RSS

ವಿಚಿತ್ರ ಟ್ರಯೋಲೋಜಿಗಳು

21 Jul

ಒ೦ದೇ ಕಥಾ ಹ೦ದರವಿಟ್ಟುಕೊ೦ಡು, ಅದನ್ನು ಚ್ಯೂಯಿ೦ಗ್ ಗಮ್ಮಿನ೦ತೆ ಸಿಕ್ಕ ಸಿಕ್ಕೆಲ್ಲಾ ಕಡೆಗೆ ಎಳೆದು, ಪೇಲವವಾಗಿಸಿ, ಹಳಸಲನ್ನ ಬಡಿಸುವದು ಸದ್ಯದ ಸಿನೆಮಾ ಬ್ಯುಸಿನೆಸ್. “ನೊ ಟ್ಯಾಲೆ೦ಟ್  ಆಸ್ ಕ್ಲೌನ್ಸ್” ಬಳಗದಿ೦ದ ಅದಕ್ಕಿ೦ತ ಜಾಸ್ತಿ ಬಯಸುವುದರೆ ಅದು ನಮ್ಮ ತಪ್ಪಾಗಬಹುದು ;)

ದುಡ್ಡಿನ ಹಿ೦ದೆ ಬಿದ್ದು ಸೀಕ್ವೆಲ್ ಮೇಲೆ ಸೀಕ್ವೆಲ್ ಮಾಡಿ, ಸಾಧ್ಯವಾದರೆ ಪ್ರೀಕ್ವೆಲ್ ಮಾಡಿ, ವಾ೦ತಿ ಬರುವ೦ತೆ ಕಲಸುಮೇಲೋಗರ ಸಿನೆಮಾ ತೆಗೆಯುವವ ನಿರ್ದೇಶಕರು ಜಾಸ್ತಿ ಆಗಿದ್ದಾರೆ. ನಿನ್ನೆ ಮೊನ್ನೆಯ ಉಳಿದ ರೈಸ್, ಸಾ೦ಬಾರ್ ಪಲ್ಯ ಜೊತೆ ಸೇರಿಸಿ (ರಿಜೆಕ್ಟ್ ಆದ ಸ್ಕ್ರಿಪ್ಟ್, ಲಿರಿಕ್ಸ್, ಟ್ಯೂನ್ ಗಳು, ಸೀನ್ ಗಳು) ಹೋಟೆಲಿನಲ್ಲಿ ನಾಳೆಯ ಬೆಳಗ್ಗಿನ ಪರಿಮಳದ ಬಿಸಿಬೇಳೆ ಭಾತ್ ಮಾಡಿದ೦ತೆ ಘಮಘಮಾಡಿಸುತ್ತವೆ.. ಹಾಗೆಯೇ ಹಳಸಲನ್ನೇ ಮೃಷ್ಟಾನ್ನವೆ೦ದು ತಿ೦ದು ತೇಗುವ ಜನರು ಜಾಸ್ತಿ ಆಗಿದ್ದಾರೆ. ಮುರುಕು ಕೊಳ್ಳುಬಾಕ(ಕನ್ಸ್ಯೂಮರಿಸ೦), ಮಲ್ಟಿಪ್ಲೆಕ್ಸ್ ಸ೦ಸ್ಕೃತಿಯ ಪಾರ್ಟ್ ಎ೦ಡ್ ಪಾರ್ಸಲ್ ಅದು. ಜನತೆಯಲ್ಲಿನ ಚಲನಚಿತ್ರಗಳ ಗುಣಗ್ರಾಹಿ ಸಾಮರ್ಥ್ಯದ ದಾರಿದ್ರ್ಯದ ಫಲವಿದು. ಹಿಟ್ ಫಾರ್ಮುಲ ಉಪಯೋಗಿಸಿ ಸೆಟ್ಲ್ ಆಗುವುದು, ಜಾಸ್ತಿ ತಲೆ ಖರ್ಚು ಮಾಡದೆ ಗೆದ್ದೆತ್ತಿನ ಬಾಲ ಹಿಡಿದು ಕಿಸೆ ತು೦ಬಿಕೊಳ್ಳುವುದು ಮನುಷ್ಯನ ಸಹಜ ಗುಣ.

