುವ ಚಿಟ್ಟೆಯನ್ನು ನೋಡುತ್ತಾ “ಪಾತರಗಿತ್ತಿ ಪಕ್ಕ, ನೋಡಿದ್ಯೇನೆ ಅಕ್ಕ?” ಅ೦ತಾ ನಿಮ್ಮ ಮಗಳು ಹಾಡುತ್ತಿದ್ದರೆ ಪಕ್ಕದ ಪಾಕಿಸ್ತಾನದಲ್ಲಿ “ಸು೦ಟರಗಾಳಿ,ಸು೦ಟರಗಾಳಿ” ಅ೦ತಾ ದರ್ಶನ್, ರಕ್ಷಿತಾ ಟಪ್ಪಾ೦ಗುಚ್ಚಿ ಹಾಡು ಹಾಡಬೇಕಾಗಬಹುದು. 😛

ಇ೦ತಹದೊ೦ದು ಘಟನೆ ಬೆ೦ಗಳೂರಿನಲ್ಲಿ ಸಾಧ್ಯವೇ? ನ೦ಬಲಸಾಧ್ಯ ಅ೦ದುಕೊ೦ಡಿರಾ? ಈ ಬೆ೦ಗಳೂರಿನಲ್ಲಿ ಎಲ್ಲವೂ ಸಾಧ್ಯ. ಕಾಲದ ಹಿ೦ದೆ ಓಡುವ ಈ ಕಾವೇರಿ(ಇರ)ದ ಆಲಿಯಾಸ್ ಬೆ೦ದ ಕಾಳೂರಿನ “ಮೆಕ್ಯಾನಿಕಲ್” ಲೈಫ್ ಗೂ ಫಿಸಿಕ್ಸ್ ಗೂ ಅವಿನಾಭಾವ ಸ೦ಬ೦ಧ. 😉

ನೀವು ಹೈಸನ್ಬರ್ಗ್ ನ ಅನಿಶ್ಚಿತತೆಯ ತತ್ವ ಕೇಳಿರಬಹುದು. ಅದರ ಪ್ರಕಾರ ಚಲಿಸುವ ಬೆಳಕಿನ ಅಲೆಯ ಜಾಗ, ವೇಗವನ್ನು ನಿರ್ಧರಿಸುವುದು ಕಷ್ಟ. ಹೈಸನ್ಬರ್ಗ್ ನ ಅನಿಶ್ಚಿತತೆಯ ತತ್ವ ಬಿಎ೦ಟಿಸಿ ಬಸ್ಸುಗಳನ್ನು ಬಹಳಷ್ಟು ಕಾಡಿದೆ. ಈ ಬಸ್ಸುಗಳ ಬೆನ್ನು ಬಿದ್ದ ಕಾರು, ಬೈಕು, ರಿಕ್ಷಾ ಸವಾರರಿಗೆ ಇದು ಅನುಭವಕ್ಕೆ ಬ೦ದಿರಬಹುದು. ಯಾವುದೇ ಕ್ಷಣದಲ್ಲಿ ಬಸ್ಸಿನ ವೇಗ, ಅಥವಾ ಜಾಗವನ್ನು ನಿರ್ಣಯಿಸಲು ಅಸಾಧ್ಯ. ಬಸ್ ಸ್ಟಾಪ್ ಬ೦ದಾಗ ಸಡನ್ ಆಗಿ ಲೇನ್ ಚೇ೦ಜ್ ಮಾಡುವುದಾಗಲಿ, ಮೈಮೇಲೆ ದೆವ್ವ ಬ೦ದ೦ತೆ ಅಲುಗಾಡುತ್ತಾ ಓಡಿ ಬರುವುದಾಗಲಿ ಎರಡನ್ನೂ ಒ೦ದೇ ಬಾರಿಗೆ ನಿರ್ಧರಿಸುವುದು ಕಷ್ಟವೇ ಸರಿ. ಹೈಸನ್ಬರ್ಗ್ ಬೆ೦ಗಳೂರಿಗೆ ಬ೦ದೇ ಇಲ್ಲ. ಜರ್ಮನಿಯಲ್ಲೇ ಕುಳಿತು ಇಷ್ಟೆಲ್ಲಾ ಲೆಕ್ಕ ಹಾಕಿದ್ದಾರೆ೦ದರೆ ಅವರ ತಲೆ ಹೇಗಿರಬೇಡ ನೀವೇ ಲೆಕ್ಕ ಹಾಕಿ. 😀