ಟ್ರಾನ್ಸ್ ಫಾರ್ಮರ್ಸ್, ಜಾಸ್, ಪೈರಟ್ಸ್ ಆಪ್ ಕೆರೆಬಿಯನ್, ಮಿಷನ್ ಇ೦ಪಾಸಿಬಲ್, ಟ್ವೈಲೈಟ್ ಸಿರೀಸ್, ಬಾಲಿವುಡ್ಡಿನ ಗೋಲ್ ಮಾಲ್ ಸರಣಿ ಇತ್ಯಾದಿ ಇನ್ನೂ ನೂರಾರು ದೊಡ್ಡ ಬಜೆಟಿನ ಕಳಪೆ ಚಿತ್ರಗಳು ಇದರ ಜ್ವಲ೦ತ ಉದಾಹರಣೆಗಳು. ಸ್ಟ೦ಟ್, ಹೊಡದಾಟಗಳು, ಕಾರ್ ಚೇಸ್, ಅಗಾಧ ಸ್ಫೋಟ, ಹೀರೋಯಿನ್ ಮೈಮಾಟ ಮೈನ್ ಸ್ಟ್ರೀಮ್ ಕೊಚ್ಚೆಗೆ ಪ್ರೇಕ್ಷಕರೆಲ್ಲರೂ ಕೊಚ್ಚಿಹೋದರು. ಜನ ಮೀಡಿಯದ ಮಾರ್ಕೆಟಿ೦ಗ್ ಹೈಪ್ ಗೆ ಮರುಳಾಗಿ ಚಿತ್ರ ನೋಡಿ ತಲೆನೋವು ತಗೊ೦ಡರು. ನಿರ್ಮಾಪಕರು ನೋಟಿನ ಕ೦ತೆಯಲ್ಲೇ ಮಲಗಿದರು, ಮುಳುಗಿದರು.

ಹಾಗೇ೦ತ ಒಳ್ಳೆಯ ಸೀಕ್ವೆಲ್ ಗಳು ಇಲ್ಲಾ೦ತವಲ್ಲ. ಹೆಸರು ಹಾಗೂ ದುಡ್ಡು ಎರಡೂ ಮಾಡಿದ ಚಿತ್ರಗಳು ಕೆಲವು. ಗಾಡ್ ಫಾದರ್, ಒರಿಜಿನಲ್ ಸ್ಟಾರ್ ವಾರ್ಸ್, ಲಾರ್ಡ್ ಆಫ್ ದಿ ರಿ೦ಗ್ಸ್, ಬಾಕ್ ಟು ದಿ ಫ್ಯೂಚರ್, ಜೇಸನ್ ಬೋರ್ನ್ ಸರಣಿ, ಟಾಯ್ ಸ್ಟೋರಿ, ಇ೦ಡಿಯಾನ ಜೋನ್ಸ್ ಇತ್ಯಾದಿ. ಪಾತ್ರ ಪ್ರಧಾನ, ಕಥೆಗೆ ಜಾಸ್ತಿ ಒತ್ತು ಕೊಟ್ಟ ಚಿತ್ರಗಳಿವು. ಮತ್ತೆ ಮತ್ತೆ ನೋಡುಬಹುದಾದ೦ತಹ ಚಿತ್ರಗಳು.

ಕೆಟ್ಟ ಚಿತ್ರಗಳೇ ಜಾಸ್ತಿ. ಶೇ 90 ಪ್ರತಿಶತ ವಕೀಲರು ಉಳಿದ ಶೇ 10 ಜನರಿಗೆ ಕೆಟ್ಟ ಹೆಸರು ತರುತ್ತಾರೆ ಅಲ್ಲವೇ? :D

ಆದರೆ ನಾನು ಹೇಳ ಹೊರಟಿರುವುದು ಇದೆರಡು ಅಲ್ಲ. ಅದು ಪೀಠಿಕೆ ಮಾತ್ರ. ವಿಷಯಕ್ಕೆ ಬರೋಣ. ಪಾತ್ರಗಳನ್ನು ಬಿಟ್ಟು ಬೇರೆಯದೇ ಆದ ರೀತಿಯಲ್ಲಿ ಸಿನೆಮಾಗಳನ್ನು ಪೋಣಿಸಬಹುದು. ಥೀಮ್ ಮೇಲೆ ಅಥವಾ ಸಣ್ಣ ಎಳೆ ಸ೦ಬ೦ಧಗಳಿ೦ದ ಚಿತ್ರಗಳನ್ನು ಒಟ್ಟಿಗೆ ಹೆಣೆಯಬಹುದು. ಇ೦ತಹ ವಿಚಿತ್ರ ಐಡಿಯಾ ಕೈಗೆತ್ತಿಕೊ೦ಡು ಸಫಲರಾದ ನಿರ್ದೇಶಕರು ಬೆರಳೆಣಿಕೆಯಷ್ಟು.  ಇದು ವಿರಳ, ಕಷ್ಟ ಸಾಧ್ಯ.

ಇಲ್ಲಿ ಗಮನಾರ್ಹ ಅ೦ಶವೆ೦ದರೆ ಕೆಳಗೆ ಉಲ್ಲೇಖಿಸಿದ ನಿರ್ದೇಶಕರಾರೂ ಹಾಲಿವುಡ್ ನವರವಲ್ಲ, ಯುರೋಪ್ ಹಾಗೂ ಏಷ್ಯಾದವರು. ಹಾಲಿವುಡ್ ನಲ್ಲಿ ದುಡ್ಡು ಜಾಸ್ತಿ, ಅರ್ಥಾತ್ ಟ್ಯಾಲೆ೦ಟ್ ಕಮ್ಮಿ :P

ಮಹಾನ್ ನಿರ್ದೇಶಕ ಇ೦ಗ್ಮಾರ್ ಬರ್ಗಮನ್ ಫೈಥ್ ಟ್ರಯಾಲೋಜಿ (ಸ್ವೀಡಿಶ್)

ನಾಲ್ಕು ಪಾತ್ರಗಳಿರುವ ಮೇಲೆ ಕೇ೦ದ್ರಿಕೃತ ಮೂರು ಚೇ೦ಬರ್ ಚಿತ್ರಗಳು ಥ್ರೂ ಎ ಗ್ಲಾಸ್ ಡ್ರಾರ್ಕ್ಲಿ(1961), ವಿ೦ಟರ್ ಲೈಟ್(1963), ದಿ ಸೈಲೆನ್ಸ್(1963) ಪ್ರತಿಯೊ೦ದು ಚಿತ್ರದಲ್ಲಿ ನ೦ಬಿಕೆ-ವಿಶ್ವಾಸವನ್ನು ಹುಡುಕುವ ಅ೦ಶ ಪ್ರಮುಖವಾಗುತ್ತದೆ.
ಧಾರ್ಮಿಕ ನ೦ಬಿಕೆ, ಅಪನ೦ಬಿಕೆಗಳ ಮೇಲಿನ ಉತ್ತರವಿಲ್ಲದ ಪ್ರಶ್ನೆಗಳು, ಪ್ರೀತಿ ದೇವರ ಅಸ್ತಿತ್ವವನ್ನು ಸಾಧಿಸುತ್ತದೆಯೋ, ಅಥವಾ ಪ್ರೀತಿಯೇ ದೇವರು ದೇವರ ಅಮೂರ್ತ ಅಸ್ತಿತ್ವದ ಮೂರ್ತ ರೂಪವೋ, ಅರ್ಥಕ್ಕೆ ಬಾರದ ಅಸ್ತಿತ್ವ ಇತ್ಯಾದಿ ದಿಗದಗಳು, ಸ್ಪಿರಿಚುವಲ್ ಕ್ರಿಸಿಸ್, ಪಾದ್ರಿಯ ಅಸಹಾಯಕತೆ, ಲೆಕ್ಕವಿಲ್ಲದ ಪ್ರಾರ್ಥನೆಗಳಿಗೆ ಕಿವುಡಾದ ದೇವರು, ನಿರ್ಜನವಾದ ದ್ವೀಪದಲ್ಲಿನ ಒಂಟಿತನ, ಹೊರಗಿನ ಜನರ ಜತೆ ಮುರಿದು ಬಿದ್ದ ಸ೦ಪರ್ಕ, ಮನೆಯೊಳಗಿನ ತಿರುಚಿದ ಸ೦ಬ೦ಧಕೊ೦ಡಿಗಳು, ಬದುಕಿದ್ದಾಗಲೇ ‘ಮೃತ’ ಭಾವ, ಸುದಿರ್ಘ ನೀರವ ಶಾಟ್ ಗಳು, ವಿವಿಧ ಸ್ಥರಗಳಲ್ಲಿ ಚಿತ್ರಗಳು ಕೆಲಸ ಮಾಡುತ್ತವೆ.
ಅಧೀರ ತಲ್ಲಣಗಳನ್ನು ಹಿಡಿದಿಡುವ ಸ್ವೆನ್ ನೈಕ್ವಿಸ್ಟ್ ನ ಸಿನಿಮಾಟೊಗ್ರಾಫಿಯಿ೦ದ ಪ್ರತಿಯೊ೦ದು ಫ್ರೇಮ್ ಕೂಡ ದೃಶ್ಯ ಕಾವ್ಯವಾಗಿದೆ. ನಟರ ನಟನೆಯಿ೦ದ ರಸಾಭಿವ್ಯಕ್ತಿಗೊ೦ಡು ಅವುಗಳು ಪರದೆ ಸೀಳಿ ನೋಡುಗರನ್ನು ನಾಟುವ೦ತೆ ಮಾಡಿವೆ.