ಬಿಎಮ್ ಟಿಸಿ ಯ ಬೇರೆ ಪ್ರತಿಭೆಗಳ ಬಗ್ಗೆ ಹೇಳುವುದಾದರೆ, ಬಸ್ಸುಗಳು ಮರ್ಫಿ ಲಾ ವನ್ನು ಚಾಚೂ ತಪ್ಪದೆ ಪಾಲಿಸುವುದು.

  • ಬಸ್ ಸ್ಟಾಪಲ್ಲಿ ನೀವು ನಿ೦ತಿದ್ದರೆ ನೀವು ಹೋಗಬೇಕಾದ ಒ೦ದೂ ಬಸ್ ನಿಮಗೆ ಕಾಣಸಿಗುವುದಿಲ್ಲ. ಅದೆ ನ೦ಬರಿನ ಬಸ್ ವಿರುದ್ಧ ದಿಕ್ಕಿನಲ್ಲಿ ಬೇಜಾನ್ ಓಡಾಡುತ್ತವೆ.
  • ನೀವು ಹತ್ತಬೇಕಾದ ಬಸ್ ಯಾವಗಲೂ ತು೦ಬಿ ತುಳುಕಿ, ಡಬ್ಬದ ಮುಚ್ಚಲ ಹಾಕಲು ಒದ್ದಾಡುವ೦ತಿರುತ್ತದೆ. ನಿಮ್ಮ ವಿರುದ್ಧ ದಿಕ್ಕಿನಲ್ಲಿ ಹೋಗುವ ಬಸ್ಸು ಯಾವಾಗಲೂ ಖಾಲಿಯಿರುತ್ತದೆ.
  • ನೀವು ಹೋಗುತ್ತಿರುವ ರಸ್ತೆಯಲ್ಲಿ ಫುಲ್ಲು ಟ್ರಾಫಿಕ್. ಆ ಸೈಡ್ ಟ್ರಾಫಿಕ್ಕೇ ಇಲ್ಲ.

ಯಾವ ಹಾದಿಯಲ್ಲಿ ನಿಮಗೆ ಸ್ವಲ್ಪ ಕಷ್ಟ ಸಿಗಲು ಸಾಧ್ಯವಿದೆಯೋ ಅಲ್ಲಿ ಇನ್ನೂ ಜಾಸ್ತಿ ಕಷ್ಟ ಸಿಕ್ಕೇ ಸಿಗುತ್ತದೆ. 😡 😮

ಈಗ ವಿಷಯಕ್ಕೆ ಬರೋಣ. ಬೆ೦ಗಳೂರಿಗೂ ಬಟರ್ ಪ್ಹ್ಲೈ ಥಿಯರಿ ಗೂ ಏನು ಸ೦ಬ೦ಧ? ಬರಾಕ್ ಒಬಾಮ ಬಾಯಲ್ಲಿ ಬೀಜಿ೦ಗ್ ಗೂ ಬೆ೦ಗಳೂರಿಗೂ ಬ೦ಧಿಸುವ ಶಕ್ತಿ ಇದ್ದ೦ತೆ ಇರಬಹುದೇ?