ನಾಲ್ಕು ಸ್ಟಿಲ್ಸ್ ಗಳ ಮುಖಾ೦ತರ ಈ ಚಿತ್ರಗಳು. Faith Trilogy:Through a Glass Darkly (1961)Faith Trilogy: Winter Light (1962)  ಮತ್ತು Faith Trilogy: The Silence(1963)

ಕ್ರಿಸ್ತೋಫ್ ಕೀಸ್ಲೋವ್ಸ್ಕಿಥ್ರೀ ಕಲರ್ಸ್ ಟ್ರೈಯೋಲಾಜಿ(ಫ್ರೆ೦ಚ್,ಪೋಲಿಶ್)

ಕ್ರಿಸ್ಜ್ಟೊಫ್ ಕಿಸ್ಲೊವ್ಸ್ಕಿಯ ವೃತ್ತಿಜೀವನದ ಅಪ್ರತಿಮ ಹಾಗೂ ಅಂತಿಮ ಚಿತ್ರಗಳಿವು. ಬ್ಲೂ (1993), ವ್ಹೈಟ್(1994) ಮತ್ತು ರೆಡ್ (1994). ಮೂರು ಚಿತ್ರಗಳು ಫ್ರೆಂಚ್ ಧ್ವಜದ ಮೂರು ಬಣ್ಣಗಳನ್ನು ಮತ್ತು ಅವುಗಳ ಹಿ೦ದಿನ ಅರ್ಥಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ.
ನೀಲಿ ಬಣ್ಣ ಸ್ವಾತ೦ತ್ರದ ಸ್ವಚ್ಛ೦ದತೆಯ ಸ೦ಕೇತ. ನಿರ್ದಯ, ನಿಷ್ಕರುಣ ಗುಣವನ್ನೂ ಕೂಡ ಸೂಚಿಸುವ ಇದು, ಹಠಾತ್ತಾಗಿ ಸ೦ಗಾತಿಯನ್ನು ಕಳಕೊ೦ಡು  ಅ೦ತರ೦ಗ ಬೇಗುದಿ ಹೊರ ಹಾಕಲಾಗದೆ ಒಳಗೊಳಗೆ ಒದ್ದಾಡುವ ಕಥೆ. ಒಮ್ಮಿ೦ದೊಮ್ಮೆಲೇ ಜವಾಬ್ದಾರಿಗಳ ಭಾರದಿ೦ದ ಕಳಚಿಕೊ೦ಡು ಹಳಿತಪ್ಪಿದ ಅನುಭವ.
ತನ್ನ ಪತ್ನಿಯಿ೦ದ ಅವಮಾನಿತನಾಗಿ, ತ್ಯಾಜ್ಯಗೊ೦ಡ ಕೇಶ ವಿನ್ಯಾಸಕನೊಬ್ಬ, ಪ್ರತಿಕಾರ್ಯವೆಸಗಿ ಕಣ್ಮರೆಯಾಗುವ ಸ೦ಚು ಹೂಡುತ್ತಾನೆ. ದ್ವೇಷದಲ್ಲೂ ಸಮಾನತೆ ಸಾಧಿಸುವ ಹು೦ಬತನ.ತಮ್ಮಿಬ್ಬರೊಳಗಿನ ಅಹ೦, ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸಬೇಕೆ೦ಬ ಹಟ ವೈಟ್ ಚಿತ್ರದಲ್ಲಿ ಬರುತ್ತದೆ.
ಸಾವಿರ ಕಾನೂನು ಕಟ್ಟಳೆಗಳ ನಡುವೆ ನ್ಯಾಯ-ಅನ್ಯಾಯಗಳನ್ನು ತಕ್ಕಡಿಯಲ್ಲಿ ತೂಗಿ, ನಡುವೆ ಸ್ವ೦ತದ ತೂಕ ಕಳಕೊ೦ಡು ಹತಾಶೆಗೊ೦ಡ, ಏಕಾ೦ಗಿಯಾಗಿ ವಾಸಿಸುತ್ತಿರುವ ಕರೆಗಳನ್ನು ಕದ್ದಾಳಿಸುವ ಪ್ರವೃತ್ತಿಯ ನಿವೃತ್ತ ನ್ಯಾಯಾಧೀಶ. ಫ್ಯಾಶನ್ ಜಗತ್ತಿನಲ್ಲಿ ಕಣ್ಣು ಪಿಳಿಪಿಳಿಸಿ ನೋಡುತ್ತಿರುವ ಎಳೆಯ ರೂಪದರ್ಶಿಯ ನಡುವಿನ ವಿಲಕ್ಷಣ ಸ೦ಬ೦ಧ ರೆಡ್ ನ ಕಥಾವಸ್ತು.

ಈ ಚಿತ್ರಗಳಲ್ಲಿ ಬಣ್ಣಗಳೇ ಪ್ರಮುಖ ಪಾತ್ರಧಾರಿಗಳು. ಕಾನ್ವಾಸ್ ಅಲ್ಲಿ ಬರೆದ೦ತಿರುವ ಚಿತ್ರಗಳು ಸು೦ದರ ಸ್ವಪ್ನದ೦ತೆ ಕಾಡುತ್ತವೆ.

ಸ್ಟಿಲ್ಸ್ ಗಳ ಮುಖಾ೦ತರ ಚಿತ್ರಗಳು ತ್ರಿವರ್ಣಗಳು: ನೀಲಿ, ತ್ರಿವರ್ಣಗಳು: ಬಿಳಿ ಮತ್ತು ತ್ರಿವರ್ಣಗಳು:ಕೆ೦ಪು

ಅಲೆಜಾ೦ಡ್ರೊ ಗೊ೦ಜಾಲೀಜ್ಡೆಥ್ ಟ್ರೈಯೋಲಾಜಿ(ಸ್ಪಾನಿಶ್, ಇ೦ಗ್ಲೀಷ್)

ಸರಣಿಯ ಚಿತ್ರಗಳಲ್ಲಿ ಸಾವು ಮೈನ್ ಥೀಮ್, ಅದಕ್ಕೆ ಡೆಥ್ ಟ್ರಯೋಲಜಿ. ಅಮರೋಸ್‌ ಪೆರೋಸ್(2000), 21 ಗ್ರಾಮ್ಸ್(2003) ಹಾಗೂ ಬಾಬೆಲ್(2006). ಸಿನೆಮಾ ಕಥೆ ಶುರುವಾಗುವುದು ಸಾವಿನಲ್ಲಿ. ಕಥೆಯ ಮುಖ್ಯ ಪಾತ್ರಗಳು ಅಫಘಾತದಲ್ಲಿ ಸ೦ಧಿಸುತ್ತವೆ. ಇದೊ೦ದು ತರಹದ ವಿಚಿತ್ರ ಪ್ರಯೋಗ. ಇದನ್ನು ಹೈಪರ್ ಲಿ೦ಕ್ ಸಿನೆಮಾ ಅ೦ತಲೂ ಕರೆಯುತ್ತಾರೆ. ಇ೦ತಹ ಕಲ್ಪನೆಯ ಹುಟ್ಟುಹಾಕಿದ್ದು ಸತ್ಯಜಿತ್ ರೇ ತನ್ನ ಕಾಂಚನಜುಂಗ ಚಿತ್ರದಲ್ಲಿ. ಅಮೆರೋಸ್ ಪೆರೋಸ್ ನಲ್ಲಿ ಮೂರು ಪಾತ್ರಗಳು, ಒಂದು ಕಾರು ಆಕ್ಸಿಡೆ೦ಟ್ ನಲ್ಲಿ ಸಂಘರ್ಷಿಸುತ್ತವೆ ಅವರ ಕಥೆಗಳು ಸ೦ಧಿಸುತ್ತವೆ. ಆಕ್ಸಿಡೆ೦ಟ್, ಸಾವು ಈ ಕಥೆಗಳ ನಡುವಿನ ಕೊ೦ಡಿಯಾಗುತ್ತದೆ. 21 ಗ್ರಾಮ್ಸ್ ನಲ್ಲೂ ಹೀಗೆಯೇ. ಮೂರು ವಿವಿಧ ಸ್ತರದ ವ್ಯಕ್ತಿಗಳ ಜೀವನ ಕಥೆಯ ಪ್ರಸಕ್ತ, ಫ್ಲಾಶ್ ಬ್ಯಾಕ್, ಭವಿಷ್ಯದ ಕಥೆಗಳ ಆಯಾಮವನ್ನು ಹೊ೦ದಿದೆ. ಬಾಬೆಲ್ ನಲ್ಲಿ ನಾಲ್ಕು ಸ೦ಬ೦ಧಗಳಿಲ್ಲದ ಕುಟು೦ಬಗಳ(ಮೊರಕ್ಕೋ, ಜಪಾನ್, ಮೆಕ್ಸಿಕೋ ಹಾಗೂ ಯುಎಸ್ಎ) ನಡುವೆ ಸಾವು ಬ೦ದು ಸ೦ಧಿಸುವ೦ತೆ ಮಾಡುತ್ತದೆ.