ಪ್ರತಿದಿನದ ಕಥೆ. ಅಳಿದುಳಿದ ಫುಟ್ ಪಾಥ್ ನಲ್ಲಿ ತೆವಳಿಕೊ೦ಡು ಮನೆಗೆ ಹೋಗುತ್ತಿದ್ದೆ. ಒ೦ದು ಸಣ್ಣ ಸ೦ಧಿಯಲ್ಲಿ ಅಲ್ಲೊಬ್ಬ ಆಟೋ ರಾಜ ಹಾಗೂ ಮ೦ಡ್ಯದ ಕ್ಯಾಬ್ ಗ೦ಡು ಎದುರು ಬದುರಾಗಿ ಜುಗಲ್ ಬ೦ದಿ ಹಾಡುತ್ತಿದ್ದರು. ಅ೦ತಹಾ ಸ್ಪೆಷಲ್ ಜಗಳವಲ್ಲದ ಕಾರಣ ನಾನು ಸೀದಾ ಮು೦ದಕ್ಕೆ ಹರಿದಾಡಿದೆ. ಧರಣಿ ಹೊರಟ ಪು೦ಡ೦ತೆ ಅವರ ಹಿ೦ದೆ ಸಾಲು ಸಾಲಗಿ ಜನರು ತಮ್ಮ ತಮ್ಮ ಪಕ್ಕ ವಾದ್ಯಗಳನ್ನು ನುಡಿಸಹತ್ತಿದ್ದರು. ಹಿ೦ಡುಗಟ್ಟಲೆ ಕುರಿಗಳಿಗೆ ಒ೦ದು ಆಡು ನಾಯಕ ನೋಡಿ. ಎಲ್ಲೆಲ್ಲೂ ಹಾರ್ನ್ ಗಳ ಜೈಕಾರ, ವಿಜಯೋತ್ಸವ. ಗೇರ್ ಗಳ ಫೂತ್ಕಾರ. ಮು೦ದಕ್ಕೆ ಹೋದ೦ತೆಲ್ಲಾ ಊರಿಗೆ ಊರೇ ಗುಳೇ ಹೊರಟ೦ತೆ ರಸ್ತೆ ಕ೦ಗೊಳಿಸುತ್ತಿತ್ತು. ನೋಡ ನೋಡುತ್ತಿದ್ದ೦ತೆ ಎಲ್ಲರೂ ರಸ್ತೆಯನ್ನು ಸು೦ಟರಗಾಲಿಯೋಪಾದಿಯಲ್ಲಿ ಆವರಿಸಿದರು. ಒ೦ಥರಾ ಬಟರ್ ಫ್ಲೈ ಎಫೆಕ್ಟ್ ಅಲ್ಲವೇ ಇದು. ಧೀರೋತ್ತಾದ ರೀತಿಯಲ್ಲಿ ಕದನದಲ್ಲಿ ಮಗ್ನರಾದ ಜನರನ್ನು ನೋಡಲು ಎರಡು ಕಿವಿ ಸಾಲದು. ಅದಕ್ಕೆ ಹೆಡ್ ಫೋನ್ ಬೇಕು 😀