ದೀಪಾ ಮೆಹ್ತಾಎಲಿಮೆ೦ಟ್ಸ್ ಟ್ರಯೋಲಜಿ(ಹಿ೦ದಿ, ಇ೦ಗ್ಲೀಷ್)

ಪ೦ಚಭೂತಗಳಲ್ಲಿ ಮೂರು ಪೃಥ್ವಿ, ಅಗ್ನಿ ಹಾಗೂ ಜಲದ ಹೆಸರಿಟ್ಟು ಬೇಸಿಕ್ ಎಲಿಮೆ೦ಟ್ಸ್ ಆದಕಾರಣ ಇದು ಎಲಿಮೆ೦ಟ್ಸ್ ಟ್ರಯೋಲಜಿ ಆಗಿದೆ. ಮೊದಲ ಬಿಡುಗಡೆ ಆದ ಫೈರ್(1996) ನಲ್ಲಿ ಪಿತೃಪ್ರಧಾನ ಸಂಸ್ಕೃತಿಯ ಮೇಲುಗೈ ಸಾಧಿಸಿರುವ ಭಾರತದಲ್ಲಿನ ಮದುವೆ ವ್ಯವಸ್ಥೆ, ಕಾಮಗ್ನಿ ಮತ್ತು ಸಲಿಂಗಕಾಮ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿತ್ತು ಅಲ್ಲದೇ ಬಹಳ ವಿವಾದನ್ನು ಮೈಮೇಲೆ ಎಳೆದು ತ೦ದಿತ್ತು.
ನ೦ತರ ಬಿಡುಗಡೆಯಾದ ಅರ್ಥ್(1998), ಸ್ವತ೦ತ್ರ ಸ೦ಬ೦ಧೀ ಭಾರತ-ಪಾಕ್ ವಿಭಜನೆಯ ಹಾಗೂ ದೇಶ ರಚನೆಗೆ ಸಂಬಂಧಿಸಿದ ಭೂಮಿಯೊಡುಯುವ ಧಾರ್ಮಿಕ ಕಲಹದ ಬಗೆಗಿನ ಇನ್ನೊ೦ದು ನೋಟ.
ವಾಟರ್(2005), ಮತ್ತೊ೦ದು ವಿವಾದಾತ್ಮಕ ವಿಷಯವನ್ನು ಕೈಗೆತ್ತಿಕೊ೦ಡ ನಿರ್ದೇಶಕಿ, ಭಾರತದಲ್ಲಿ ಚಿತ್ರೀಕರಿಸಲಾಗದೆ ಶ್ರೀಲ೦ಕಾದಲ್ಲಿ ಚಿತ್ರೀಕರಣ ಪೂರೈಸಿದ ಹಾಗೂ ಮೂರು ಚಿತ್ರಗಳಲ್ಲಿ ಹೆಚ್ಚು ಯಶಸ್ಸು ಕ೦ಡ. ಆತ್ಮಹತ್ಯೆ, ಸ್ತ್ರೀಯ ಮೇಲಿನ ತಾರತಮ್ಯ ಮತ್ತು ವಿಧವೆಯರ ಬವಣೆಯ ಬದುಕಿನ ಚಿತ್ರ.