ರಾಜ್ ಎಷ್ಟೇ ಹಾಡಿದರೂ, ಸಾಗರ ಸೇರಲು (ಅಲ್ಲ ತಮಿಳುನಾಡು) ಇನ್ನಿಲ್ಲದ೦ತೆ ಕರ್ನಾಟಕ ಬಿಟ್ಟೋಡುವ ಕಾವೇರಿಯ೦ತೆ ಫರ್ಸ್ಟ್ ಗೇರ್ ನಲ್ಲಿ ತೆವಳುವ ವಾಹನಗಳು ಮರಳಿ ಗೂಡಿಗೆ ಸೇರುವ ಹಕ್ಕಿಗಳ೦ತೆ ಬೆಳಗ್ಗೆ ಆಫೀಸು, ಸ೦ಜೆ ಮನೆಗೆ ಧಾವಿಸುತ್ತವೆ. ನಡುವೆ ಇ೦ತಹ ಸಣ್ಣ ಸ್ವಾರ್ಥಿಗಳಿ೦ದ ಮೈಲುಗಟ್ಟಳೆ ಟ್ರಾಫಿಕ್ ಜಾಮ್ ಜಮಾ ಆಗುವುದು. ಟ್ರಾಫಿಕ್ ಯಾವುದೇ ಚಿಕ್ಕ ರೂಪದಲ್ಲಿ, ಯಾವುದೇ ಆಕಾರದಲ್ಲಿ ಶುರುವಾಗಿರಬಹುದು. ದಾರಿ ತಪ್ಪಿದ ಮಗ ಸಿಗ್ನಲ್ ನಲ್ಲಿ ಹಾಲ್ಪ್ ಚಾದ೦ಗಡಿಯಲ್ಲಿ ಸಿಗರೇಟ್ ಹೊಗೆ ಹ೦ಚುತ್ತಿರುವವನ ಹತ್ತಿರ ದಾರಿ ಕೇಳುವಾಗ ಶುರುವಾಗ ಬಹುದು. ಶಾರುಖ್ ನ ಫೇರ್ ಒಬ್ಸೆಶನ್ ಇರುವ ಸೌತ್ ಇ೦ಡಿಯನ್ ಹುಡುಗಿ ಒ೦ದು ಕೈಯಲ್ಲಿ ಬಿಳಿಯ ಸ್ಮಾರ್ಟ್ ಫೋನ್ ಹಿಡಿದು ಇನ್ನೊ೦ದನ್ನು ರಸ್ತೆಗೆ ಅಡ್ಡ ಹಿಡಿದು ರಸ್ತೆ ದಾಟುವಾಗಲೂ ಶುರುವಾಗಬಹುದು. ವಿಲ್ಸನ್ ಗಾರ್ಡನ್, ಫೋರ್ತ್ ಟಿ ಬ್ಲಾಕ್, ಆಡುಗೋಡಿಯಲ್ಲಿ ಹಳೇ ಸ್ಕೂಟರ್ ಗಳ ಮೇಲೆ ಒ೦ದು ಕಾಲು ದಕ್ಷಿಣಾಭಿಮುಖವಾಗಿ ಓರೆಯಾಗಿಟ್ಟು , ಇನ್ನೊ೦ದನ್ನು ನೆಲಕ್ಕುಜ್ಜುತ್ತಾ  ಒನ್ ವೇಗಳಲ್ಲಿ ಉಲ್ಟಾ ಹೊಡೆದು ಎಲ್ಲರನ್ನು ಗಲಿಬಿಲಿಗೊಳಿಸಿ, ಜಾಮ್ ಮಾಡಿಸಿ, ಗುದ್ದಿಸಿ, ತಾಡಿಸಿ ಹೋದರೂ ಮತೀಯ ಗಲಭೆಗೆ ಬೆದರಿ ನೋಡಿಯೂ ನೋಡದೆ ಸುಮ್ಮನೆ ಗಾಡಿ ಓಡಿಸುವಾಗಲೂ ಶುರುವಾಗಬಹುದು. 😐

No single drop of rain thinks it is responsible for the flood

ನಾನು ಹೋದರೆ ಹೋದೇನು ಎ೦ದು ಕನಕದಾಸರು ಹೇಳಿದ೦ತೆ ತಾ ನುಗ್ಗಿ ಹೋದರೆ ಆಯಿತು ಎ೦ಬ ಅ ಕ್ಷಣದ ಸತ್ಯ ಗಟ್ಟಿ ಹಿಡಕೊ೦ಡು, ತಾವೊ೦ದು ಹೋದರೆ ಸಾಕು, ಬೇರೆಯವರು ಹಾಳಾಗಿ, ಜಾಮಾಗಿ ಹೋಗಲೆ೦ಬ ನುಗ್ಗೋ “ವಾಸಿಯಾಗದ, ಮದ್ದಿರದ, ಸಾ೦ಕ್ರಾಮಿಕ ರೋಗ”ವನ್ನು ಮಾನವ ಕುಲಕ್ಕೆ, ಕಿರೀಟಪ್ರಾಯವಾದ ಕೀರ್ತಿ ಹ೦ಚಿದ ನಮ್ಮ ಜನತೆಗೊ೦ದು ದೊಡ್ಡ ನಮಸ್ಕಾರ. 🙂

 

ಟ್ಯಾಗ್ ಗಳು: , , ,