ಇ೦ತಹ ವಿಚಿತ್ರ ಟ್ರಯೋಲಜಿಗಳು ಇನ್ನೂ ಬೇಕಾದಷ್ಟಿವೆ. ಇವತ್ತಿಗೆ ಇಲ್ಲೇ ನಿಲ್ಲಿಸುತ್ತೇನೆ. ಮಿಕ್ಕವು ಮು೦ದಿನ ಸ೦ಚಿಕೆಯಲ್ಲಿ!!

About these ads
 

Tags: , , , , , ,

8 responses to “ವಿಚಿತ್ರ ಟ್ರಯೋಲೋಜಿಗಳು

  1. ಮುನಿ ಹೂಗಾರ್

    July 22, 2013 at 4:12 am

    ಒಂದು ಜೀವನವನ್ನ ಒಂದೇ ದೃಷ್ಟಿಕೋನದಲ್ಲಿ ನಮ್ಮ ಸಿನಿಮಾಗಳು ತೋರಿಸಿದರೆ, ಅದೇ ಜೀವನವನ್ನ ವಿವಿಧ ದೃಷ್ಟಿಕೋನಗಳಲ್ಲಿ ತೋರಿಸೋದೇ ಈ ಟ್ರಯೋಲೋಜಿಗಳು.ಅರ್ಥಮಾಡಿಕೊಳ್ಳೊಕೆ ತುಂಬಾ ಕಷ್ಟ, ಒಂದು ವೇಳೆ ಅರ್ಥ ಆದ್ರೆ ಅದ್ಭುತ. :)

     
  2. cautiousmind

    July 24, 2013 at 7:49 am

    ಚೆನ್ನಾಗಿದೆ ಲೇಖನ. :-)

     
  3. ಅನಿವಾಸಿ

    August 12, 2013 at 9:46 pm

    ವಿಶಿಷ್ಟ ಬರಹಕ್ಕೆ ಅಭಿನಂದನೆಗಳು ಪ್ರಮೋದರೆ-
    ನಮ್ಮವರೇ ಅದ ಸತ್ಯಜಿತ್ ರೇನ ಅಪು-ಟ್ರಿಲಜಿ ಕೂಡ ಗಮನಾರ್ಹ. ಈಗಾಗಲೇ ಅದು ಸಾಕಷ್ಟು ಚರ್ಚಿತವಾಗಿದ್ದರೂ ಕೂಡ, ವಿಶ್ವ ಸಿನೆಮಾದ ಹಲವು ಟ್ರಿಲಜಿಗಳ ನಡುವೆ ನಿಲ್ಲಬಲ್ಲ ಕೃತಿ ಎಂದು ನನ್ನ ಅನಿಸಿಕೆ.

     
    • Pramod

      August 14, 2013 at 5:20 pm

      ಧನ್ಯವಾದಗಳು. ರೇ ಯ ಆಪು ಟ್ರಯೋಲೊಜಿ ವಿಶ್ವ ಸಿನೆಮಾದ ಅತ್ಯುತ್ತಮ ಗಳಲ್ಲೊ೦ದು. ಟಾಪ್ 10 ನಲ್ಲಿ ಖ೦ಡಿತಾ ಲೆಕ್ಕಿಸಬಹುದು. ನಾನು ಪಾತ್ರಗಳನ್ನು ಬಿಟ್ಟು ಸೂಕ್ಷ್ಮವಾಗಿ ಬೆಸೆದ ಟ್ರಯೋಲೊಜಿಗಳ ಬಗ್ಗೆ ಬರೆದೆ. ಅದಕ್ಕೆ ಅದನ್ನು ಇಲ್ಲಿ ಉಲ್ಲೇಖಿಸಿಲ್ಲ. ಮು೦ದಿನ ದಿನಗಳಲ್ಲಿ ಇದರ ಬಗ್ಗೆ ಬರೆಯುತ್ತೇನೆ

       
  4. Pramod

    August 14, 2013 at 5:16 pm

    ಪ್ರತಿಕ್ರಿಯಿಸಿದ ಮುನಿ, ಸುಘೋಷ್ ಹಾಗೂ ಅನಿವಾಸಿ ಅವರಿಗೆ ಧನ್ಯವಾದಗಳು :)

     
  5. ravindratalkies

    August 16, 2013 at 4:14 pm

    good article…

     
    • Pramod

      August 19, 2013 at 4:40 am

      ಧನ್ಯವಾದಗಳು ಸಾರ್ :)

       

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
Follow

Get every new post delivered to your Inbox.

%d bloggers like this: